ಚಿತ್ರದುರ್ಗ: ದಾಖಲೆ ರಹಿತ ಜನವಸತಿಗಳನ್ನು (ಬೇಚರಾತ್) ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ಆರು ವರ್ಷಗಳಿಂದ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಇದುವರೆಗೆ ಕೇವಲ ಎರಡು ಗ್ರಾಮಗಳನ್ನು ಮಾತ್ರ ಪರಿವರ್ತನೆ ಮಾಡಲಾಗಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2014ಕ್ಕಿಂತ ಮೊದಲು ರಾಜ್ಯದಲ್ಲಿರುವ ಬೇಚರಾತ್ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಭಿವೃದ್ಧಿಪಡಿಸುವುದಾಗಿ ಹಿಂದಿನ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ಇದ್ದಲ್ಲೇ ಇದೆ. ಈಗ ಸರ್ಕಾರ ಹತ್ತು ಕುಟುಂಬಗಳಿಗಿಂತ ಹೆಚ್ಚಿನ ಮನೆಗಳಿರುವ ವಸತಿ ಪ್ರದೇಶಗಳ ಸರ್ವೆ ಮಾಡಲು ಮತ್ತೂಂದು ಆದೇಶ ಹೊರಡಿಸಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಬೇಚರಾತ್ ಗ್ರಾಮಗಳಿದ್ದು, ಶೇ. 25 ಗ್ರಾಮಗಳನ್ನು ಅಂತಿಮ ನೊಟಿμಕೇಶನ್‌ಗೆ ಕಳಿಸಲಾಗಿದೆ. ಇದರಲ್ಲಿ 80 ಮಾತ್ರ ಫೈನಲ್ ನೋಟಿಫಿಕೇಶನ್ ಆಗಿವೆ. ಹಿರಿಯೂರು ತಾಲೂಕಿನಲ್ಲಿ 84 ಬೇಚರಾತ್ ಗ್ರಾಮಗಳಿವೆ. ಚಿತ್ರದುರ್ಗ 68, ಚಳ್ಳಕೆರೆ 44, ಹೊಸದುರ್ಗ 58, ಹೊಳಲ್ಕೆರೆ 17 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 11 ಗ್ರಾಮಗಳಿವೆ. ಇದರಲ್ಲಿ ಹಿರಿಯೂರು 23, ಚಿತ್ರದುರ್ಗ 28, ಚಳ್ಳಕೆರೆ 18, ಹೊಸದುರ್ಗ 24, ಹೊಳಲ್ಕೆರೆ 14, ಮೊಳಕಾಲ್ಮೂರು 8 ಪ್ರಾಥಮಿಕ ಹಂತದ ನೋಟಿಫಿಕೇಶನ್ ಆಗಿವೆ ಎಂದು ತಿಳಿಸಿದರು.
ಸರ್ವೆಗೆ ಸ್ವಂತ ಹಣ ಕೊಡುವೆ: ಅಂತಿಮ ಅನುಮೋದನೆ ಪಡೆದ ಬೇಚರ ಗ್ರಾಮಗಳ
ಗ್ರಾಮಗಳ ನಕ್ಷೆ ತಯಾರಾಗಬೇಕು. ಅದರಲ್ಲಿ ಜಾತಿವಾರು, ಮನೆ, ರಸ್ತೆ, ದೇವಸ್ಥಾನ, ಸರ್ಕಾರಿ
ಜಮೀನು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಹಾಗೂ ಪ್ರತಿ ವ್ಯಕ್ತಿಯೂ ಹೊಂದಿರುವ ಖಾಸಗಿ ಜಮೀನು ಸೇರಿದಂತೆ ಮುಂತಾದ ಅಂಶಗಳು ನಕ್ಷೆಯಲ್ಲಿ ದಾಖಲಾಗಿರಬೇಕು ಎಂದು ಸಂಸದರು ಸೂಚಿಸಿದರು.
ಅಂತಿಮ ನೋಟಿಫಿಕೇಶನ್ ಆಗಿರುವ ಗ್ರಾಮಗಳ ಸರ್ವೆ ಮಾಡಬೇಕು. ಆದರೆ ಸರ್ಕಾರಿ ಅಧಿಕಾರಿಗಳು ಸರ್ವೆ ಮಾಡುವುದನ್ನು ವಿಳಂಬ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಸ್ವಂತ ಹಣದಿಂದ ಕ್ಯಾಡ್ ಕಂಪನಿಯವರಿಂದ ಸರ್ವೆ ಮಾಡಿಸುತ್ತೇನೆ. ಒಂದು ತಿಂಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸುವ ಗುರಿ ಇದೆ ಎಂದರು.
ಸಭೆಯಲ್ಲಿ ಜಿಲ್ಲಾ ಧಿಕಾರಿ ಆರ್. ವಿನೋತ್ ಪ್ರಿಯಾ, ಅಪರ ಜಿಲ್ಲಾ ಧಿಕಾರಿ ಸಿ. ಸಂಗಪ್ಪ, ಡಿಡಿಪಿಐ ಕೆ. ರವಿಶಂಕರ ರೆಡ್ಡಿ, ತಹಶೀಲ್ದಾರ್ ವೆಂಕಟೇಶಯ್ಯ ಸೇರಿದಂತೆ ಕಂದಾಯ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.