ಚಿತ್ರದುರ್ಗ: ರಾಜ್ಯದ 5400 ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭವಾಗಿದ್ದು, ಒಂದು ವಾರದಲ್ಲಿ ರಾಜ್ಯದ ಎಲ್ಲಾ 6021 ಗ್ರಾಮ ಪಂಚಾಯಿತಿಗಳಲ್ಲೂ ನರೇಗಾ ಕಾಮಗಾರಿ ಆರಂಭವಾಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ನರೇಗಾ ಕಾಮಗಾರಿ ರಾಜ್ಯದ ಜನತೆಗೆ ವರವಾಗಿದೆ. ಕೊರೊನಾ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ನರೇಗಾ ಯೋಜನೆಯಲ್ಲಿ ಒಂದು ಸಾವಿರ ಕೋಟಿ ರೂ. ಹಣವಿದೆ ಎಂದರು.
ಕೆರೆ ಮಣ್ಣನ್ನು ರೈತರು ಬಳಸಬಹುದು: ಕೆರೆ ಹೂಳೆತ್ತುವಾಗ ಸಿಗುವ ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ, ತೋಟಗಳಿಗೆ ಬಳಸಬಹುದಾಗಿದೆ. ಕೆರೆ ಮಣ್ಣನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ. ರೈತರು ಕೆರೆ ಮಣ್ಣನ್ನು ತಮ್ಮ ಜಮೀನುಗಳಿಗೆ ಒಯ್ಯಬಹುದು ಎಂದು ಸಚಿವರು ತಿಳಿಸಿದರು. ಅಂತರ್ಜಲ ಸಂರಕ್ಷಣೆಗಾಗಿ ಅಂತರ್ಜಲ ಚೇತನ ಎಂಬ ನೂತನ ಯೋಜನೆಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಯೋಗದಲ್ಲಿ ಆರ್‌ಡಿಪಿಆರ್ ಇಲಾಖೆಯಿಂದ ಪ್ರಾರಂಭಿಕವಾಗಿ 9 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕಡಿಮೆ ನೀರು ಇರುವ ಕೋಲಾರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಯಾದಗಿರಿ ಜಿಲ್ಲೆಗಳು ಸೇರಿದಂತೆ ಒಟ್ಟು 9 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಅಂತರ್ಜಲ ಹೆಚ್ಚುವ ಜತೆಗೆ ಕುಡಿಯುವ ನೀರು ಸಿಗುತ್ತದೆ. ಮೇ 5 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು. ಇದಾದ ನಂತರ ಉಳಿದ ಜಿಲ್ಲೆಗಳಲ್ಲಿ ಮೇ ಅಂತ್ಯದೊಳಗೆ ಅಂತರ್ಜಲ ಚೇತನ ಯೋಜನೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಈ ವೇಳೆ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಜಿಪಂ ಸಿಇಒ ಎಸ್. ಹೊನ್ನಂಬ ಮತ್ತಿತರರು ಇದ್ದರು. ನೀರಿನ ಸಮಸ್ಯೆ ನಿವಾರಣೆಗೆ ಕ್ರಮ
ರಾಜ್ಯದ 49 ತಾಲೂಕು ಬರಪೀಡಿತ ಎಂದು ಘೋಷಿಸಲಾಗಿದೆ. ಪ್ರತಿ ತಾಲೂಕಿಗೆ 1 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನುಳಿದ ತಾಲೂಕುಗಳಿಗೆ 50 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇರಬಾರದು ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.