ಚಿತ್ತಾಪುರ: ರಸ್ತೆ ಸುರಕ್ಷತಾ ಕ್ರಮ ಪಾಲಿಸದ ವಾಹನಗಳನ್ನು ತಡೆದು ದಂಡ ಹಾಕುವ ಮೂಲಕ ವಾಹನ ಸವಾರರಿಗೆ ಮತ್ತು ಮಾಲೀಕರಿಗೆ ಪೊಲೀಸರು ಚುರುಕು ಮುಟ್ಟಿಸಿದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಿಂದ ಕೋರ್ಟ್ ರಸ್ತೆವರೆಗೆ ಎಡ ಮತ್ತು ಬಲ ಬದಿಗಳಲ್ಲಿ ಎರಡು ಕಡೆಗೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಲಾರಿ, ಆಟೋ, ಬೈಕ್ ಸೇರಿದಂತೆ ಇತರೆ ವಾಹನಗಳಿಗೆ ಸಿಪಿಐ ಪಂಚಾಕ್ಷರಿ ಸಾಲಿಮಠ ದಂಡ ಹಾಕಿ, ನಿಯಮ ಪಾಲಿಸುವಂತೆ ಖಡಕ್ ಎಚ್ಚರಿಕೆ ನೀಡಿದರು.
ರಸ್ತೆಯ ಎರಡು ಬದಿಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ, ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರಿಂದ ಸವಾರರಿಗೆ ವಾಹನ ಚಲಾಯಿಸಲು ಕಿರಿದಾದ ರಸ್ತೆಯಾಗಿ ತೊಂದರೆ ಆಗುತ್ತಿದೆ. ಹೀಗಾಗಿ ಎಲ್ಲ ಲಾರಿ ಚಾಲಕರನ್ನು ಕರೆಯಿಸಿ ದಂಡ ವಿಧಿಸಿದರು. ನಿಯಮ ಬಾಹಿರ ಪಾರ್ಕಿಂಗ್ ಮಾಡಿದ ಲಾರಿಗಳ ಚಕ್ರದ ಗಾಳಿ ಬಿಡಲಾಯಿತು. ಸಂಬಂಧಪಟ್ಟ ರೋಡಲೈನ್ಸ್ ಮಾಲೀಕರನ್ನು ಕರೆಯಿಸಿ ಲಾರಿಗಳನ್ನು ರಸ್ತೆ ಬದಿಗಳಲ್ಲಿ ನಿಲ್ಲಿಸದಂತೆ ಎಚ್ಚರಿಕೆ ನೀಡಿದರು.
ರಸ್ತೆ ಪಕ್ಕದಲ್ಲಿ ಟೀ ಸ್ಟಾಲ್ಗಳ ಗ್ರಾಹಕರಿಗಾಗಿ ಅಗತ್ಯಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಪತ್ರಾ ಹಾಕಿದ ಟೀ ಸ್ಟಾಲ್ ಮಾಲೀಕರಿಗೆ ಪಿಎಸ್‌ಐ ನಟರಾಜ ಲಾಡೆ ದಂಡ ವಿಧಿಸಿದರು. ಅಗತ್ಯಕ್ಕಿಂತ ದೊಡ್ಡ ಟೆಂಟ್ ಹಾಕುವುದರಿಂದ ರಾತ್ರಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ. ಹೀಗಾಗಿ ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಮಾತ್ರ ನೆರಳು ಮಾಡಿಕೊಳ್ಳಿ ಎಂದು ತಾಕೀತು ಮಾಡಿದರು.
ರಸ್ತೆಯಲ್ಲಿ ಬರುವ ಪ್ರತಿಯೊಂದು ವಾಹನಗಳನ್ನು ತಡೆದು ದಾಖಲೆಗಳನ್ನು ತಪಾಸಣೆ ಮಾಡಿದರು. ಮೂವರು ಸವಾರರು ಬರುವ ಬೈಕ್‌ಗಳನ್ನು ಹಿಡಿದು ದಂಡ ವಿಧಿಸಿದರು.