Advertisement

ನಾಟಕಕ್ಕಿದೆ ಬದುಕಿನ ದಿಕ್ಕು ಬದಲಿಸುವ ಶಕ್ತಿ

05:10 PM Nov 06, 2019 | Naveen |

ಚಿತ್ರದುರ್ಗ: ನಾಟಕದ ನೀತಿಗಳು ನಮ್ಮ ಬದುಕಿನ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿವೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಹೇಳಿದರು.

Advertisement

ಜಮುರಾ ಕಲಾಲೋಕ ಹಾಗೂ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಜಮುರಾ ರಾಷ್ಟ್ರೀಯ ನಾಟಕೋತ್ಸವದ ಐದನೇ ದಿನವಾದ ಮಂಗಳವಾರದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಧನಾತ್ಮಕ ಪ್ರಭಾವ ಬೀರುವ ಶಕ್ತಿ ನಾಟಕಗಳಿಗಿದೆ. ಈ ನಿಟ್ಟಿನಲ್ಲಿ ಮುರುಘಾ ಮಠ ನಾಟಕಗಳನ್ನು ಸಂಘಟಿಸುತ್ತಾ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕೂಡ ಅದ್ಭುತ ಕೆಲಸ ಎಂದು ಶ್ಲಾಘಿಸಿದರು.

ಕಳೆದ 29 ವರ್ಷಗಳಲ್ಲಿ 16 ಸಾವಿರ ಜೋಡಿ ವಿವಾಹಗಳು ನಡೆದಿರುವುದು ನಿಜಕ್ಕೂ ವಿಶ್ವ ದಾಖಲೆ. ಮದುವೆ ಹೆಸರಿನಲ್ಲಿ ಸಾಲ ಮಾಡಿ ಜೀವನ ಪೂರ್ತಿ ಸಾಲ ತೀರಿಸಲು ದುಡಿಯುವವರಿಗೆ ಶ್ರೀಮಠದ ಈ ಕೆಲಸದಿಂದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ| ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿ, ಆಧುನಿಕ ಸಮಾಜ ಅನಾಹುತಗಳಿಗೆ, ದುರ್ಘ‌ಟನೆಗಳಿಗೆ, ವಿಪತ್ತುಗಳಿಗೆ ಒಳಗಾಗುತ್ತಿದೆ. ಜಗತ್ತು ಶಾಂತಿಯಿಂದ ಅಶಾಂತಿಯ ಕಡೆಗೆ, ಸಂತೃಪ್ತಿಯಿಂದ ಅಸಂತೃಪ್ತಿಯ ಕಡೆಗೆ ವಾಲುತ್ತಿದೆ. ಇದಕ್ಕೆ ಕಾರಣ ತಳಮಳ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ತಳಮಳ, ಅತೃಪ್ತಿ, ಅಶಾಂತಿ ತುಂಬಿ ತುಳುಕುತ್ತಿದೆ ಎಂದು ವಿಷಾದಿಸಿದರು.

Advertisement

ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿಯನ್ನು ಕೈಗೆತ್ತಿಕೊಂಡು ಜ್ಞಾನದ ಪರಿಯನ್ನು ಎತ್ತರಿಸುವ ಮಹತ್ತರ ಕಾರ್ಯವನ್ನು ಶ್ರೀಮಠದ ಜಮುರಾ ಸುತ್ತಾಟ ತಂಡ ಮಾಡುತ್ತಿದೆ. ಸಾಮಾಜಿಕ, ರಾಜಕೀಯ ಪ್ರಜ್ಞೆ ಬೆಳೆಸುತ್ತ ಕೀಳರಿಮೆಯನ್ನು ತೊಲಗಿಸಲು, ತಿಳುವಳಿಕೆ ತುಂಬಲು, ಅಂತರಂಗ ಮತ್ತು ಬಹಿರಂಗವಾಗಿ ನಮ್ಮನ್ನು ಶುದ್ಧರನ್ನಾಗಿ ರಂಗಭೂಮಿ ಮಾಡುತ್ತದೆ. ಸಮಾಜವನ್ನು ಶುದ್ಧಗೊಳಿಸುವ, ಎಲ್ಲರನ್ನೂ ತಿದ್ದುವ, ಸಮುದಾಯ ಪ್ರಜ್ಞೆಯನ್ನು ಮೂಡಿಸುವ ಕಾರ್ಯವನ್ನು ಅದು ಮಾಡುತ್ತದೆ. ಉನ್ನತ ಆಲೋಚನೆಗಳಿಗೆ ಅವಕಾಶ ನೀಡುವುದು ನಾಟಕ ಸಾಹಿತ್ಯ. ಒಳ್ಳೆಯ ರಾಜಕಾರಣ, ಪ್ರವಚನದಂತೆ ನಾಟಕ ಕೂಡ ನಮ್ಮನ್ನು ಸದಾ ಚುರುಕಾಗಿಸುತ್ತವೆ ಎಂದರು.

ಹೊಳಲ್ಕೆರೆಯ ಹಿರಿಯ ರಂಗ ಕಲಾವಿದ ಸುಭಾಶ್ಚಂದ್ರ ದೇವರಗುಡ್ಡ ಅವರನ್ನು ಸನ್ಮಾನಿಸಲಾಯಿತು. ಪ್ರೊ| ಸಿ.ವಿ. ಸಾಲಿಮಠ ಸೋಮವಾರ ಸಂಜೆ ಪ್ರದರ್ಶನ ಕಂಡ ಸಾಯೋ ಆಟ ನಾಟಕದ ವಿಮರ್ಶೆ ಮಾಡಿದರು. ಸಾಯಿಲಕ್ಷ್ಮೀ ಚಗಂತಿ ರಚನೆ ಮತ್ತು ನಿರ್ದೇಶನದ ಬೈ ಒನ್‌ ಗೆಟ್‌ ಟು (ಲೈಫ್‌ ಈಸ್‌ ನಾಟ್‌ ಬ್ಯುಸಿನೆಸ್‌) ತೆಲುಗು ನಾಟಕವನ್ನು ಹೈದರಾಬಾದ್‌ನ ಜಿ.ಪಿ.ಎಲ್‌ ಮೀಡಿಯಾ ತಂಡ ಅಭಿನಯಿಸಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಪಿ. ವೀರೇಂದ್ರಕುಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next