Advertisement

ಪ್ರಜಾಪ್ರಭುತ್ವದ ರಕ್ಷಣೆ ಮಾಧ್ಯಮಗಳ ಹೊಣೆ

11:31 AM Jul 21, 2019 | Team Udayavani |

ಚಿತ್ರದುರ್ಗ: ಪಂಚೇಂದ್ರಿಯ ವಂಚಿತ ಪ್ರಜಾಪ್ರಭುತ್ವದ ವ್ಯವಸ್ಥೆ ಕಾಲದಲ್ಲಿ ನಾವಿದ್ದು ಪ್ರಜಾಪ್ರಭುತ್ವದ ರಕ್ಷಣೆಗೆ ಮಾಧ್ಯಮಗಳು ಜವಾಬ್ದಾರಿಯಿಂದ ಕರ್ತವ್ಯ ಮಾಡುವುದು ಅತೀ ಮುಖ್ಯವಾಗಿದೆ ಎಂದು ಬಂಡಾಯ ಸಾಹಿತಿ, ಚಿಂತಕ ಡಾ.ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.

Advertisement

ಇಲ್ಲಿನ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ರೋಚಕತೆ ಮತ್ತು ರಚನಾತ್ಮಕತೆ ಕುರಿತು ಚರ್ಚೆಯಾಗುತ್ತಿದೆ. ಇದರ ಜತೆಯಲ್ಲಿ ದೃಶ್ಯ ಮಾಧ್ಯಮಗಳು ರೋಮಾಂಚನೆಗೆ ಒಳಗಾಗುತ್ತಿವೆ. ಟಿ.ವಿ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳ ನಡುವೆ ಸ್ಪರ್ಧೆ ಆರೋಗ್ಯಕ ರವಾಗಿರಬೇಕು. ಟಿ.ವಿ.ಮಾಧ್ಯಮ ಕೆಲವೊಮ್ಮೆ ಅವಘಡಗಳನ್ನುಂಟು ಮಾಡುತ್ತದೆ. ಆದರೆ ಮುದ್ರಣ ಮಾಧ್ಯಮಕ್ಕೆ ತಾಳ್ಮೆಯಿದೆ. ಹಾಗಾಗಿ ರೋಚಕತೆ ರಚನಾತ್ಮಕ ಮುಖಾಮುಖೀ ನಡೆಯುತ್ತಿದೆ. ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಸಾಮಾಜಿಕ ಜವಾಬ್ದಾರಿ, ನೈತಿಕತೆ ಹುಟ್ಟುತ್ತದೆ. ಮಾಧ್ಯಮಕ್ಕೆ ಸಂವೇದನೆ ಇದ್ದರೆ ಉದ್ಯಮಕ್ಕೆ ಸಂಪಾದನೆ ಮುಖ್ಯವಾಗಿರುತ್ತದೆ. ಉದ್ದಿಮೆ ಮತ್ತು ಲಾಭ ಮುಖ್ಯ ಎನಿಸಿದಾಗ ರಚನಾತ್ಮಕತೆ ಮಾಯವಾಗಲಿದೆ ಎಂದು ತಿಳಿಸಿದರು.

ಹದಿನಾರು ಸಾವಿರ ಪತ್ರಿಕೆಗಳು ದೇಶದಲ್ಲಿದ್ದು, ಭಾರತದಲ್ಲಿ ಪ್ರತಿನಿತ್ಯವೂ ಹದಿನಾಲ್ಕು ಕೋಟಿ ಜನ ಪತ್ರಿಕೆ ಓದುತ್ತಾರೆ. 1250 ಸಿನಿಮಾ ದೇಶದಲ್ಲಿ ವರ್ಷಕ್ಕೆ ತಯಾರಾಗುತ್ತಿದೆ. ಹದಿನೈದು ಸಾವಿರ ಸ್ಕ್ರೀನ್‌ಗಳಿವೆ. ಫೇಸ್‌ಬುಕ್‌ ಐವತ್ತು ಲಕ್ಷವಿದೆ. ತಂತ್ರಜ್ಞಾನ ಜ್ಞಾನವಾಗಿರುವ ಬದಲು ಉದ್ಯಮವಾಗಿದೆ. ಮಾಧ್ಯಮ ಲೋಕದಲ್ಲಿ ಜಾಹೀರಾತಿಕರಣ ಕಾಲಿಟ್ಟಿರುವ ಇಂದಿನ ದಿನಗಳಲ್ಲಿಯೂ ಮುದ್ರಣ ಮಾಧ್ಯಮ ನೈತಿಕತೆ ಉಳಿಸಿಕೊಂಡಿರುವುದೇ ಸಮಾಧಾನದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಿಕೆಗಳನ್ನು ನಡೆಸುತ್ತಿರುವ ಮಾಲೀಕರು ಕೆಲವರು ರಾಜಕಾರಣಿಗಳಾಗಿದ್ದಾರೆ. ಹಾಗಾಗಿ ಅಲ್ಲಿ ಕೆಲಸ ಮಾಡುವವರು ಸಂಕಟ ಅನುಭವಿಸುವಂತಾಗಿದೆ. ಪ್ರಜಾಪ್ರಭುತ್ವ ಜನರ ಪರವಾಗಿರಬೇಕು. ತಾಂತ್ರಿಕ ಪ್ರಜಾಪ್ರಭುತ್ವ-ತಾತ್ವಿಕ ಪ್ರಜಾಪ್ರಭುತ್ವವಿದೆ. ಸೈದ್ದಾಂತಿಕ ರಾಜಕಾರಣದಿಂದ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದರು.

ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಹೊರನೋಟಕ್ಕಿಂತ ಒಳನೋಟ ಬೇಕು. ವ್ಯಕ್ತಿ ಎಂದ ಮೇಲೆ ಅಭಿವ್ಯಕ್ತಿ ಇರಲೇಬೇಕು. ವ್ಯಕ್ತಿಗಳಾಗುವುದು ಸುಲಭ. ಅಭಿವ್ಯಕ್ತಿಗಳಾಗುವ ಹಾದಿ ಕಷ್ಟ. ಅನೇಕ ಸವಾಲುಗಳಿಂದ ಕೂಡಿದೆ. ಬೆದರಿಸುವ ಅಭಿವ್ಯಕ್ತಿ ಇರಬಾರದು. ಮಾಧ್ಯಮ ರಂಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬೆದರಿಸುವವರಿದ್ದಾರೆ. ಇದು ಅನಾರೋಗ್ಯಕರ ಎಂದು ವಿಷಾದಿಸಿದರು.

Advertisement

ವ್ಯಂಗ್ಯ ಅಭಿವ್ಯಕ್ತಿಯೂ ಇದೆ. ರೋಚಕತನಕ್ಕೆ ಮಿತಿಯಿರಬೇಕು. ಮುಕ್ತ ಅಭಿವ್ಯಕ್ತಿಯಲ್ಲಿ ಸತ್ಯದ ದರ್ಶನವಿರುತ್ತದೆ. ಅವಲೋಕನ ಮಾಡಿಕೊಳ್ಳಬೇಕು. ಬರೆಯುವವರಿಗೆ ಬದುಕು, ಭಾವನೆ, ಉದ್ದೇಶ, ಅವಕಾಶಗಳಿವೆ. ಕೆಲವೊಮ್ಮೆ ಬರೆಯುವವರು ತಲ್ಲಣ, ಗೊಂದಲಗಳಿಗೆ ಒಳಗಾಗುತ್ತಾರೆ. ಆರೋಗ್ಯಪೂರ್ಣ ಸಮಾಜಕ್ಕೆ ಪತ್ರಕರ್ತರ ಪಾತ್ರ ಮುಖ್ಯ. ಉತ್ತಮ ಅಭಿವ್ಯಕ್ತಿ ಪ್ರತಿಪಾದಿಸುವ ನಿಟ್ಟಿನಲ್ಲಿ ಅಧ್ಯಯನ ಶೀಲರಾಗಬೇಕು. ಅನುಭವಗಳು ವ್ಯಕ್ತಿಯನ್ನು ದೊಡ್ಡವನಾಗಿ ಮಾಡುತ್ತವೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಲಕ್ಷ್ಮಣ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ನರೇನಹಳ್ಳಿ ಅರುಣಕುಮಾರ್‌, ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜ್‌, ದಿನೇಶ್‌ ಗೌಡಗೆರೆ, ಮೇಘ ಗಂಗಾಧರ ನಾಯ್ಕ ಇದ್ದರು.

ಸಾಹಿತಿ ಬಿ.ಎಲ್.ವೇಣು, ಲೋಕೇಶ್‌ ಅಗಸನಕಟ್ಟೆ, ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಸೇರಿದಂತೆ ಜಿಲ್ಲೆಯ ಅನೇಕ ಪತ್ರಕರ್ತರು ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next