Advertisement

ಸಮ ಸಮಾಜ ನಿರ್ಮಾಣಕ್ಕೆ ಜಾತಿಯೇ ಅಡ್ಡಿ

11:45 AM Jul 05, 2019 | Naveen |

ಚಿತ್ರದುರ್ಗ: ಆಧುನಿಕ ಸಮಾಜದಲ್ಲಿ ಜಾತಿ ವ್ಯಾಮೋಹ ಹೆಚ್ಚಿದೆ. ಜಾತಿಗಳು ದಂಗೆ ಏಳುವ ಸ್ಥಿತಿಯಲ್ಲಿವೆ. ಸಂಘಟನೆ ನೆಪದಲ್ಲಿ ಜಾತಿಗಳು ಗಟ್ಟಿಯಾಗತೊಡಗಿದ್ದು ಸಮ ಸಮಾಜದ ನಿರ್ಮಾಣಕ್ಕೆ ಕುತ್ತು ಬಂದಿದೆ ಎಂದು ಚಿಂತಕ ಹಾಗೂ ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಿಗೆ ಆತಂಕ ವ್ಯಕ್ತಪಡಿಸಿದರು.

Advertisement

ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಸಹಮತ ವೇದಿಕೆ ವತಿಯಿಂದ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ| ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಿರುವ ‘ಮತ್ತೆ ಕಲ್ಯಾಣ ಕಾರ್ಯಕ್ರಮ’ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿಗಳ ಮಧ್ಯೆ ಕಂದಕ ಜಾಸ್ತಿಯಾಗುತ್ತಿದೆ. 12ನೇ ಶತಮಾನದಲ್ಲಿದ್ದ ಜಾತಿ ವ್ಯವಸ್ಥೆಗಿಂತ 21ನೇ ಶತಮಾನದಲ್ಲಿನ ಜಾತಿ ವ್ಯವಸ್ಥೆ ಭೀಕರವಾಗಿದೆ. ಇದರಿಂದಾಗಿ ಮಾನವ ಅನೇಕ ಬಿಕ್ಕಟ್ಟುಗಳ ನಡುವೆ ಬದುಕುವಂತಾಗಿದೆ. ಅಂದಿನ ಕಲ್ಯಾಣ ಕ್ರಾಂತಿಯೇ ಬೇರೆ, ಇಂದು ನಡೆಯಬೇಕಿರುವ ಮತ್ತೆ ಕಲ್ಯಾಣ ಕ್ರಾಂತಿಯೇ ಬೇರೆ ಇದೆ. ಮತ್ತೆ ಕಲ್ಯಾಣ ಮಾಡುವುದು ಬಹು ದೊಡ್ಡ ಸವಾಲಿನ ಕಾರ್ಯ ಎಂದರು.

ವಚನಕಾರರ ಆಶಯದಂತೆ ನಾವು ನಡೆಯುತ್ತಿಲ್ಲ. ಬಸವಣ್ಣ ಒಂದು ಜಾತಿ ಇಟ್ಟುಕೊಂಡು ಕಲ್ಯಾಣ ಕ್ರಾಂತಿ ಮಾಡಲಿಲ್ಲ. ಎಲ್ಲ ಜಾತಿಗಳನ್ನು ಇಟ್ಟುಕೊಂಡು ಕಾಯಕದೊಂದಿಗೆ ಜಾತ್ಯತೀತವಾದ ಸಮ ಸಮಾಜ ನಿರ್ಮಾಣ ಮಾಡಿದರು. ಅಂದಿನ ವೃತ್ತಿ ಆಧಾರಿತ ಜಾತಿಗಳು ಇಂದು ವೈಭವೀಕರಿಸಿಕೊಂಡಿದ್ದು ಮಾನವನನ್ನು ಕೊಲ್ಲುತ್ತಿವೆ. ಸಣ್ಣತನ ಮೇಲುಗೈ ಸಾಧಿಸುತ್ತಿವೆ. ಆದರ್ಶ, ಆಲೋಚನೆಗಳು ಮೂಲೆಗುಂಪಾಗಿವೆ. ಸಾಮಾಜಿಕ ಚಳವಳಿಗಳ ಆಶಯ ಕಣ್ಮರೆಯಾಗಿದೆ. ನುಡಿದಂತೆ ಯಾರೂ ನಡೆಯುತ್ತಿಲ್ಲ. ನಾವೆಲ್ಲ ಕೇವಲ ನುಡಿಗೆ ಸೀಮಿತವಾಗಿದ್ದೇವೆ. ಸಾಮಾಜಿಕ ವ್ಯವಸ್ಥೆ ಎಲ್ಲರನ್ನೂ ಕಟ್ಟಿ ಹಾಕಿದೆ ಎಂದು ವಿಷಾದಿಸಿದರು.

ಇಂತಹ ಸಂದರ್ಭದಲ್ಲಿ ಡಾ| ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಸವಾಲಿನ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮಾನವನಲ್ಲಿನ ಜಾತಿ ಸಂಕುಚಿತ ಭಾವನೆಯನ್ನು ಹೋಗಲಾಡಿಸಬೇಕು. ಜಾತಿ ತಾರತಮ್ಯ ಹೋಗಬೇಕು. ಬುದ್ಧನ ತಾಯ್ತನ, ಮೈತ್ರಿ ಭಾವನೆ ಹೊಂದಬೇಕು. ನಾವೆಲ್ಲರೂ ಶ್ರೀಗಳ ನೇತೃತ್ವದಲ್ಲಿ ಮುನ್ನಡೆದು ಮತ್ತೆ ಕಲ್ಯಾಣ ಮಾಡಬೇಕಿದೆ ಎಂದು ಕರೆ ನೀಡಿದರು.

Advertisement

ಸಹಮತ ವೇದಿಕೆ ಸಂಚಾಲಕ ಜಿ.ಎಸ್‌. ಮಂಜುನಾಥ್‌ ಮಾತನಾಡಿ, ಇಡೀ ವಿಶ್ವದಲ್ಲಿ ಎಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನವರು ಪ್ರಜಾಪ್ರಭುತ್ವ ವ್ಯವಸ್ಥೆ, ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ. ಬಸವಣ್ಣನ ಕಾಲದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬಸವಣ್ಣನವರು ಕಲ್ಯಾಣ ಕ್ರಾಂತಿ ಮಾಡಿದ್ದಾರೆ ಎಂದು ಬಣ್ಣಿಸಿದರು.

ಸಾಹಿತಿ ಲೋಕೇಶ್‌ ಅಗಸನಕಟ್ಟೆ ಮಾತನಾಡಿ, ಮತ್ತೆ ಕಲ್ಯಾಣ ಆಗಬೇಕಾದರೆ ಎಲ್ಲ ಜಾತಿ, ಧರ್ಮದವರೂ ಒಗ್ಗೂಡಬೇಕು. ಕಲ್ಯಾಣದ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸಿ ಒಂದು ಸಮಾವೇಶ ಮಾಡಿದರೆ ಅದು ಕಲ್ಯಾಣ ಆಗದು ಎಂದು ಅಭಿಪ್ರಾಯಪಟ್ಟರು.

‘ಮತ್ತೆ ಕಲ್ಯಾಣ’ ಯಾವುದೇ ಜಾತಿ ವಿರುದ್ಧದ ಕಾರ್ಯಕ್ರಮವಲ್ಲ. ನಾವು ನಮ್ಮ ಆಲೋಚನೆಗಳನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಸ್ವಯಂವಿಮರ್ಶೆಗೆ ಒಳಗಾಗಬೇಕು. ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಆ. 1 ರಿಂದ ಆ.30ರ ತನಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏರ್ಪಡಿಸಲಾಗಿದೆ. ಸಹಮತ ವೇದಿಕೆ ಅಧ್ಯಕ್ಷರು, ಸಂಚಾಲಕರು, ವಿವಿಧ ಸಮಿತಿಗಳನ್ನು ರಚಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಪೂರ್ವಭಾವಿ ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ವೀರೇಶ್‌, ಬಿ.ಜಿ. ಶೇಖರ್‌, ನಿರಂಜನಮೂರ್ತಿ, ಗಿರೀಶ್‌, ತಾಜ್‌ಪೀರ್‌, ಅಹಮ್ಮದ್‌ ಸರ್ದಾರ್‌ ಪಟೇಲ್, ನಿಶಾನಿ ಜಯಣ್ಣ, ರೈತ ಸಂಘದ ಅಧ್ಯಕ್ಷ ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಸುರೇಶ್‌ಬಾಬು, ಎನ್‌.ಡಿ. ಕುಮಾರ್‌, ನೇತಾಜಿ ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next