Advertisement

ಬಸವ ಚಿಂತನೆಯಿಂದ ಮನುಕುಲದ ಉದ್ಧಾರ

12:07 PM Aug 19, 2019 | Team Udayavani |

ಹೊಳಲ್ಕೆರೆ: ಅನುಕ‌ರಣೆ ಬೌದ್ಧಿಕವಾಗಿ, ಸೈದ್ಧಾಂತಿಕವಾಗಿರಬೇಕು. ಆದರೆ ಇಂದಿನ ಸಮಾಜದಲ್ಲಿ

Advertisement

ಭೌತಿಕ ಅನುಕರಣೆ ಹೆಚ್ಚುತ್ತಿರುವುದು ಸರಿಯಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಭಾನುವಾರ ತಾಲೂಕಿನ ಬ್ರಹ್ಮಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆರ್ಶಿವಚನ ನೀಡಿದರು.

ಹನ್ನೆರಡನೇ ಶತಮಾನದಲ್ಲಿ ಬೋಧಿಸಿದ ವಚನಗಳು, ತತ್ವಗಳು, ಚಿಂತನೆಗಳು, ವಿಮರ್ಶೆಗಳು, ಇಂದಿಗೂ ಜನಮಾನಸಕ್ಕೆ ಹತ್ತಿರವಾಗಿದೆ. ಅವು ಸಾಮಾಜಿಕ ಪರಿವರ್ತನೆಗೆ ಪ್ರೇರಣೆ ನೀಡುತ್ತವೆ. ಬಸವಾದಿ ಶರಣರು ಅನುಭವದ ಮೂಲಕ ಜೀವನಾಧಾರಿತ ಮೌಲ್ಯಗಳನ್ನು ಪ್ರತಿಪಾದಿಸುವ ವಚನಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಬಸವ ತತ್ವಗಳು ಎಂದರೆ ಎಲ್ಲರ ತತ್ವಗಳು ಎನ್ನುವಂತಾಗಬೇಕು. ಬಸವ ಚಿಂತನೆಯಿಂದ ಮಾತ್ರ ಮನುಕುಲದ ಉದ್ಧಾರ ಸಾಧ್ಯ ಎಂದರು.

ಅಂದು ಕಾಯಕ, ನ್ಯಾಯದ ಚಿಂತನೆ, ಜಾತ್ಯತೀತ ಹಾಗೂ ಶೋಷಿತರ ಧ್ವನಿಯಾಗುವ ಚಿಂತನೆ ಇತ್ತು. ಬಸವಣ್ಣನವರು 12ನೇ ಶತಮಾನದಲ್ಲಿ ನಿತ್ಯ ಸತ್ಕಾರ್ಯಗಳು, ಕಲ್ಯಾಣ ಕಾರ್ಯಗಳನ್ನು ನೆರವೇರಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಹೊಸ ಚಿಂತನೆ ನೀಡುತ್ತಿದ್ದರು. ಅದೇ ಮಾದರಿಯಲ್ಲಿ ಇಂದು ಮುರುಘಾ ಮಠ ನಡೆದುಕೊಳ್ಳುತ್ತಿದೆ. 30 ವರ್ಷಗಳಿಂದ ಬಸವ ಚಿಂತನೆಯನ್ನು ಅನುಸರಿಸುತ್ತಾ ಬಂದಿದೆ. ಬಸವ ಚಿಂತನೆಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಶ್ರೀಮಠದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಅಂತರ್ಜಾತಿ ವಿವಾಹಕ್ಕೆ ಒತ್ತು ನೀಡಲಾಗಿದೆ. ಅಜ್ಞಾನ, ಅಂಧಕಾರ, ಮೌಡ್ಯ, ಮೂಡನಂಬಿಕೆ ವಿರುದ್ಧ ಧ್ವನಿಯಾಗಿದೆ. ದಾಸೋಹ ತತ್ವವನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಾ ಬಂದಿದೆ. ಹಾಗಾಗಿ ಮರುಘಾಮಠದ ಅನುಸರಣೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.

Advertisement

ಶಿಕ್ಷಕ ಟಿ.ಪಿ. ಉಮೇಶ್‌ ‘ಅನುಕರಣೆಯಿಂದ ಅನುಸರಣೆಯ ಕಡೆಗೆ’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ, ಮನುಷ್ಯ ತನ್ನ ವರ್ತನೆಯಿಂದ ಸಮಾಜಕ್ಕೆ ಅಪೇಕ್ಷಿತರಾಗಬೇಕು. ನಮ್ಮ ಅನುಕರಣೆ ಸಕಾರಾತ್ಮಕವಾಗಿರಬೇಕು. ರೈತರು, ಸೈನಿಕರ ಅನುಕರಣೆ ಮಾಡಬೇಕು. ಭ್ರಷ್ಟಾಚಾರ, ಸಮಾಜಘಾತುಕ ವಿಚಾರಗಳು ಅನುಕರಣೆ ವಸ್ತುಗಳಾಗಬಾರದು ಎಂದರು.

ಜಿಪಂ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್‌, ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಕೆ.ಎಂ. ವಿರೇಶ್‌, ತಾಪಂ ಸದಸ್ಯ ಪರಮೇಶ್ವರಪ್ಪ, ಗ್ರಾಪಂ ಸದಸ್ಯ ದಗ್ಗೆ ಶಿವಪ್ರಕಾಶ್‌, ಮಾವಿನಕಟ್ಟೆ ಗುರುಸ್ವಾಮಿ ಮತ್ತಿತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಗ್ರಾಮಸ್ಥರು ಪೂರ್ಣಕುಂಭ ಮೆರವಣಿಗೆ ಮೂಲಕ ಡಾ| ಶಿವಮೂರ್ತಿ ಮುರುಘಾ ಶರಣರನ್ನು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next