Advertisement

ಈರುಳ್ಳಿಗೆ ಮೋಡವೇ ಕಂಟಕ!

12:30 PM Aug 15, 2019 | Naveen |

ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ ಈರುಳ್ಳಿ ಬೆಳೆಗಳಿಗೆ ರೋಗ ಹರಡುತ್ತಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ಈರುಳ್ಳಿ ಬಿತ್ತನೆ ಮಾಡಿರುವ ರೈತರಿಗೆ ಮೋಡ ಹಾಗೂ ಚಳಿಯ ವಾತಾವರಣ ಆತಂಕ ಸೃಷ್ಟಿಸಿದೆ. ಈರುಳ್ಳಿ ಬೆಳೆಗೆ ವಿಪರೀತ ಚಳಿ ಹಾಗೂ ಬಹಳಷ್ಟು ದಿನಗಳವರೆಗೆ ಮೋಡ ಮುಸುಕಿದ್ದರೂ ಆಗಿ ಬರುವುದಿಲ್ಲ. ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಇದೇ ವಾತಾವರಣ ಇದೆ. ಆಗಾಗ ಸಣ್ಣ ಸೋನೆ ಮಳೆ ಸುರಿಯುವುದು, ಇಡೀ ದಿನ ಮೋಡ ಕವಿದಿರುವುದು, ವಿಪರೀತ ಗಾಳಿ ಬೀಸುವುದರಿಂದ ಬಿತ್ತನೆಯಾಗಿ ಸುಮಾರು ಒಂದೂವರೆಯಿಂದ ಎರಡು ತಿಂಗಳಾಗಿರುವ ಈರುಳ್ಳಿಗೆ ರೋಗ ಬಾಧಿಸುತ್ತಿದೆ.

ವಿಶೇಷವಾಗಿ ಹೊಸದುರ್ಗ, ಚಳ್ಳಕೆರೆ, ಹಿರಿಯೂರು ಭಾಗದ ಹಲವೆಡೆ ಫಂಗಸ್‌ ಕಾಣಿಸಿಕೊಂಡಿದೆ. ಈರುಳ್ಳಿ ಗರಿಗಳ ಮೇಲೆ ಚುಕ್ಕೆಗಳು ಕಾಣಿಸಿಕೊಂಡಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದನ್ನು ನೇರಳೆ ಮಚ್ಚೆ ರೋಗ ಎಂದು ಖಚಿತಪಡಿಸಿದ್ದಾರೆ. ಗರಿಗಳ ಮೇಲೆ ಮಚ್ಚೆ ಕಾಣಿಸಿಕೊಂಡು ಕೊಳೆಯುವುದು, ಒಣಗುವುದು ಕಂಡು ಬಂದಲ್ಲಿ, ಕ್ಲೋರೋಥಲೋನಿಲ್ ಹಾಗೂ ಮ್ಯಾಂಕೊಜೆಪ್‌ ಔಷಧವನ್ನು ಪ್ರತಿ ಲೀಟರ್‌ಗೆ 2 ಗ್ರಾಂ ಬೆರೆಸಿಕೊಂಡು ಸಿಂಪರಣೆ ಮಾಡುವಂತೆ ಸಲಹೆ ನೀಡಿದ್ದಾರೆ.

ಈ ಹಂತದಲ್ಲಿ ಎಲೆ ಕತ್ತರಿಸುವ ಹುಳುಗಳ ಬಾಧೆಯೂ ಎದುರಾಗಲಿದ್ದು, ಆರಂಭದಲ್ಲಿ ಹಸಿರು ಬಣ್ಣದಲ್ಲಿದ್ದು ನಂತರ ಕಂದು ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ ಈರುಳ್ಳಿಯ ಕೊಳವೆಯಲ್ಲಿ ಸೇರಿಕೊಳ್ಳುತ್ತವೆ. ಇದನ್ನು ನಿಯಂತ್ರಿಸಲು ಕ್ಲೋರೋಪೈರಿಫಾಸ್‌ ಅಥವಾ ಇನ್ನಿತರೆ ಕೀಟನಾಶಕ ಬಳಸಬಹುದು.

ಶೇ. 30ಕ್ಕೆ ಕುಸಿದ ಈರುಳ್ಳಿ ಬೆಳೆ: ಈರುಳ್ಳಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಚಿತ್ರದುರ್ಗ ಕೂಡ ಒಂದು. ಪ್ರತಿ ವರ್ಷ ಸುಮಾರು 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಆದರೆ ಈ ವರ್ಷದ ಆರಂಭದಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಶೇ. 70 ರಷ್ಟು ರೈತರು ಈರುಳ್ಳಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ತಡವಾಗಿ ಬಂದ ಮಳೆ ನಂಬಿ ಕೆಲವರು ಬಿತ್ತನೆ ಮಾಡಿದ್ದು, ರೋಗಬಾಧೆಯ ಆತಂಕದಲ್ಲಿದ್ದಾರೆ. ಜತೆಗೆ ಕಟಾವಿನ ಸಂದರ್ಭದಲ್ಲೂ ಮಳೆ ಕಾಡಬಹುದು ಎನ್ನಲಾಗುತ್ತಿದೆ.

Advertisement

ಕಳೆದ ವರ್ಷ 17,401 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಆದರೆ ಈ ವರ್ಷ ಜುಲೈ ಅಂತ್ಯಕ್ಕೆ 7911 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಚಳ್ಳಕೆರೆ 4070, ಚಿತ್ರದುರ್ಗ 1018, ಮೊಳಕಾಲ್ಮೂರು 215, ಹಿರಿಯೂರು 1215, ಹೊಸದುರ್ಗ 493 ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 900 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು 25 ಸಾವಿರ ಖರ್ಚು ಬರುತ್ತದೆ. ಸಕಾಲಕ್ಕೆ ಮಳೆಯಾಗದ ಕಾರಣ ತಡವಾಗಿ ಬಿತ್ತನೆ ಮಾಡಿದ್ದೇವೆ. ಈ ಹಂತದಲ್ಲಿ ನಷ್ಟವಾದರೆ ರೈತರು ಚೇತರಿಸಿಕೊಳ್ಳುವುದು ಕಷ್ಟ. ರೋಗ ಬಂದರೆ ಹತೊಟಿ ಬಹಳ ಕಷ್ಟ. ರೈತರನ್ನು ದೇವರೇ ಕಾಪಾಡಬೇಕು.
ಹಂಪಯ್ಯನಮಾಳಿಗೆ ಬಸವರಾಜ್‌,
ಈರುಳ್ಳಿ ಬೆಳೆಗಾರ.

ಶೀತದ ವಾತಾವರಣ, ಸದಾ ಮೋಡ ಮುಚ್ಚಿದ್ದಾಗ ವಿಶೇಷವಾಗಿ ಕಪ್ಪು ಮಣ್ಣು ಅಥವಾ ಎರೆ ಭೂಮಿಯಲ್ಲಿ ರೋಗ ಬರುವ ಸಾಧ್ಯತೆ ಇರುತ್ತದೆ. ಈ ಮಣ್ಣಿನಲ್ಲಿ ನೀರು ಬಸಿಯುವುದಿಲ್ಲ. ಆದ್ದರಿಂದ ರೈತರು ಬಿತ್ತನೆ ಸಂದರ್ಭದಲ್ಲಿ ಬಸಿಗಾಲುವೆ ಮಾಡಿಕೊಳ್ಳಬೇಕು. ಗರಿಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುವಾಗ ಶಿಲೀಂಧ್ರ ನಾಶಕ ಬಳಸಿದರೆ ರೋಗವನ್ನು ಹತೋಟಿ ಮಾಡಬಹುದು.
ಡಾ| ಎಸ್‌. ಓಂಕಾರಪ್ಪ,
ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು.

Advertisement

Udayavani is now on Telegram. Click here to join our channel and stay updated with the latest news.

Next