Advertisement

ಶಾಲೆಗಳ ಅಭಿವೃದ್ಧಿಗೆ ಸಮಿತಿ ರಚನೆ

03:52 PM Nov 09, 2019 | Naveen |

ಚಿತ್ರದುರ್ಗ: ಜಿಲ್ಲೆಯ ಆರು ತಾಲೂಕುಗಳಲ್ಲಿ ಅಭಿವೃದ್ಧಿಯಾಗಬೇಕಿರುವ ಪ್ರತಿ ಹೋಬಳಿಗೆ ಎರಡು ಶಾಲೆಗಳ ಪಟ್ಟಿ ತಯಾರಿಸಿ ವರದಿ ನೀಡಿದರೆ ಅಭಿವೃದ್ಧಿಗೆ ಅಗತ್ಯವಿರುವ ಹಣವನ್ನು ಒದಗಿಸಿಕೊಡುವುದಾಗಿ ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಭಿವೃದ್ಧಿಯಾಗಬೇಕಿರುವ ಶಾಲೆಗಳ ಪಟ್ಟಿ ತಯಾರಿಸಲು ಜಿಲ್ಲಾ ಧಿಕಾರಿ, ತಹಶೀಲ್ದಾರ್‌ ಹಾಗೂ ಬಿಇಒಗಳನ್ನು ಒಳಗೊಂಡಿರುವ ಸಮಿತಿ ರಚಿಸಬೇಕು. ಜಿಲ್ಲೆಯ ಆರು ತಾಲೂಕುಗಳಲ್ಲೂ ಅಭಿವೃದ್ಧಿಯಾಗಬೇಕಿರುವ ಶಾಲೆಗಳ ಪಟ್ಟಿ ತಯಾರಿಸಿ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಹೋಬಳಿಗೆ ಎರಡು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾದರಿ ಶಾಲೆಗಳನ್ನಾಗಿ ರೂಪಿಸಬೇಕು. ಶಾಲೆಯಲ್ಲಿರುವ ಒಟ್ಟು ಮಕ್ಕಳು, ಅಗತ್ಯವಿರುವ ದುರಸ್ತಿ ಕಾರ್ಯ, ಕಟ್ಟಡ ಕಾಮಗಾರಿ, ಗೋಡೆಗಳಿಗೆ ಬಣ್ಣ ಸೇರಿದಂತೆ ಕುಂದುಕೊರತೆಗಳನ್ನು ಪಟ್ಟಿ ಮಾಡಬೇಕು. ಅದಕ್ಕೆ ಅವಶ್ಯವಿರುವ ಅನುದಾನದ ಕುರಿತ ಕರಡು ವರದಿಯನ್ನು ಒಂದು ವಾರದೊಳಗೆ ಸಲ್ಲಿಸಿ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ಅವರಿಗೆ ತಿಳಿಸಿದರು.

ಮುಂದಿನ ಜೂನ್‌ ತಿಂಗಳೊಳಗೆ ಶಾಲೆಗಳ ಕಾಮಗಾರಿ ಮುಗಿದು ಹೊಸ ಶಾಲೆಯಂತಾಗಬೇಕು. ಗುಣಮಟ್ಟದ ಗೋಡೆ, ಕೊಠಡಿ, ಕಾಂಪೌಂಡ್‌, ಬಣ್ಣ ಹಾಕಿಸಬೇಕು. ದೀರ್ಘ‌ ಕಾಲ ಶಾಲೆ ಗಟ್ಟಿಯಾಗಿ ನಿಲ್ಲುವಂತೆ ಮಾಡಬೇಕು. ಶಾಲೆ ಕಾಮಗಾರಿ ವೇಳೆ ಯಾವ ಕಾರಣಕ್ಕೂ ಮರಗಳನ್ನು ಕಡಿಯಬಾರದು.

ಶಾಲೆಗಳ ಆಯ್ಕೆ ಮುಗಿಸಿ 15 ದಿನಗಳಲ್ಲಿ ಕೆಲಸ ಪ್ರಾರಂಭಿಸಬೇಕು ಎಂದರು. ಜಿಲ್ಲೆಯ ಆದರ್ಶ ಶಾಲೆಗಳಿಗೂ ಪ್ರತ್ಯೇಕ ಕಟ್ಟಡ ಕಟ್ಟಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿರುವ ಕಳಪೆ ರಸ್ತೆಗಳು, ಸ್ಥಿತಿಗತಿ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

Advertisement

ಜಿಲ್ಲೆಯಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳ ಕಾರ್ಯವೈಖರಿ, ಈಗಿನ ಸ್ಥಿತಿಗತಿ ಹಾಗೂ ಮಾದರಿ ಶಾಲೆಗಳ ಕುರಿತ ಸಮಗ್ರ ಮಾಹಿತಿಯನ್ನು ಒಂದು ವಾರದೊಳಗಾಗಿ ನೀಡಬೇಕು. ತಪ್ಪಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಿಪಂ ಸಿಇಒ ಸಿ. ಸತ್ಯಭಾಮ ಮಾತನಾಡಿ, ಹೊಳಲ್ಕೆರೆ ತಾಲೂಕಿನ ಬಿದರಕೆರೆ ಶಾಲೆಯಲ್ಲಿ ಸಮರ್ಪಕ ಶೌಚಾಲಯವಿಲ್ಲ. ಅಲ್ಲಿನ ಶಿಕ್ಷಕರು ಸುಮಾರು 10 ವರ್ಷದಿಂದ ಕೆಲಸ ಮಾಡುತ್ತಿದ್ದರೂ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ.  ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಕಟ್ಟಡ ನಿರ್ಮಾಣವಾಗಬೇಕಿರುವ ಶಾಲೆಗಳು, ದುರಸ್ತಿ ಕಾರ್ಯ, ಅವಶ್ಯವಿರುವ ಕೊಠಡಿಗಳು, ಕಾಂಪೌಂಡ್‌ ಬಗ್ಗೆ ಆದ್ಯತೆ ಮೇರೆಗೆ ವರದಿ ತಯಾರಿಸಿ ತಹಶೀಲ್ದಾರರಿಗೆ ನೀಡಬೇಕು. ಈ ಕಾರ್ಯ ಒಂದು ವಾರದೊಳಗಾಗಿ ಮುಗಿಯಬೇಕು ಎಂದು ಹೇಳಿದರು.

ಡಿಡಿಪಿಐ ರವಿಶಂಕರ್‌ ರೆಡ್ಡಿ ಮಾತನಾಡಿ, ಜಿಲ್ಲೆಯ ಶಾಲೆಗಳ ಪಟ್ಟಿ ಸಿದ್ಧವಿದೆ. ಜಿಲ್ಲೆಯಲ್ಲಿ 180 ಶಾಲೆಗಳಿದ್ದು, 273 ಕೊಠಡಿಗಳ ಅವಶ್ಯಕತೆಯಿದೆ ಎಂದು ತಿಳಿಸಿದರು.

ಚಿತ್ರದುರ್ಗ ವ್ಯಾಪ್ತಿಯಲ್ಲಿರುವ ಹೋಬಳಿಗೆ ಎರಡು ಶಾಲೆಗಳ ಆಯ್ಕೆ, ನೀಲನಕ್ಷೆ ಕುರಿತ ಮಾಹಿತಿ ನೀಡಲು ಲೋಕೋಪಯೋಗಿ ಇಲಾಖೆಗೆ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ತಾಲೂಕುಗಳಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಚಳ್ಳಕೆರೆ ವ್ಯಾಪ್ತಿಯಲ್ಲಿ ನಿರ್ಮಿತಿ ಕೇಂದ್ರ, ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು.

ಸಭೆಯಲ್ಲಿ ಜಿಪಂ ಕಾರ್ಯದರ್ಶಿ ಸಯ್ಯದ್‌ ಮಹಮ್ಮದ್‌ ಮುಬಿನ್‌, ಮುಖ್ಯ ಯೋಜನಾಧಿಕಾರಿ ಶಶಿಧರ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next