Advertisement

ದೇಶದ ಪ್ರಗತಿಗೆ ಬೇಕು ಕಾಂಗ್ರೆಸ್ ಆಡಳಿತ; ಮಾಜಿ ಸಚಿವ ಆಂಜನೇಯ

05:37 PM Sep 08, 2021 | Team Udayavani |

ಚಿತ್ರದುರ್ಗ: ದೇಶದ ಜನ ಪ್ರಸ್ತುತ ಬಿಜೆಪಿ ಸರ್ಕಾರದ ದುರಾಡಳಿತ, ಆಡಳಿತ ವೈಪಲ್ಯದಿಂದ ತತ್ತರಿಸಿದ್ದಾರೆ. ನಾಡಿನ ಪ್ರಗತಿಗೆ ಕಾಂಗ್ರೆಸ್ ಪಕ್ಷದ ಆಡಳಿತ ಅಗತ್ಯ ಎಂಬುದು ಜನರಿಗೆ ಮನವರಿಕೆ ಆಗಿದ್ದು, ಕಾರ್ಯಕರ್ತರು ಪಕ್ಷ ಬಲವರ್ಧನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

Advertisement

ತಾಲೂಕಿನ ಚಿಕ್ಕಜಾಜೂರಿನಲ್ಲಿ ಬುಧವಾರ ಜರುಗಿದ ಕಾಂಗ್ರೆಸ್ ಪಕ್ಷದ ಗ್ರಾಪಂ ಮಟ್ಟದ ಸಮಿತಿ ರಚನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಿಂದಿಗಿಂತಲೂ ದರ ಕಡಿಮೆಯಿದ್ದರೂ ದೇಶದಲ್ಲಿ ಇಂಧನ ಬೆಲೆ 100 ರೂ. ದಾಟಿದೆ. ಅಡುಗೆ ಎಣ್ಣೆ, ಬೆಳೆ ಕಾಳುಗಳ ಬೆಲೆ ಗಗನಕ್ಕೆ ಏರಿವೆ. ಸಿಲಿಂಡರ್ ಬೆಲೆ ಒಂದು ಸಾವಿರ ರೂಪಾಯಿ ಹತ್ತಿರ ಸಮೀಪಿಸಿದೆ ಎಂದರು.

ಈ ಮಧ್ಯೆ ಕೋವಿಡ್ ನಿರ್ವಹಣೆ ವೇಳೆ ಭ್ರಷ್ಟಾಚಾರ, ಆಡಳಿತ ವೈಪಲ್ಯದಿಂದ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಣ್ಣ ಉದ್ಯಮಗಳು ಬಾಗಿಲು ಮುಚ್ಚಿವೆ. ಇದರಿಂದ ಬಡ, ಮಧ್ಯಮ ವರ್ಗದ ಜನ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಹೊಣೆ ಬಿಜೆಪಿ ದುರಾಡಳಿತ ಎಂದು ದೂರಿದರು.

ಈ ಸಂಕಷ್ಟದಲ್ಲೂ ಜನ ಒಂದೊತ್ತಿನ ಊಟ ಮಾಡಲು ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ, ವರ್ಷದಲ್ಲಿ ಇಂತಿಷ್ಟು ದಿನ ದುಡಿವ ಕೈಗಳಿಗೆ ಕೆಲಸ ಸಿಕ್ಕಿರುವುದು ಉದ್ಯೋಗ ಖಾತ್ರಿ ಯೋಜನೆಯಿಂದ. ಆದರೂ ಬಹಳಷ್ಟು ಜನರ ಬದುಕು ಮೂರಾಬಟ್ಟೆಯಾಗಿದೆ. ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕೆಂದು ಗೊಂದಲಕ್ಕೆ ಜನ ಸಿಲುಕಿದ್ದಾರೆ ಎಂದರು.

Advertisement

ಆದ್ದರಿಂದ ಬೂತ್, ಗ್ರಾಪಂ ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಸಮಿತಿ ರಚಿಸಲಾಗುತ್ತಿದೆ. ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಕ್ಷ ಬಲವರ್ಧನೆ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಫಂದಿಸುವ ಕೆಲಸ ಮಾಡಬೇಕು. ಬಿಜೆಪಿ ಜಾರಿಗೊಳಿಸಿರುವ ಜನವಿರೋಧಿ ನೀತಿಗಳನ್ನು ಮನದಟ್ಟ ಮಾಡಬೇಕು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಜಾರಿಗೆ ತಂದ ಜನಪರ ಯೋಜನೆಗಳಿಂದ ಆಗುತ್ತಿರುವ ಅನುಕೂಲ ಮನೆ ಮನೆಗೆ ಹೋಗಿ ಜನರಿಗೆ ತಿಳಿಸಬೇಕು ಎಂದರು.

70 ವರ್ಷ ಕಾಂಗ್ರೆಸ್ ಏನು ಮಾಡಿಲ್ಲ ಎಂದು  ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಕಾಂಗ್ರೆಸ್ ಪಕ್ಷದ ಸರ್ಕಾರ ದೇಶದ ಜನರ ಒಳಿತಿಗೆ ಸ್ಥಾಪಿಸಿದ್ದ ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಇಂದಿರಾಗಾಂಧಿ ಬಡ ಜನರಿಗಾಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿದ್ದು, ಉಳುವವನೇ ಭೂ ಒಡೆಯ ಎಂಬ ಕಾನೂನು ಜಾರಿಗೆ ತಂದಿದ್ದರು. ಆದರೆ, ಈಗಿನಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ನೀತಿಗಳನ್ನು ರೂಪಿಸುತ್ತಿದ್ದು, ಬಡ, ಮಧ್ಯಮ, ಹಳ್ಳಿಗರ ಬದುಕನ್ನು ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.

ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಕಿತ್ತಾಟ

ಜನಪರ ಕಾರ್ಯ ಮಾಡುವ ಜನಪ್ರತಿನಿಧಿಗಳೇ ಬಿಜೆಪಿ ಸರ್ಕಾರದಲ್ಲಿ ಇಲ್ಲದಂತಾಗಿದೆ. ಕೋವಿಡ್ ಸಂಕಷ್ಟದಲ್ಲೂ ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪ ಅವರನ್ನು ಇಳಿಸಿ, ಆಡಳಿತ ಯಂತ್ರ ದಾರಿ ತಪ್ಪುವಂತೆ ಮಾಡಲಾಗಿದೆ ಎಂದರು.

ಹೊಸದಾಗಿ ಬಂದಿರುವ ಬೊಮ್ಮಾಯಿ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಿನ್ನಮತ ಎಬ್ಬಿಸುತ್ತಿರುವವರನ್ನು ಸಮಾಧಾನಗೊಳಿಸುವುದು, ದೆಹಲಿಗೆ ಹೋಗಿ ವರಿಷ್ಠರಿಗೆ ಮಾಹಿತಿ ನೀಡುವುದರದಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಕೋವಿಡ್, ಲಾಕ್‍ಡೌನ್ ನಿರ್ವಹಣೆ ವೈಪಲ್ಯದಿಂದ ಆಗಿರುವ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಈ ಕುರಿತು ಪಕ್ಷದ ಕಾರ್ಯಕರ್ತರು ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿಗಳಲ್ಲಿ ಜನಜಾಗೃತಿ ಮೂಡಿಸಿ, ರಾಜ್ಯ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಿತ್ತೋಗೆಯಲು ಮುಂದಾಗಬೇಕು ಎಂದರು.

ಇದನ್ನೂ ಓದಿ:ಪೊದೆಗೆ ಎಸೆದು ಹೋದ ಹಸುಗೂಸನ್ನು ರಕ್ಷಿಸಿ ಮರುಜನ್ಮ ನೀಡಿದ ಸ್ಥಳೀಯರು

ಚಿಕ್ಕಜಾಜೂರು ಕಾಂಗ್ರೆಸ್  ಗ್ರಾಮ ಪಂಚಾಯತಿ ಸಮಿತಿ ಅಧ್ಯಕ್ಷರಾಗಿ  ಕೆ.ಎಸ್.ಸಿದ್ದೇಶ್,  ಉಪಾಧ್ಯಕ್ಷರುಗಳಾಗಿ ಅಬ್ದುಲ್ ಕಲಾಂ, ಎ.ಮಹೇಶ, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ವಿ.ರಾಜು, ಕೆ.ಬಾಲಾಜಿ, ಕಾರ್ಯದರ್ಶಿಗಳಾಗಿ ಷಹಜಾನ್, ಎಂ.ಚಂದ್ರಶೇಖರ ಇವರುಗಳನ್ನು ಸಭೆಯಲ್ಲಿ   ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ ಹನುಮಂತಪ್ಪ, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುರುಗೇಶ್ ಪೂಜಾರಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ರಶ್ಮಿ ಪ್ರದೀಪ್,  ಜಿಪಂ ಮಾಜಿ ಸದಸ್ಯರುಗಳಾದ ಲೋಹಿತ್‍ಕುಮಾರ್, ರಂಗಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ಓಂಕಾರಸ್ವಾಮಿ, ಮುಖಂಡರಾದ ರಾಜಣ್ಣ, ಮಲ್ಲಿಕಾರ್ಜುನ, ಸುರೇಶ್,  ಗ್ರಾಪಂ. ಮಾಜಿ ಉಪಾಧ್ಯಕ್ಷರಾದ ಸಿ,ಸೋಮಶೇಖರ್   ಚಿಕ್ಕಜಾಜೂರು ಗ್ರಾಪಂ ಸದಸ್ಯರಾದ ಮಲ್ಲೇಶ್, ಗೋವಿಂದಪ್ಪ , ಜಮೀರ್ ಪಾಷಾ,  ಸೇರಿದಂತೆ ಅನೇಕ  ಕಾಂಗ್ರೆಸ್ ಮುಖಂಡರು  ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next