ಚಿತ್ರದುರ್ಗ: ಗ್ರಾಮೀಣ ಬದುಕು ಹಾಗೂ ಕೃಷಿಯಿಂದ ವಿಮುಖರಾಗಿ ಉದ್ಯೋಗ ಅರಸಿ ನಗರಗಳಿಗೆ ಹೋದವರು ಮತ್ತೆ ಹಳ್ಳಿಗೆ ಬಂದು ಬದುಕು ಕಟ್ಟಿಕೊಳ್ಳುವುದೇ ನಿಜವಾದ ಕಲ್ಯಾಣ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಸಹಮತ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಸಾರ್ವಜನಿಕ ಸಮಾವೇಶದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಬಹುತೇಕ ಗ್ರಾಮೀಣರು ಕೃಷಿಯಿಂದ ವಿಮುಖರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅಲ್ಲಿ ಸ್ವಾಭಿಮಾನ ಕಳೆದುಕೊಂಡು ಕಂಡವರ ಕೈಕೆಳಗೆ ಕೆಲಸ ಮಾಡುತ್ತ ನರಕದ ಜೀವನ ಸಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಕೆಲಸಗಳನ್ನು ಸತ್ಯ ಶುದ್ಧವಾಗಿ ಮಾಡುವುದೇ ಕಾಯಕ. ಅದೇ ಶಿವನ ಸೇವೆ. ಹೀಗೆ ಮಾಡಿದರೆ ಶಿವನನ್ನು ನಾವು ಹುಡುಕಿಕೊಂಡು ಹೋಗಬೇಕಿಲ್ಲ, ಶಿವನೇ ನಮ್ಮನ್ನು ಹುಡುಕಿಕೊಂಡು ಬರುತ್ತಾನೆ. ಸಂಪತ್ತಿನ ಹಿಂದೆ ಹೋಗುವ ಬದಲು, ಮಾಡುವ ಕಾಯಕವನ್ನೇ ನಿಸ್ಪ್ರಹತೆಯಿಂದ ಮಾಡಿದರೆ ಬದುಕು ನಂದನವನವಾಗುತ್ತದೆ ಎಂದು ತಿಳಿಸಿದರು.
ಶರಣರು ಸಮ ಸಮಾಜವನ್ನು ಕಟ್ಟಿದ್ದು ಕಾಯಕದ ಮೂಲಕ. ಇಂದಿಗೂ ಕಾಯಕವೊಂದೇ ಸರ್ವ ಸಾಮಾಜಿಕ ರೋಗಗಳಿಗೂ ಮದ್ದು. ಬರೀ ಕಾಯಕ ಮಾಡುವುದಷ್ಟೇ ಅಲ್ಲ, ಕಾಯಕದಿಂದ ಬಂದ ಆದಾಯದಲ್ಲಿ ದಾಸೋಹವನ್ನೂ ಮಾಡಬೇಕು. ಕಾಯಕ-ದಾಸೋಹ ಪ್ರಜ್ಞೆ ಕುರಿತು ಜಾಗೃತಿ ಮೂಡಿಸುವುದು ‘ಮತ್ತೆ ಕಲ್ಯಾಣ’ದ ಪ್ರಮುಖ ಉದ್ದೇಶ. ಮುಂದೆ ಸಾಣೇಹಳ್ಳಿಯಲ್ಲಿ ಯುವಕರಿಗೆ ವಚನಕಾರರ ಬದುಕು-ಬರಹಗಳ ಕುರಿತು ತರಬೇತಿ ನೀಡಲಾಗುವುದು ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಮಾತನಾಡಿ, ‘ಮತ್ತೆ ಕಲ್ಯಾಣ’ ಜನರನ್ನು ಜಾಗೃತಗೊಳಿಸುವ ಅರಿವಿನ ಕಾರ್ಯಕ್ರಮ. ಶರಣರ ಜೀವನದ ಶ್ರೇಷ್ಠತೆಯ ಅರಿವು ಪ್ರತಿಯೊಬ್ಬರಿಗೂ ಬೇಕು. ಶರಣರು ಸಂಗ್ರಹ ಬುದ್ಧಿ ತಿರಸ್ಕರಿಸಿ ದಾಸೋಹ ಪ್ರಜ್ಞೆ ಬೆಳೆಸಿದರು. ಶರಣರ ಅಂತರಂಗ ಮೌಡ್ಯಗಳಿಗೆ ಅವಕಾಶವಿಲ್ಲದಷ್ಟು ಶುದ್ಧಿಯಾಗಿತ್ತು. ಅವರ ಜೀವನದಲ್ಲಿ ಸೂತಕ, ಪಾತಕಗಳು ಇರಲೇ ಇಲ್ಲ. ದೇಹ, ಬುದ್ಧಿ, ಮನಸ್ಸುಗಳೇ ಎಲ್ಲ ಎಂದು ಭಾವಿಸಿದ್ದರು ಎಂದು ಹೇಳಿದರು.
‘ಶರಣರ ಕೃಷಿ’ ವಿಷಯದ ಕುರಿತು ಕವಿತಾ ಮಿಶ್ರಾ ಮಾತನಾಡಿ, ರೈತರು ಏಕ ಬೆಳೆ ಪದ್ಧತಿಯನ್ನು ಬಿಟ್ಟು ಬಹು ಬೆಳೆ ಬೆಳೆಯಬೇಕು. ಇದರಿಂದ ನಷ್ಟ ಕಡಿಮೆ. ನಾನು ಸಾವಿರ ಸಾರಿ ಬಿದ್ದು ಒಂದು ಸಾರಿ ಎದ್ದವಳು. ಹೆಬ್ಬೆಟ್ಟು ಒತ್ತುವ ರೈತನೂ ಕೋಟಿ ರೂ. ಮಾತನಾಡಬೇಕು ಎನ್ನುವುದು ನನ್ನ ಆಸೆ ಎಂದರು.
ಶ್ರೀಗಂಧ ಬೆಳೆಯುವುದರಿಂದ ಹೆಚ್ಚು ಆದಾಯ ಗಳಿಸಬಹುದು. ಇದಕ್ಕಾಗಿ ಯಾರೂ ಆತಂಕ ಪಡಬೇಕಾಗಿಲ್ಲ. ಅದರ ಸುರಕ್ಷತೆಗಾಗಿ ಅನೇಕ ತಾಂತ್ರಿಕ ಉಪಕರಣಗಳು ಲಭ್ಯವಿವೆ. ಸರ್ಕಾರದ ಬೆಂಬಲವೂ ಇದೆ. ಜಗತ್ತನ್ನೇ ಅಲ್ಲಾಡಿಸುವ ಶಕ್ತಿ ರೈತರಿಗಿದೆ. ರೈತನದು ಕೊಡುವ ಕೈ ಹೊರತು ಬೇಡುವ ಕೈ ಅಲ್ಲ ಎನ್ನುವುದನ್ನು ಪ್ರತಿಯೊಬ್ಬ ರೈತರೂ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿವ ಸಂಚಾರ ಕಲಾವಿದರು ವಚನಗೀತೆ ಹಾಡಿದರು. ಶಿಕ್ಷಕ ದ್ಯಾಮಣ್ಣ ಸ್ವಾಗತಿಸಿದರು. ಕೆ.ಎಂ. ವೀರೇಶ್ ನಿರೂಪಿಸಿದರು.