ಚಿತ್ರದುರ್ಗ: ಪದವೀಧರ ಶಿಕ್ಷಕರಿಗೆ ಮುಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಹಕ್ಕೊತ್ತಾಯ ರ್ಯಾಲಿ ನಡೆಯಿತು.
ನಗರದ ಗಾಂಧಿ ವೃತ್ತದಿಂದ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು ನಾಲ್ಕು ಸಾವಿರ ಶಿಕ್ಷಕರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಶಿಕ್ಷಕರು ಸಾಂದರ್ಭಿಕ ರಜೆ ಹಾಕಿ ಹೊಸದುರ್ಗದಿಂದ ಬೈಕ್ ಮೂಲಕ ಹಾಗೂ ಚಳ್ಳಕೆರೆಯಿಂದ ಪಾದಯಾತ್ರೆಯಲ್ಲಿ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪದವೀಧರ ಶಿಕ್ಷಕರ ಸಮಸ್ಯೆ ಹೆಚ್ಚಿದೆ. ಪ್ರಾಥಮಿಕ ಶಾಲಾ ಶಿಕ್ಷಕರು 1-5ನೇ ತರಗತಿಗೆ ಮಾತ್ರ ಬೋಧನೆ ಮಾಡಬೇಕು. ಆದರೆ 1-8ನೇ ತರಗತಿಯವರೆಗೂ ಪಾಠ ಮಾಡುತ್ತಿದ್ದಾರೆ. ಇವರೆಲ್ಲ ಉನ್ನತ ಮಟ್ಟದ ಪದವಿ ಗಳಿಸಿದ ಶಿಕ್ಷಕರಾಗಿದ್ದಾರೆ. ಆದರೆ ಮುಂಬಡ್ತಿಯಿಂದ ವಂಚಿತರಾಗಿದ್ದು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಸರ್ಕಾರದ ಅನ್ಯಾಯ, ತಾರತಮ್ಯ ನೀತಿ ಖಂಡಿಸಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ರಾಜ್ಯದ 1.63 ಲಕ್ಷ ಶಿಕ್ಷಕರಲ್ಲಿ ಸುಮಾರು 82 ಸಾವಿರ ಪದವೀಧರ ಶಿಕ್ಷಕರಿದ್ದಾರೆ. ಇವರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅನುಭವ ಹೊಂದಿದ್ದರೂ ಯಾವುದೇ ಪ್ರತ್ಯೇಕ ವೇತನ ನೀಡಿಲ್ಲ, ಎನ್‌ಪಿಎಸ್ ಜಾರಿ ನೌಕರರಿಗೆ ಕಂಟಕವಾಗಿ ಪರಿಣಮಿಸಿದೆ. ಶಿಕ್ಷಕರ ಸಮಸ್ಯೆ ನಿವಾರಿಸದೇ ಇದ್ದಲ್ಲಿ, ಸೆ. 5ರಂದು ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ ‘ವಿಧಾನಸೌಧ ಚಲೋ’ ಹಮ್ಮಿಕೊಳ್ಳಲಾಗವುದು ಎಂದು ಎಚ್ಚರಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ. ಶಿವಾನಂದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ
ಹಾಗೂ ಜಿಲ್ಲಾ ಸಹ ಕಾರ್ಯದರ್ಶಿ ಆರ್. ಮಾರುತೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಮಂಜುನಾಥ್, ಟಿ.ಎಸ್. ರವಿಶಂಕರ್, ಕೃಷ್ಣಪ್ಪ ಮೊದಲಾದವರು ಪ್ರತಿಭಟನಾ ಮೆರವಣಿಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾ ರ್ಯಾಲಿ ನಂತರ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಕ್ಕೊತ್ತಾಯ ಸಮಾವೇಶವನ್ನು ಆಯೋಜಿಸಲಾಗಿತ್ತು..