ಚಿತ್ರದುರ್ಗ: ಸೌಹಾರ್ದ ನಡಿಗೆಯಿಂದ ಪ್ರಾರಂಭವಾದ ಮುರುಘಾ ಮಠದ 2019ನೇ ಸಾಲಿನ ಶರಣ ಸಂಸ್ಕೃತಿ ಉತ್ಸವ ಭಾವೈಕ್ಯ ಸಮಾವೇಶದೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.
ನಿತ್ಯವೂ ವಿಚಾರಗಳ ಹೂರಣ, ಆಟ, ಪಾಠ, ಮನರಂಜನೆ ಜತೆ ಜತೆಗೆ ನಾಡಿನ ಸಮಸ್ಯೆಗಳ ಕುರಿತ ಗಂಭೀರವಾದ ವಿಚಾರ ಮಂಥನಗಳೊಂದಿಗೆ ಪ್ರಸಕ್ತ ವರ್ಷದ ಉತ್ಸವ ಯಶಸ್ಸು ಕಂಡಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಸಂತಸ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಶರಣರು, ಈ ಬಾರಿಯ ಶರಣ ಸಂಸ್ಕೃತಿ ಉತ್ಸವ ಹೆಚ್ಚು ಜನಮನ್ನಣೆ ಗಳಿಸಿದ್ದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಅ. 2 ರಿಂದ 11 ರವರೆಗೆ ಹತ್ತು ದಿನಗಳ ಕಾಲ ನಿರಾಂತಕ ಹಾಗೂ ನಿರ್ವಿಘ್ನವಾಗಿ ಉತ್ಸವ ನಡೆದಿದೆ. ಇಲ್ಲಿ ನಡೆದ ಗೋಷ್ಠಿಗಳಲ್ಲಿ ಹೊರ ಹೊಮ್ಮಿರುವ ವಿಚಾರಗಳು ಸಮಾಜ ಹಾಗೂ ಸರ್ಕಾರಕ್ಕೆ ತಲುಪಿವೆ ಎಂದು ತಿಳಿಸಿದರು.
ಶರಣ ಸಂಸ್ಕೃತಿ ಉತ್ಸವದ ಆರಂಭದ ಮೂರು ದಿನಗಳ ಕಾಲ ನಡೆದ ಚಿಂತನಾ ಗೋಷ್ಠಿಗಳು ಬಹಳಷ್ಟು ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ನಾಡಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು, ಚಿಂತಕರು, ಕವಿ, ಸಾಹಿತಿಗಳು, ಸಾಧಕರು ಖುಷಿಯಿಂದ ಪಾಲ್ಗೊಂಡಿದ್ದಾರೆ.
ಅನೇಕ ಕಾರ್ಯಕ್ರಮಗಳಿಗೆ ಜನ ಕಿಕ್ಕಿರಿದು ಸೇರಿದ್ದಾರೆ. ಇದುವರೆಗಿನ ಎಲ್ಲ ಉತ್ಸವಗಳನ್ನು ಈ ವರ್ಷದ ಕಾರ್ಯಕ್ರಮಗಳು ಮೀರಿಸಿವೆ. ಊಟದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ವಾರ ಕಾಲ ನಡೆದ ಸಹಜ ಶಿವಯೋಗ ಕಾರ್ಯಕ್ರಮದಲ್ಲೂ ನಿತ್ಯವೂ ಕನಿಷ್ಠ 3 ಸಾವಿರ ಭಕ್ತರು ಭಾಗವಹಿಸುವ ಮೂಲಕ ಬದುಕಿಗೆ ಬೇಕಾದ ಪ್ರೇರಣೆಯನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯ ನೀರಾವರಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ.
ಬಾಸ್ಕೆಟ್‌ಬಾಲ್ ಪಂದ್ಯಾವಳಿಗಾಗಿ ಹೊಸ ಅಂಕಣವನ್ನೇ ನಿರ್ಮಿಸಲಾಗಿದೆ. ಬಸವ ಪುತ್ಥಳಿ ನಿರ್ಮಾಣವಾದರೆ ಚಿತ್ರದುರ್ಗ ಜಿಲ್ಲೆಯ ಸ್ವರೂಪವೇ ಬದಲಾಗಲಿದೆ ಎಂದು ಕಾನೂನು ಸಂಸದೀಯ ಸಚಿವ ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲೆ ಮಾತ್ರವಲ್ಲ, ಕರ್ನಾಟಕದ ಚಿತ್ರಣವೇ ಬದಲಾಗಲಿದೆ ಎಂದರು.
ಈ ವೇಳೆ ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ, ಪದಾಧಿಕಾರಿಗಳಾದ ಪಟೇಲ್ ಶಿವಕುಮಾರ್, ಎ.ಜಿ. ಪರಮಶಿವಯ್ಯ, ಡಿ.ಎಸ್. ಮಲ್ಲಿಕಾರ್ಜುನ್
ಇತರರು ಇದ್ದರು.