Advertisement

ಮುರುಘಾ ಮಠದಿಂದ ಹೊಸ ಮೈಲಿಗಲ್ಲು

06:09 PM May 04, 2020 | Team Udayavani |

ಚಿತ್ರದುರ್ಗ: ಸರಳ, ಸಾಮೂಹಿಕ ಕಲ್ಯಾಣ ಮಹೋತ್ಸವ, ನಿತ್ಯ ದಾಸೋಹ ಮತ್ತಿತರೆ ಕಾರಣಗಳಿಗೆ ಹೆಸರಾಗಿರುವ ಚಿತ್ರದುರ್ಗದ ಮುರುಘಾ ಮಠ, ಕೊರೊನಾ ಲಾಕ್‌ ಡೌನ್‌ ಸಂದರ್ಭದಲ್ಲಿ ನಿರಂತರವಾಗಿ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

Advertisement

ಲಾಕ್‌ಡೌನ್‌ ಘೋಷಣೆಯಾಗಿ ಜನರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆ ಮಠದ ಅಂಗಳದಲ್ಲಿ ದಿನವೂ ಕನಿಷ್ಠ 200 ರಿಂದ 500 ಜನರವರೆಗೆ ದವಸ-ಧಾನ್ಯ ವಿತರಣೆ ಮಾಡಲು ಆರಂಭಿಸಲಾಯಿತು. ಕೂಲಿ ಕಾರ್ಮಿಕರು, ಆಟೋ ಚಾಲಕರು, ವಿಕಲಚೇತನರು, ಹೋಂ ಗಾರ್ಡ್ಸ್‌, ಪತ್ರಿಕಾ ವಿತರಕರು, ಕೊಳಗೇರಿ ನಿವಾಸಿಗಳು, ವಿವಿಧ ಸಮುದಾಯದ ಬಡವರು ಸೇರಿದಂತೆ ಏಪ್ರಿಲ್‌ 4 ರಿಂದ ಮೇ 3 ರವರೆಗೆ ನಿರಂತರ 27 ದಿನಗಳ ಕಾಲ ಬರೋಬ್ಬರಿ 9710 ಜನರಿಗೆ ಆಹಾರ ಸಾಮಗ್ರಿ ವಿತರಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 11 ಗಂಟೆಗೆ ಡಾ| ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ದಿನಸಿ ವಿತರಿಸಲಾಗಿದೆ. ಈ ಮೂಲಕ ಕೊರೊನಾ ಸಂದರ್ಭದಲ್ಲಿ ಹಸಿದವರಿಗೆ ಅನ್ನ ನೀಡಿದ ಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದವಸ-ಧಾನ್ಯ ವಿತರಣೆಯ ಕೊನೆಯ ದಿನವಾದ ಭಾನುವಾರ ಡಾ| ಶಿವಮೂರ್ತಿ ಮುರುಘಾ ಶರಣರು ಪೆಟ್ರೋಲ್‌ ಬಂಕ್‌ ಕಾರ್ಮಿಕರು, ಗರ್ಭಿಣಿರು, ಕೊರಿಯರ್‌ ಸಿಬ್ಬಂದಿ, ಸೀಬಾರ, ಗುತ್ತಿನಾಡು ಕಾರ್ಮಿಕರು, ಬಸವ ಬಳಗ, ಕೊಳಗೇರಿ ನಿವಾಸಿಗಳಿಗೆ ಆಹಾರ ಸಾಮಗ್ರಿ ವಿತರಿಸಿದರು.

ನಂತರ ಮಾತನಾಡಿದ ಮುರುಘಾ ಶರಣರು, ಕೊರೊನಾ ಮಹಾಮಾರಿ ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ಇಂತಹ ಸಂದರ್ಭದಲ್ಲಿ ಮನೆಯೇ ಅತ್ಯಂತ ಸುರಕ್ಷಿತ, ಬೀದಿಗೆ ಬರಬಾರದು ಎನ್ನುವುದು ಅರಿವಾಗಿದೆ. ಮುಂದೆಯೂ ಸಾಮಾಜಿಕ ಅಂತರ ಕಾಪಾಡಿಕೊಂಡಲ್ಲಿ ನಾವು ಆರೋಗ್ಯವಂತರಾಗಿ ಬದುಕಬಹುದು ಎಂದರು. ಲಾಕ್‌ಡೌನ್‌ ಸಂದರ್ಭದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಪೊಲೀಸ್‌ ಇಲಾಖೆಯ ಸಾವಿರಾರು ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಜಿಲ್ಲೆಯ ಪೊಲೀಸ್‌ ಇಲಾಖೆಗೆ ಸ್ಯಾನಿಟೈಸರ್‌ ಯಂತ್ರೋಪಕರಣ, ಸಾವಿರಾರು ಮಾಸ್ಕ್ ವಿತರಿಸಲಾಗಿದೆ. ದವಸ-ಧಾನ್ಯ ನೀಡುವ ಸಂದರ್ಭದಲ್ಲಿ ಬೆಳಗಿನ ಉಪಾಹಾರವನ್ನು ನೀಡಲಾಗಿದೆ. ಇಂತಹ ಕಾರ್ಯಗಳು ಮುಂದೊಂದು ದಿನ ಮುರುಘಾಮಠದ ಇತಿಹಾಸದಲ್ಲಿ ದಾಖಲಾಗುತ್ತವೆ ಎಂದು ಹೇಳಿದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಮುರುಘಾಮಠದಲ್ಲಿ ದಾಸೋಹದ ಪರಂಪರೆ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಹಿಂದಿನ ಜಗದ್ಗುರುಗಳು ನಾಡಿನ ಸಮಸ್ಯೆ, ಜನರ ಕಷ್ಟ ಅರಿತು ಜನರಿಗೆ ಆಸರೆಯಾಗಿದ್ದ ಸಂದರ್ಭಗಳು ನಮ್ಮ ಕಣ್ಮುಂದಿವೆ. ಶ್ರೀ ಜಯದೇವ ಸ್ವಾಮಿಗಳು ಉಳಿಸಿ ಗಳಿಸಿದ್ದಾರೆ. ಜಯವಿಭವ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು ಶ್ರೀಮಠವನ್ನು ಚೆನ್ನಾಗಿ ಬೆಳೆಸಿದ್ದಾರೆ. ಈಗಿನ ಗುರುಗಳಾದ ಮುರುಘಾ ಶರಣರು ಶ್ರೀಮಠವನ್ನು ವಿಶ್ವ ಭೂಪಟದಲ್ಲಿ ಬರುವಂತೆ ಮಾಡಿದ್ದಾರೆ. ಇದು ನಮ್ಮೆಲ್ಲರ ಪುಣ್ಯ. ನಾಡಿಗೆ, ರಾಷ್ಟ್ರಕ್ಕೆ ಗೌರವ ತರುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ದಾಸೋಹಕ್ಕಾಗಿ 50 ಕ್ವಿಂಟಾಲ್‌ ಅಕ್ಕಿ ನೀಡುವುದಾಗಿ ತಿಳಿಸಿದರು.

Advertisement

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಜಂಗಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ವೀರೇಶ್‌, ಬಸವೇಶ್ವರ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ| ಪ್ರಶಾಂತ್‌, ಉಪ ಪ್ರಾಂಶುಪಾಲ ಡಾ| ನಾರಾಯಣಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ| ಪಾಲಾಕ್ಷಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next