Advertisement

ಬಾಲ್ಯವಿವಾಹ-ಬಾಲಕಾರ್ಮಿಕ ಪದ್ಧತಿ ತಡೆಗೆ ಕ್ರಮ

11:16 AM Jul 28, 2019 | Naveen |

ಚಿತ್ರದುರ್ಗ: ಬಾಲ್ಯವಿವಾಹ ತಡೆಗಟ್ಟುವುದು, ಶಾಲೆಯಿಂದ ಹೊರಗಿರುವ ಮಕ್ಕಳನ್ನು ಶಾಲೆಗೆ ಪುನಃ ಕರೆ ತರುವುದು ಮತ್ತು ಬಾಲಕಾರ್ಮಿಕ ಪದ್ಧತಿ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕಾರ್ಯಪಡೆ ರಚಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ ಹೇಳಿದರು.

Advertisement

ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮೂರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಶಾಲಾ ಶಿಕ್ಷಕರು, ವಿಮುಕ್ತಿ ವಿದ್ಯಾಸಂಸ್ಥೆ ಕಾರ್ಯಕರ್ತರು, ಡಾನ್‌ಬಾಸ್ಕೋ ಸಂಸ್ಥೆ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ನಿಯಮಾನುಸಾರ ಬಾಲಕಾರ್ಮಿಕರು, ಬಾಲ್ಯವಿವಾಹ ಮತ್ತು ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಇದನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಲಾಗುತ್ತದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಆ. 1 ರಿಂದ ಪ್ರತಿ ಮನೆಯ ಸರ್ವೆ ಕಾರ್ಯವನ್ನು ಶಿಕ್ಷಕರು, ಸ್ವಯಂಸೇವಾ ಸಂಸ್ಥೆಗಳ ಸಿಬ್ಬಂದಿಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮದ ಕಾರ್ಯಪಡೆ ಮುಖ್ಯಸ್ಥರಾದ ಯುವಜನರು, ಎಸ್‌ಡಿಎಂಸಿ ಸದಸ್ಯರ ನೇತೃತ್ವದಲ್ಲಿ ಆರಂಭಿಸಲಾಗುತ್ತದೆ. ಬಾಲಕಾರ್ಮಿಕ ಮುಕ್ತ ಪಂಚಾಯತ್‌ಗಳನ್ನಾಗಿಸಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ವಿಮುಕ್ತಿ ವಿದ್ಯಾಸಂಸ್ಥೆ ನಿರ್ದೇಶಕ ಆರ್‌. ವಿಶ್ವಸಾಗರ್‌ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಾಗಿ 2019ರ ಶಿಕ್ಷಣ ನೀತಿ ಎಂಬ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಶಾಲೆಗಳು ಮತ್ತು ಗ್ರಾಮ ಮಟ್ಟಕ್ಕೆ ತಲುಪಿಸಿದೆ. ಇದಕ್ಕೆ ಶಿಕ್ಷಕರು, ಸಾರ್ವಜನಿಕರು, ಎಸ್‌ಡಿಎಂಸಿ, ಮಹಿಳಾ ಸ್ವಸಹಾಯ ಸಂಘಗಳು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು ಎಂದರು.

ವಿಮುಕ್ತಿ ವಿದ್ಯಾಸಂಸ್ಥೆಯ ಅರಣ್ಯ ಸಾಗರ್‌ ಮಾತನಾಡಿ, ತಮಿಳುನಾಡಿನ ಜಿಲ್ಲೆಯೊಂದನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಪ್ರಯತ್ನ ನಡೆದಿದೆ. ಸಮುದಾಯ ಸಹಭಾಗಿತ್ವದಲ್ಲಿ ಶಿಕ್ಷಣ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ಸಾಮಾಜಿಕ ಕಾರ್ಯಕರ್ತ ನರೇನಹಳ್ಳಿ ಅರುಣ್‌ಕುಮಾರ್‌ ಮಾತನಾಡಿ, ಸರ್ಕಾರಿ ಶಾಲೆಗಳ ಬಲವರ್ಧನೆ ಮತ್ತು ಪ್ರೊ| ಎಸ್‌.ಜಿ. ಸಿದ್ದರಾಮಯ್ಯ ವರದಿ ಜಾರಿಗಾಗಿ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಲಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಮನವಿ ಮಾಡಿದರು.

ಡಾನ್‌ಬಾಸ್ಕೋ ಸಂಸ್ಥೆಯ ವೀಣಾ, ಮಠದಕುರುಬರಹಟ್ಟಿ, ಲಕ್ಷ್ಮೀಸಾಗರ, ಮೆದೇಹಳ್ಳಿ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಗ್ರಾಮಗಳನ್ನು ಬಾಲಕಾರ್ಮಿಕ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ನಿರ್ಣಯಿಸಲಾಯಿತು. ಹಾಗೆಯೇ ಜು. 31ರೊಳಗೆ ಕಾರ್ಯಸೂಚಿ ರೂಪಿಸಲು ಎಂ.ಕೆ. ಹಟ್ಟಿ ಗ್ರಾಮ ಪಂಚಾಯತ್‌ದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಬಿಆರ್‌ಸಿ ಈಶ್ವರಪ್ಪ, ದೇವರಾಜ್‌, ಹೊನ್ನೂರಪ್ಪ, ಜಲಜಾಕ್ಷಿ, ವಿಮುಕ್ತಿ ವಿದ್ಯಾಸಂಸ್ಥೆಯ ಕುಮಾರ್‌, ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಉಪಾಧ್ಯಾಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next