Advertisement

ಭಯ ಪಡದೆ ಪರೀಕ್ಷಾ ಸಿದ್ಧತೆ ನಡೆಸಿ

12:49 PM Apr 22, 2020 | Naveen |

ಚಿತ್ರದುರ್ಗ: ಕೋವಿಡ್ ಲಾಕ್‌ಡೌನ್‌ ಮೇ 3 ರವರೆಗೆ ಇರಲಿದೆ. ಆನಂತರದ ಪರಿಸ್ಥಿತಿಯನ್ನ ಅವಲೋಕಿಸಿ ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ಹೇಳಿದರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವೇಳಾಪಟ್ಟಿ ಹಾಗೂ ಪರೀಕ್ಷೆ ನಡೆಸುವ ಕುರಿತಂತೆ ಊಹಾಪೋಹ, ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂದರು. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲಗಳಿರುವುದು ಸಹಜ. ಆದರೆ ರಾಜ್ಯದಲ್ಲಿ ಮೇ 3ರ ವೇಳೆಗೆ ವೈರಸ್‌ ಸೋಂಕಿನ ಸ್ಥಿತಿ ಗತಿ, ಸಾರಿಗೆ ವ್ಯವಸ್ಥೆಗಳನ್ನು ಅವಲೋಕಿಸಿದ ಬಳಿಕವೇ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಿದೆ ಎಂದು ಹಲವು ಫೋನ್‌ ಕರೆಗಳಿಗೆ ಪ್ರತಿಕ್ರಿಯಿಸಿದರು.

ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಬಳಿಕ ಕನಿಷ್ಠ 8 ರಿಂದ 10 ದಿನ ಪರೀಕ್ಷಾ ಸಿದ್ಧತೆಗೆ ಕಾಲಾವಕಾಶ ದೊರೆಯುವ ಸಾಧ್ಯತೆಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಆತಂಕ ಅಥವಾ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ವಿದ್ಯಾರ್ಥಿಗಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸರ್ಕಾರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಆರು ವಿಷಯಗಳಿಗೆ ಸಂಬಂಧಿಸಿದಂತೆ ವಿಷಯ ಪರಿವೀಕ್ಷಕರನ್ನು ನೇಮಿಸಿ ಸಂಬಂಧಪಟ್ಟ ವಿಷಯಗಳ ಕುರಿತು ನುರಿತ ಶಿಕ್ಷಕರಿಂದ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ.

ವಿದ್ಯಾರ್ಥಿಗಳು ತಂತ್ರಜ್ಞಾನದ ಉಪಯೋಗ ಪಡೆದು ಮನೆಯಲ್ಲೇ ಅಭ್ಯಾಸ ಮಾಡಲು ಸರ್ಕಾರ “ಮಕ್ಕಳವಾಣಿ’ ಯೂಟ್ಯೂಬ್‌ ಚಾನಲ್‌ ಪ್ರಾರಂಭಿಸಿದೆ. ಜೊತೆಗೆ ದೀಕ್ಷಾ ಆ್ಯಪ್‌ ಇದೆ. ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿಯೇ ಮಾದರಿ ಪ್ರಶ್ನೆಪತ್ರಿಕೆಗಳು ಲಭ್ಯವಿದೆ. ಜೊತೆಗೆ ರಾಜ್ಯ ಮಟ್ಟದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಅನಾವರಣ ಮತ್ತು ದೀವಿಗೆ ಪುಸ್ತಕಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ನೋಡಲ್‌ ಅಧಿಕಾರಿ ವಿಜಯಕುಮಾರ್‌, ಡಿವೈಪಿಸಿಗಳಾದ ಸಿ.ಎಂ. ತಿಪ್ಪೇಸ್ವಾಮಿ, ನಾಗಭೂಷಣ, ಶಿಕ್ಷಣಾ ಧಿಕಾರಿ ನರಸಿಂಹಪ್ಪ, ವಾರ್ತಾಧಿಕಾರಿ ಧನಂಜಯಪ್ಪ, ಐಮಂಗಲ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಆರ್‌. ರಮೇಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next