Advertisement

ಕೃಷಿ ಎಲ್ಲ ಸಂಸ್ಕೃತಿಯ ಮೂಲ: ಸಿದ್ಧಲಿಂಗ ಶ್ರೀ

01:44 PM Oct 06, 2019 | |

ಚಿತ್ರದುರ್ಗ: ಎಲ್ಲ ಸಂಸ್ಕೃತಿಗಳ ಮೂಲ ಕೃಷಿ ಸಂಸ್ಕೃತಿಯಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶನಿವಾರ ಮುರುಘಾ ಮಠದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಪ್ರತಿಯೊಬ್ಬರಿಗೂ ಕೃಷಿ ಬೇಕೇ ಬೇಕು. ಅದಕ್ಕಾಗಿಯೇ ರೈತನಿಗೆ ಅನ್ನದಾತ ಎನ್ನಲಾಗುತ್ತಿದ್ದು, ರೈತನಿಗೆ ದೇವರಿಗೆ ಸಮಾನವಾದ ಸ್ಥಾನವಿದೆ. ಆದರೆ ಇಂದು ರೈತರ ಜೀವನ ಅತ್ಯಂತ ಕಷ್ಟದಾಯಕವಾಗಿದೆ ಎಂದರು.

ಕೃಷಿಗಿಂತ ಪವಿತ್ರ ಬದುಕಿಲ್ಲ. ರೈತ ಬೆಳೆಯುವ ಬೆಳೆಯೇ ಪ್ರಸಾದ. ಮಠಗಳು ನಡೆಸುತ್ತಿರುವ ದಾಸೋಹಕ್ಕೆ ರೈತರೇ ಕಾರಣ. ಈ ಹಿನ್ನೆಲೆಯಲ್ಲಿ ಕೃಷಿ ಆಕರ್ಷಕವಾಗಲು ಅದರಿಂದ ಬರುವ ಆದಾಯ ಹೆಚ್ಚಾಗಬೇಕು. ಆಗ ಮಾತ್ರ
ಆಸಕ್ತಿ ಬೆಳೆಯುತ್ತದೆ. ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಂದು ಕೆರೆ ಕಟ್ಟೆಗಳು ತುಂಬಿದರೆ ಇಸ್ರೇಲ್‌ ತಂತ್ರಜ್ಞಾನವೆಲ್ಲ ನಮ್ಮ ದೇಶಕ್ಕೆ ಬೇಕಾಗುವುದೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಇಸ್ರೇಲ್‌ ಮಾದರಿ ಕೃಷಿ ಮತ್ತು ಸ್ಥಳೀಯ ನೀರಾವರಿ ಯೋಜನೆ ಕುರಿತು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.50 ಇಸ್ರೇಲ್‌ ಮಾದರಿ ಅನುಸರಿಸಿದರೆ ಅರ್ಧ ರಾಜ್ಯಕ್ಕೆ ಆಹಾರ ನೀಡಬಹುದು ಎಂದರು.

ಇಸ್ರೇಲ್‌ ಮಾದರಿ ಕೃಷಿ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಆಸಕ್ತಿ ಜಾಸ್ತಿಯಾಗುತ್ತಿದೆ. ಅಲ್ಲಿ ನೀರಿನ ಆಡಿಟ್‌ ಮಾಡಲಾಗುತ್ತದೆ. ಸಮುದ್ರದ ದಂಡೆಯಲ್ಲಿ ಪ್ರತಿ 50 ಕಿಮೀಗೆ ಒಂದರಂತೆ ಉಪ್ಪು ನೀರನ್ನು ಸಿಹಿಯಾಗಿ ಪರಿವರ್ತಿಸುವ ಘಟಕಗಳಿವೆ. ಆ ನೀರನ್ನು ಕೃಷಿಗೆ ಬಳಕೆ ಮಾಡುತ್ತಾರೆಂದು ತಿಳಿಸಿದರು.

Advertisement

ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಚಿತ್ರದುರ್ಗಕ್ಕೆ ಭದ್ರಾ ನೀರು ತರುವಲ್ಲಿ ಮುರುಘಾ ಶರಣರ ಪರಿಶ್ರಮ ಇದೆ. ಈ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಸಾಕಷ್ಟು ಒತ್ತಡ ಹಾಕಿದ್ದಾರೆ
ಎಂದರು.

ಆಧುನಿಕ ಕೃಷಿ ಪದ್ಧತಿಯ ಪರಿಣಾಮ ಈಗ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆಯುತ್ತಿದ್ದೇವೆ. ಹಿಂದೆ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೆವು ಎಂದು ಹೇಳಿದರು.

ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ. ನಾರಾಯಣ ರಾವ್‌ ಮಾತನಾಡಿ, ಪ್ರಜಾಪ್ರಭುತ್ವ ಮೊದಲು ಅಸ್ತಿತ್ವಕ್ಕೆ ಬಂದಿದ್ದು ಬಸವಕಲ್ಯಾಣದಲ್ಲಿ. ಸಂಸತ್ತು ನಡೆದಿದ್ದು ಕೂಡ ಅಲ್ಲಿಯೇ. ಆದರೆ ಅಲ್ಲಿನ್ನೂ ಚಿತ್ರದುರ್ಗ ಮಾದರಿಯ ಅನುಭವ ಮಂಟಪ ಆಗಿಲ್ಲ ಎಂಬ ಕೊರಗಿತ್ತು. ಈಗ ಆ ಕಾರ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರ 50 ಕೋಟಿ ರೂ. ಅನುದಾನ ನೀಡಿದೆ ಎಂದು ಸ್ಮರಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್‌, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್‌ ಶಿವಕುಮಾರ್‌ ಮಾತನಾಡಿದರು. ಡಾ| ಶಿವಮೂರ್ತಿ ಮುರುಘಾ ಶರಣರು, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಆನಂದ್‌, ರೈತ ಮುಖಂಡರಾದ ನುಲೇನೂರು ಎಂ. ಶಂಕ್ರಪ್ಪ, ಈಚಘಟ್ಟ ಸಿದ್ದವೀರಪ್ಪ, ಕೆ.ಪಿ. ಭೂತಯ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next