Advertisement

ವಿವಿ ಸಾಗರಕ್ಕೆ ಭದ್ರಾ ನೀರು ಹರಿಸಲು ಸಿಎಂ ಯಡಿಯೂರಪ್ಪ ಗಡುವು

07:18 PM Sep 05, 2019 | Naveen |

ಚಿತ್ರದುರ್ಗ: ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್‌ 1 ರಿಂದ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಸುಮಾರು 7 ಟಿಎಂಸಿ ನೀರು ಹರಿದು ಬರಲಿದೆ.

Advertisement

ಬುಧವಾರ ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಚಿತ್ರದುರ್ಗ ಜಿಲ್ಲೆಯ ಶಾಸಕರು, ಸಂಸದರು, ರೈತರು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಸಭೆಯಲ್ಲಿ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.

ಭದ್ರಾ ಜಲಾಶಯದಲ್ಲಿ ನೀರಿದ್ದು, 12 ಟಿಎಂಸಿ ನೀರು ಹರಿಸಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದರು. ಅಂತಿಮವಾಗಿ 6 ರಿಂದ 7 ಟಿಎಂಸಿ ನೀರು ಹರಿಸುವ ಭರವಸೆ ಸಿಕ್ಕಿದೆ.

ಅಜ್ಜಂಪುರ ಬಳಿ ರೈಲ್ವೆ ಕಾಮಗಾರಿ ಕೆಲಸ ಇನ್ನೂ ಬಾಕಿ ಉಳಿದಿದ್ದು, ಅದನ್ನು ಬೇಸಿಗೆಯಲ್ಲಿ ಮಾರ್ಚ್‌ ತಿಂಗಳು ಮಾಡಿಕೊಳ್ಳಲು ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲಿಯವರೆಗೆ ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಸಂಬಂಧ ಈ ಹಿಂದೆ ಹತ್ತಾರು ಭರವಸೆಗಳು ಸುಳ್ಳಾಗಿದ್ದವು. ಆದರೆ ಈಗ ಒಂದು ಹಂತಕ್ಕೆ ಬಂದಂತೆ ಕಾಣಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಸ್ವತಃ ಅಕ್ಟೋಬರ್‌ 1 ರಂದು ನೀರು ಹರಿಸಲು ಭದ್ರಾ ಮೇಲ್ದಂಡೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

Advertisement

ಕಳೆದ ನಾಲ್ಕು ವರ್ಷಗಳಿಂದ ಈ ತಿಂಗಳು, ಮುಂದಿನ ತಿಂಗಳು ಎಂದು ಮುಂದೂಡುತ್ತಲೇ ಬರಲಾಗಿತ್ತು. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿ ಸಾಗರಕ್ಕೆ ನೀರು ಹರಿಸುವುದಾಗಿ ಭರವಸೆ ನೀಡುತ್ತಿದ್ದವೇ ವಿನಃ ಭರವಸೆ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ಇದರಿಂದ ಜಿಲ್ಲೆಯ ರೈತರು ಹಾಗೂ ಜನತೆ ಬೇಸತ್ತಿದ್ದರು.

ಈಗ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರು ಹರಿಸುವಂತೆ ಒತ್ತಡ ಹೇರಿದೆ. ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದ ಬಿಎಸ್‌ವೈ, ಯಾವುದೇ ಕಾರಣ ಹೇಳದೇ ಇದೇ ವರ್ಷ ಅಕ್ಟೋಬರ್‌ 1 ರಂದು ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿ. ನಾನೇ ಬಂದು ಚಾಲನೆ ನೀಡುತ್ತೇನೆ ಎಂದಿದ್ದಾರೆ.

ಇದೇ ವೇಳೆ ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ದಶಕದಿಂದ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬವಾಗಲು ಅಧಿಕಾರಿಗಳೇ ನೇರ ಹೊಣೆ. ರೈತರಿಗೆ ಭರವಸೆ ನೀಡುವುದನ್ನು ಬಿಟ್ಟು ವಾಸ್ತವ ಸ್ಥಿತಿ ತಿಳಿಸಿ ನೀರು ಹರಿಸುವುದನ್ನು ನೋಡಿ. ಮುಖ್ಯಮಂತ್ರಿಗಳ ಆದೇಶ ಪಾಲಿಸಿ ಎಂದು ಸೂಚಿಸಿದರು.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮಾತನಾಡಿ, ಈ ಹಿಂದೆ ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಿದ್ದ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಈಗ ತಮ್ಮ ಅಧಿಕಾರಾವಧಿಯಲ್ಲೇ ಜಿಲ್ಲೆಗೆ ನೀರು ಹರಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಮಾತನಾಡಿ, ಹೊಸದುರ್ಗ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು. ಜತೆಗೆ ನೀರು ಹರಿಸುವ ಕೆರೆಗಳ ನೋಟಿಫಿಕೇಶನ್‌ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರ ಮೇಲೆ ನೀರು ಕಳ್ಳತನದಂತಹ ದೂರುಗಳನ್ನು ದಾಖಲಿಸಿ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ನಾ. ತಿಪ್ಪೇಸ್ವಾಮಿ, ಬಿಜೆಪಿ ಮುಖಂಡ ಡಿ.ಟಿ. ಶ್ರೀನಿವಾಸ್‌, ರೈತ ಮುಖಂಡರಾದ ಕಸವನಹಳ್ಳಿ ರಮೇಶ್‌, ಎಚ್.ಆರ್‌. ತಿಮ್ಮಯ್ಯ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next