ಚಿತ್ರದುರ್ಗ: ಸಂಸದ ಎ. ನಾರಾಯಣಸ್ವಾಮಿ ಶನಿವಾರ ನಗರದ ವಿವಿಧ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಪಂ ಕಚೇರಿ ಬಳಿ ಇರುವ ಸಮಾಜಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಪದವಿಪೂರ್ವ ಕಾಲೇಜು ಬಾಲಕರ “ಬಿ’ ಹಾಸ್ಟೆಲ್‌ಗೆ ಮೊದಲು ಭೇಟಿ ನೀಡಿದರು.
ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯ, ಸರ್ಕಾರಿ ಕಲಾ ಕಾಲೇಜು “ಎ’ ವಿದ್ಯಾರ್ಥಿನಿಲಯ ಸೇರಿದಂತೆ ವಿವಿಧೆಡೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಿದ್ಯಾರ್ಥಿನಿಲಯಗಳ ಊಟದ ಕೊಠಡಿ, ಅಡುಗೆ ಕೋಣೆ, ಸ್ನಾನ ಗೃಹ, ಶೌಚಾಲಯದ ಸ್ವಚ್ಛತೆ ಪರಿಶೀಲಿಸಿದ ಸಂಸದರು, ಗುಣಮಟ್ಟದ ಆಹಾರ, ಸ್ವಚ್ಛತೆ, ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಹಾಗೂ ನಿಲಯ ಪಾಲಕರಿಗೆ ಸೂಚನೆ ನೀಡಿದರು.
ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳಿಗೆ ಭದ್ರತೆ ಒದಗಿಸಲು ತಡೆಗೋಡೆ ನಿರ್ಮಿಸಲಾಗುವುದು. ಜತೆಗೆ ಕಾಲೇಜುಗಳಿಗೆ ಅಗತ್ಯವಾಗಿ ಬೇಕಾಗಿರುವ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಕುರ್ಚಿ, ಟೇಬಲ್ ಮತ್ತಿತರ ಪೀಠೊಪಕರಣ ಒದಗಿಸುವಂತೆ ತಿಳಿಸಿದರು.
ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲಿನ ಸಂದರ್ಶಕರ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕು. ಕಡ್ಡಾಯವಾಗಿ ವಾರಕ್ಕೊಮ್ಮೆ ಹಾಸ್ಟೆಲ್‌ಗಳಿಗೆ ಭೇಟಿ ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಜಿಲ್ಲೆಯ ವಿದ್ಯಾರ್ಥಿನಿಲಯಗಳಿಗೆ ನ್ಯಾಯಾಧಿಧೀಶರು ಭೇಟಿ ನೀಡುತ್ತಿರುವುದರಿಂದ ಹಲವು ವಿದ್ಯಾರ್ಥಿನಿಲಯಗಳಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಮುಂದೆ ಪ್ರತಿ ತಿಂಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡುವುದಾಗಿ ಹೇಳಿದರು.
ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿ ಕಾರಿ ಪರಮೇಶ್ವರಪ್ಪ, ಕೆಆರ್‌ಐಡಿಎಲ್ ಅಧಿಕಾರಿ ಕೆಂಚಪ್ಪ, ಬಿಜೆಪಿ ಮುಖಂಡ ಬದರೀನಾಥ್ ಹಾಗೂ ವಿದ್ಯಾರ್ಥಿ ನಿಲಯಗಳ ನಿಲಯ ಪಾಲಕರು ಇದ್ದರು.
ಹಾಸ್ಟೆಲ್ ಸೌಲಭ್ಯಕ್ಕೆ ಕೋಟಿ ರೂ. ಬಿಡುಗಡೆ
ಹಾಸ್ಟೆಲ್‌ಗಳ ಕುಂದುಕೊರತೆ ನಿವಾರಣೆ ಸಲುವಾಗಿ ಜಿಲ್ಲೆಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜತೆಗೆ ರಾಜ್ಯ ಸರ್ಕಾರದಿಂದ 75 ಲಕ್ಷ ರೂ. ಬಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಹಾಸ್ಟೆಲ್‌ಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ ಎಂದರು. ವಿದ್ಯಾರ್ಥಿನಿಲಯಗಳಲ್ಲಿ ಇ-ಬೈಬ್ರರಿ, ಶೌಚಾಲಯಗಳ ದುರಸ್ತಿ, ಮೇಲ್ಛಾವಣಿ ದುರಸ್ಥಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.