Advertisement

ಅಲ್ಲಮನ ವಚನದಲ್ಲಿದೆ ಸಮಾಜ ಸುಧಾರಣೆಯ ಚಿಕಿತ್ಸಕ ಶಕ್ತಿ

04:56 PM Jun 07, 2019 | Naveen |

ಚಿತ್ರದುರ್ಗ: ಸಮಾಜದ ರೋಗಗಳನ್ನು ಗುಣಪಡಿಸುವ ಚಿಕಿತ್ಸಕ ಗುಣವನ್ನು ಅಲ್ಲಮನ ವಚನಗಳಲ್ಲಿ ಕಾಣಬಹುದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಬಸವ ಕೇಂದ್ರ, ಶ್ರೀ ಬೃಹನ್ಮಠ ಸಂಯುಕ್ತ ಪಪೂ ಕಾಲೇಜು, ಎಸ್‌ಜೆಎಂ ಚಿತ್ರಕಲಾ ಮಹಾವಿದ್ಯಾಲಯ, ಬಾಪೂಜಿ ಸಮೂಹ ಸಂಸ್ಥೆ ಸಹಯೋಗದಲ್ಲಿ ನಡೆದ ‘ಶರಣ ಸಂಗಮ’ ಹಾಗೂ ಕುಂವೀ ಅವರ ‘ಜೈ ಭಜರಂಗಬಲಿ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಶರಣರು ಮಾತನಾಡಿದರು.

ಕಾದಂಬರಿಗಳಲ್ಲಿ ಮೂರು ವಿಧಗಳನ್ನು ನೋಡಬಹುದು. ವಿಕೃತ ಶೈಲಿ, ವಿಕಟ ಶೈಲಿ ಮತ್ತು ವಿಡಂಬನಾ ಶೈಲಿ. ಅಲ್ಲಮನ ವಚನಗಳಲ್ಲಿ ವಿಡಂಬನಾ ಶೈಲಿ ಮತ್ತು ಸಮಾಜದ ರೋಗಗಳನ್ನು ನಿವಾರಣೆ ಮಾಡುವ ಚಿಕಿತ್ಸಕ ಗುಣವಿದೆ. ಅಲ್ಲಮ ತನ್ನ ವಿಚಾರಗಳಲ್ಲಿ ಹಾಗೂ ವಚನಗಳಲ್ಲಿ ಅದನ್ನು ಅಳವಡಿಸಿದ್ದಾನೆ. ಅಲ್ಲಮಪ್ರಭು ಸಮಾಜಮುಖೀ ಕಾರ್ಯಗಳನ್ನು ಮಾಡುವಾಗ ಸಮಾಜದ ಸರಿ ವ್ಯವಸ್ಥೆಯನ್ನು ಒಪ್ಪಿಕೊಂಡು, ಸರಿ ಅಲ್ಲದ್ದನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಕುಂವೀ ಅವರ 20ನೇ ಕಾದಂಬರಿಯಾದ ‘ಜೈ ಭಜರಂಗಬಲಿ’ ವಿಡಂಬನಾತ್ಮಕ ದೃಷ್ಟಿಕೋನ ಹೊಂದಿದೆ. ಧಾರ್ಮಿಕ, ರಾಜಕೀಯ ಹೀಗೆ ನಾನಾ ಕ್ಷೇತ್ರಗಳ ಚೇಷ್ಟೆಗಳನ್ನು ಅನಾವರಣಗೊಳಿಸುವ ಕೃತಿಯಾಗಿದೆ. ಅದಕ್ಕಾಗಿಯೆ ಮುಖಪುಟಕ್ಕೆ ಮರ್ಕಟ ಚಿತ್ರಗಳನ್ನು ಹಾಕಿದ್ದಾರೆ. ಇದು ಬರವಣಿಗೆಯಲ್ಲಿ ಪಕ್ವತೆ, ಪರಾಕಾಷ್ಠೆ ಹಾಗೂ ವಿಶೇಷತೆಗಳನ್ನು ಒಳಗೊಂಡ ಕೃತಿಯಾಗಿದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ‘ಜೈ ಭಜರಂಗಬಲಿ’ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿರುವ ಕಾದಂಬರಿಯಾಗಿದೆ. ಧರ್ಮದ ಕಪಿಮುಷ್ಠಿಯಲ್ಲಿ ಸಿಲುಕಿದ ರಾಜಕಾರಣವೇ ಕಾದಂಬರಿಯ ಕಥಾವಸ್ತು. ಕುಂ.ವೀರಭದ್ರಪ್ಪ ಅವರು ರೂಪಕಗಳನ್ನು ಬಳಸಿಕೊಂಡು ಪ್ರಸಕ್ತ ವಿದ್ಯಮಾನಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

Advertisement

ಲೇಖಕ ಕುಂ. ವೀರಭದ್ರಪ್ಪ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಸಮಾಜಮುಖೀ ಕೆಲಸಗಳನ್ನು ಈಗಿನ ಡಾ| ಶಿವಮೂರ್ತಿ ಮುರುಘಾ ಶರಣರು ಮಾಡುತ್ತಿದ್ದಾರೆ. ಅವರು ನನಗೆ ಸದಾ ಪ್ರೇರಣೆ. ಶ್ರೀಮಠದ ಸಾಮೂಹಿಕ ವಿವಾಹದಲ್ಲಿ ನನ್ನ ಮಗನ ವಿವಾಹ ನೆರವೇರಿರುವುದು ಅತ್ಯಾನಂದ ನೀಡಿದೆ. ಮುಂದಿನ ಜನ್ಮ ಎಂಬುದಿದ್ದರೆ ನಾನು, ನನ್ನ ಹೆಂಡತಿ ಇಲ್ಲಿಯೇ ವಿವಾಹವಾಗುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮೇ 31 ರಂದು ಸೇವಾ ನಿವೃತ್ತಿ ಹೊಂದಿದ ಚಿತ್ರದುರ್ಗ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ| ಎಂ.ಜಿ. ವೇದಮೂರ್ತಿ ಅವರನ್ನು ಮುರುಘಾ ಶರಣರು ಸನ್ಮಾನಿಸಿದರು. ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್‌, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಹೊಳಲ್ಕೆರೆ ಒಂಟಿಕಂಬ ಮುರುಘಾಮಠದ ಶ್ರೀ ಪ್ರಜ್ಞಾನಂದ ಸ್ವಾಮಿಗಳು, ಚಿತ್ರದುರ್ಗ ಆಕಾಶವಾಣಿ ಎಡಿಇ ಶೆಳಿಗೆಪ್ಪ, ಆನಂದಪ್ಪ, ಹೋ.ಮ. ಪಂಡಿತಾರಾಧ್ಯರು, ಪ್ರೊ| ಲಿಂಗಪ್ಪ, ಪ್ರೊ| ಶಿವಕುಮಾರ್‌, ಚಿತ್ರಲಿಂಗಸ್ವಾಮಿ, ಶೇಷಣ್ಣಕುಮಾರ್‌, ಜಂಬುನಾಥ್‌, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವಿದ್ಯಾರ್ಥಿ ಶರತ್‌ಕುಮಾರ್‌ ನಿರೂಪಿಸಿದರು. ಸುಶ್ಮಿತಾ ಸ್ವಾಗತಿಸಿದರು. ನೀಲಾ ವಂದಿಸಿದರು.

ಇಂದಿನ ಸಮಸ್ಯೆಗಳಿಗೆ ಲೇಖಕನಾಗಿ ಹೇಗೆ ಸ್ಪಂದಿಸಬೇಕೆಂಬುದನ್ನು ಅರಿತು ಈ ಕಾದಂಬರಿ ಬರೆದಿದ್ದೇನೆ. ಕಾದಂಬರಿ ಪ್ರಕಾರ ನನಗೆ ದಕ್ಕುವುದಿಲ್ಲವೆಂದು ಅನೇಕರು ಜರಿದಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿ ಕಾದಂಬರಿ ರಚನೆಯಲ್ಲಿ ತೊಡಗಿದೆ. ರಸ್ತೆ, ನೀರು, ವಿದ್ಯುತ್‌ ಕಾಣದ ಗ್ರಾಮವೊಂದರ ದೀಪದ ಬೆಳಕಿನಲ್ಲಿ ‘ಕಪ್ಪು’ ಕಾದಂಬರಿಯನ್ನು ಕೇವಲ ಎಂಟು ದಿನಗಳಲ್ಲಿ ಬರೆದಿದ್ದೇನೆ. ಆದರೆ ‘ಅರಮನೆ’ ಕಾದಂಬರಿ ಬರೆಯಲು ನನಗೆ 15 ವರ್ಷಗಳೇ ಬೇಕಾದವು.
ಕುಂ. ವೀರಭದ್ರಪ್ಪ, ಹಿರಿಯ ಲೇಖಕರು.

Advertisement

Udayavani is now on Telegram. Click here to join our channel and stay updated with the latest news.

Next