Advertisement

ಇಲ್ಲದ ನೆಪ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ

05:25 PM Jun 08, 2019 | Naveen |

ಚಿತ್ರದುರ್ಗ: ಅನುದಾನ ಬಂದಿಲ್ಲ, ಕುಡಿವ ನೀರಿಗೆ ಹಣ ಇಲ್ಲ ಎಂದು ನೆಪ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ಕಡ್ಡಾಯವಾಗಿ ಪ್ರತಿಯೊಬ್ಬರಿಗೂ ನೀರು ಪೂರೈಸಬೇಕು ಎಂದು ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು ತಾಕೀತು ಮಾಡಿದರು.

Advertisement

ಇಲ್ಲಿನ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆವಾರು ಪರಿಶೀಲನೆ ಮಾಡಿ ಅವರು ಮಾತನಾಡಿದರು.

ಅನುದಾನ ಇಲ್ಲದಿದ್ದರೆ ನಾವು ಯಾರದಾದರೂ ಕೈಕಾಲು ಹಿಡಿದು ಅನುದಾನ ತರುತ್ತೇವೆ. ಹಳ್ಳಿಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಹೊಣೆ. ಪಿಡಿಒ ಮೇಲೆ ಅಧಿಕಾರಿಗಳು, ಅಧಿಕಾರಿಗಳ ಮೇಲೆ ಪಿಡಿಒಗಳು ಹೇಳಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಇಬ್ಬರು ಸಹಕಾರದಿಂದ ಕೆಲಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಸಕ್ಕರೆ ಕಾಯಿಲೆಗೆ ತುತ್ತಾಗಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಿರಿಧಾನ್ಯಗಳು ಸಕ್ಕರೆ ಕಾಯಿಲೆಗೆ ರಾಮಬಾಣ. ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡಬೇಕು. ಸಿರಿಧಾನ್ಯ ಆಹಾರ ಪದ್ಧತಿಯ ಉಪಯೋಗಗಳ ಕುರಿತು ಜನರಿಗೆ ತಿಳಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಹಣ ಬಿಡುಗಡೆಗೊಳಿಸಿ ಒಂದು ವರ್ಷವಾದರೂ ಕೆಲವು ಅಂಗನವಾಡಿಗಳಲ್ಲಿ ಇನ್ನು ಶೌಚಾಲಯಗಳು ನಿರ್ಮಾಣವಾಗಿಲ್ಲ. ಶೌಚಾಲಯ ಕಟ್ಟಲು ವಾದ ಬೇಡ. ಒಬ್ಬರ ಮೇಲೆ ಒಬ್ಬರು ನೆಪ ಹೇಳುವುದರಲ್ಲಿ ನಿಸ್ಸೀಮರು ಎಂದು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಒಗಳ ಮೇಲೆ ತಾಪಂ ಇಒ ಕೃಷ್ಣಾನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

Advertisement

ಚಿತ್ರದುರ್ಗ ತಾಲೂಕಿನಲ್ಲಿ 247 ಅಂಗನವಾಡಿ ಕೇಂದ್ರಗಳಿದ್ದು, 114 ಬಾಡಿಗೆ ಕಟ್ಟಡದಲ್ಲಿವೆ. 11 ಕೇಂದ್ರಗಳು ಶಾಲೆಯಲ್ಲಿವೆ. ಪಂಚಾಯತ್‌ ಕಟ್ಟಡದಲ್ಲಿ ಎರಡು, ಸಮುದಾಯ ಭವನದಲ್ಲಿ 11, ಇತರೆ ಮೂರು ಕಡೆ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಗರ್ಭಿಣಿ, ಬಾಣಂತಿಯರಿಗೆ ಅಪೌಷ್ಟಿಕತೆ ಹೋಗಲಾಡಿಸಲು ಮಾತೃವಂದನಾ ಯೋಜನೆ ಜಾರಿಗೆ ತರಲಾಗಿದೆ ಎಂದು ಸಿಡಿಪಿಒ ಸಭೆಗೆ ಮಾಹಿತಿ ನೀಡಿದರು.

ಇರುವ ಸಂಪನ್ಮೂಲಗಳನ್ನೆ ಬಳಸಿಕೊಂಡು ಕುಡಿಯುವ ನೀರಿಗೆ ಬರಗಾಲವಾಗದಂತೆ ಶಾಶ್ವತ ಯೋಜನೆ ರೂಪಿಸಿಕೊಳ್ಳಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

2010ರಿಂದಲೂ ಚಿತ್ರದುರ್ಗ ಬರಗಾಲ ಎದುರಿಸುತ್ತಾ ಬರುತ್ತಿದೆ. ಈಗ ಬರವಿದೆ. ಮುಂದೆಯೂ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ಹಳ್ಳಿಗಾಡಿನ ಜನತೆಗೆ ಶಾಶ್ವತವಾಗಿ ಕುಡಿಯುವ ನೀರು ಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ. ಹಾಗೂ ಎಲ್ಲಿಯೂ ಕೊಳವೆಬಾವಿ ವಿಫಲವಾಗದಂತೆ ನಿಗಾಹರಿಸಬೇಕು. ರೈತರ ಬೋರ್‌ ಇಲ್ಲದ ಜಮೀನುಗಳನ್ನು ಗುರುತಿಸಿ ಅಲ್ಲಿ ಕೊಳವೆಬಾವಿಗಳನ್ನು ಕೊರೆಸಿ ಎಷ್ಟೆ ದೂರವಾದರೂ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಕೊಡಿ ಎಂದು ಅಧಿಕಾರಿಗಳು ಮತ್ತು ಪಿಡಿಒಗಳಿಗೆ ತಾಕೀತು ಮಾಡಿದರು.

ಸೊಂಡೆಕೊಳ ಸಮೀಪ ಅರಣ್ಯ ಪ್ರದೇಶದಲ್ಲಿ ನೀರು ಸಿಗುವ ಜಾಗ ಗುರುತಿಸಿ ಬೋರ್‌ ಕೊರೆಸಿ. ಅದೇ ರೀತಿ ಎಲ್ಲೆಲ್ಲಿ ಕೊಳವೆಬಾವಿಗಳನ್ನು ಕೊರೆಸಲು ಸಾಧ್ಯವೋ ಅಲ್ಲೆಲ್ಲ ಕೊಳವೆಬಾವಿಗಳನ್ನು ಕೊರೆಸಿ ಗ್ರಾಮೀಣ ಪ್ರದೇಶದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿತ್ರದುರ್ಗ ತಾಲೂಕಿನಾದ್ಯಂತ 2019-20 ನೇ ಸಾಲಿನಲ್ಲಿ ಕುಡಿಯುವ ನೀರಿಗೆ ಕ್ರಿಯಾ ಯೋಜನೆ ಹಮ್ಮಿಕೊಂಡಿದ್ದೀರಾ ಎಂದು ವಾಟರ್‌ ಸಪ್ಲೆ ಇಂಜಿನಿಯರ್‌ ಶಿವಮೂರ್ತಿ ಅವರನ್ನು ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ ಪ್ರಶ್ನಿಸಿದಾಗ 31 ಹಳ್ಳಿಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದೇವೆ ತಿಳಿಸಿದಾಗ ನೀವುಗಳು ಸೂಪರ್‌ವೈಸಿಂಗ್‌ ಮಾಡುತ್ತಿಲ್ಲ. ತುಂಬಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೀರಿ ಎಂದರು. 240 ಬೋರ್‌ಗಳನ್ನು ಕೊರೆದಿದ್ದೇವೆ. ಅನಿವಾರ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಕ್ರಿಯಾ ಯೋಜನೆ ಹೊರತು ಪಡಿಸಿ ಎರಡುವರೆಯಿಂದ ಮೂರು ಕೋಟಿ ರೂ.ಗಳನ್ನು ಕುಡಿಯುವ ನೀರಿಗೆ ವ್ಯಯಿಸಲಾಗಿದೆ ಎಂದು ಇಂಜಿನಿಯರ್‌ ಶಿವಮೂರ್ತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next