ಚಿತ್ರದುರ್ಗ: ಗ್ರಾಹಕರಿಗೆ ಗರಿಷ್ಠ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಂಚೆ ನೌಕರರು ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಮೂಲಕ ಗ್ರಾಹಕ ಸ್ನೇಹಿಯಾಗಬೇಕು ಎಂದು ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ಶಿವರಾಜ್ ಖೀಂಡಿಮs್ ಹೇಳಿದರು.
ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಅಖೀಲ ಭಾರತ ಅಂಚೆ ನೌಕರರ ಸಂಘಗಳ ಮೂರನೇ ಹಾಗೂ ನಾಲ್ಕನೇ ವರ್ಗ, ಗ್ರಾಮೀಣ ಅಂಚೆ ನೌಕರರ ಸಂಘಗಳ 39ನೇ ಜಂಟಿ ದ್ವೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಚೆ ನೌಕರರು ಸರ್ಕಾರ ಹಾಗೂ ಗ್ರಾಹಕರ ಹಿತಕ್ಕೆ ಧಕ್ಕೆ ಉಂಟಾಗದಂತೆ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶಗಳ ಅಂಚೆ ಕಚೇರಿಯಲ್ಲಿ ತಾಂತ್ರಿಕತೆ ಅಳವಡಿಸಲಾಗುತ್ತಿದ್ದು, ಅಂಚೆ ಇಲಾಖೆಗೆ ಆಧುನಿಕ ಯಂತ್ರೋಪಕರಣ ನೀಡಲಾಗಿದೆ ಎಂದರು.
ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟನೆ ಪ್ರಮುಖವಾಗಿದೆ. ಸಂಘಟನೆ ಹೋರಾಟದ ಮೂಲಕ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಹೀಗಾಗಿ ಯಾವುದೇ ಬೇಡಿಕೆ ಈಡೇರಿಸಿಕೊಳ್ಳಲು ಶಾಂತಿಯುತವಾಗಿ ನಡೆದುಕೊಳ್ಳಬೇಕಿದೆ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಿದ ಬಳಿಕ ನೌಕರರಿಗೆ ವೇತನ ಹೆಚ್ಚಳವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಚೆ ನೌಕರರ ಸಂಘದ ಕರ್ನಾಟಕ ವಲಯ ನಾಲ್ಕನೇ ವರ್ಗದ ವಲಯ ಕಾರ್ಯದರ್ಶಿ ಪಿ. ಮಲ್ಲಿಕಾರ್ಜುನ ಮಾತನಾಡಿ, ನಮ್ಮ ಸಂಘಟನೆಗೆ ದೊಡ್ಡ ಶಕ್ತಿ ಇದೆ. ಅಂಚೆ ನೌಕರರ ಸಮಸ್ಯೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸರ್ಕಾರ ಬದಲಾವಣೆಯಾದರೂ ಸಹ ನೌಕರರ ಬೇಡಿಕೆ ಈಡೇರಿಕೆಗೆ ಒಗ್ಗೂಡಿ ಕೆಲಸ ಮಾಡಬೇಕಿದೆ. ಸಂಘಟನೆ ಯಾವುದೇ ಪಕ್ಷದೊಂದಿಗೆ ವಿಲೀನವಾಗದೆ ರಾಜಕೀಯೇತರ ಸಂಘಟನೆಯಾಗಿದೆ ಎಂದರು.
ಗ್ರಾಮೀಣ ಭಾಗದ ಅಂಚೆ ನೌಕರರು ಸೇರಿದಂತೆ ಅಂಚೆ ಇಲಾಖೆಯ ಎಲ್ಲ ನೌಕರರ ಹಿತಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ಸಂಘಟಿತ ಹೋರಾಟ ಮಾಡಿದರೆ ನಮ್ಮೆಲ್ಲರ ಬೇಡಿಕೆ ಈಡೇರಲಿವೆ. ಯುವ ನೌಕರರು ಸಕ್ರಿಯವಾಗಿ ಹೋರಾಟಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಚೆ ನೌಕರರ ಸಂಘದ ರಾಷ್ಟ್ರೀಯ ಕಾರ್ಯಧ್ಯಕ್ಷ ಜಿ. ಜಾನಕಿರಾಮ್, ಗ್ರಾಮೀಣ ಅಂಚೆ ನೌಕರರ ವಲಯ ಕಾರ್ಯದರ್ಶಿ ಬಿ.ಆರ್. ರಮೇಶ, ಅಖೀಲ ಭಾರತ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ. ವಿಜಯಕುಮಾರ್, ಕಾರ್ಯದರ್ಶಿ ಜಯಣ್ಣ, ಸಹ ಕಾರ್ಯದರ್ಶಿ ಮಹಮ್ಮದ್ ಷರೀಫ್, ಖಚಾಂಚಿ ಸತ್ಯಲಕ್ಷ್ಮೀ, ತಿಮ್ಮರಾಯಪ್ಪ, ಅವಿನಾಶ್, ಸುರೇಶ್, ಮಧುಸೂದನ್, ರಮೇಶ್, ರಂಗಸ್ವಾಮಿ, ತಿಮ್ಮಣ್ಣ, ಬಸವರಾಜಪ್ಪ ಇದ್ದರು.