Advertisement

ಬೆಂಗಳೂರಿನಲ್ಲಿ ನಾಳೆ ಬೃಹತ್‌ ರೈತ ಚಳವಳಿ

01:35 PM Jul 20, 2019 | Naveen |

ಚಿತ್ರದುರ್ಗ: ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮುಖ್ಯಮಂತ್ರಿ ನಿವಾಸದವರೆಗೆ ಜು.21ರಂದು ಬೃಹತ್‌ ರೈತ ಚಳವಳಿ ಹಮ್ಮಿಕೊಳ್ಳುವ ಮೂಲಕ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ಕೆ.ರಂಗಸ್ವಾಮಿ ತಿಳಿಸಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರೈತರ ಸಭೆ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಕ್ಕೆ ನಡೆಯುವ ರೈತ ಹುತಾತ್ಮ ರ್ಯಾಲಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಧೋರಣೆ ಅನುಸರಿಸುವ ಮೂಲಕ ರೈತರು ಕೃಷಿಯಿಂದ ವಿಮುಖರಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಒತ್ತಾಯಿಸಲಾಗುತ್ತದೆ. ರೈತರ ಸಾಲಮನ್ನಾ ವಿಚಾರದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುವುದನ್ನು ವಿರೋಧಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ಕೂಡಲೆ ತುಂಬಬೇಕು. ಇನ್‌ಪುಟ್ ಸಬ್ಸಿಡಿ ಹಣವನ್ನು ರೈತರ ಖಾತೆಗೆ ಭರ್ತಿ ಮಾಡಬೇಕು. ತೆಂಗು, ಅಡಿಕೆ ಬೆಳೆ ಒಣಗಿ ಹೋಗಿದ್ದು, ಸೂಕ್ತ ಪರಿಹಾರ ನೀಡಬೇಕು. ಪ್ರತಿ ಹಳ್ಳಿಗಳಲ್ಲಿನ ಒಂದೊಂದು ಕೆರೆಗೆ ಎರಡೆರಡು ಜೆಸಿಬಿಯ ಮೂಲಕ ಹೂಳು ತೆಗೆಸಿ ರೈತರೇ ಮಣ್ಣನ್ನು ತಮ್ಮ ತಮ್ಮ ಹೊಲಗಳಿಗೆ ಸಾಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆ ಮೊದಲಿನಿಂದಲೂ ಬರಪೀಡಿತ ಪ್ರದೇಶವಾಗಿರುವುದರಿಂದ ನದಿಗಳ ಜೋಡಣೆಯೇ ಬರ ನಿವಾರಣೆಗೆ ಪರಿಹಾರ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ನಿರಂತರವಾಗಿ ಎಂಟು ಗಂಟೆಗಳ ಕಾಲ ವಿದ್ಯುತ್‌ ನೀಡಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡುವುದರಿಂದ ಯಾವ ಪ್ರಯೋಜನವಿಲ್ಲ. ಅದರ ಬದಲು ಖಾತೆ ಮಾಡಿಕೊಡಬೇಕು. ಗುತ್ತಿಗೆ ಆಧಾರಿತ ನೌಕರರನ್ನು ಕಾಯಂಗೊಳಿಸಬೇಕು. ಶುಗರ್‌ ಫ್ಯಾಕ್ಟರಿಗಳಲ್ಲಿರುವ ಸಕ್ಕರೆಯನ್ನು ಮಾರಾಟ ಮಾಡಿದಾಗ ಮಾತ್ರ ರೈತರಿಗೆ ಕಬ್ಬಿನ ಬಾಕಿ ಕೊಡಬಹುದು ಎಂದು ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಹಮ್ಮಿಕೊಂಡಿರುವ ರೈತ ಹುತಾತ್ಮ ದಿನಾಚರಣೆ ಚಳವಳಿಯಲ್ಲಿ ಭಾಗವಹಿಸುವ ಜಿಲ್ಲೆಯ ರೈತರು ಜು.20ರಂದು ಸಂಜೆ 7 ಗಂಟೆಗೆ ರೊಟ್ಟಿ ಬುತ್ತಿಯೊಂದಿಗೆ ಚಿತ್ರದುರ್ಗ ರೈಲ್ವೆ ನಿಲ್ದಾಣಕ್ಕೆ ಬರುವಂತೆ ವಿನಂತಿಸಿದರು.

21 ರಂದು ಬೆಂಗಳೂರಿನಲ್ಲಿ ಹುತಾತ್ಮ ರೈತರ ಜಾಥಾ ನಡೆಸುವ ಕುರಿತು ಪ್ರವಾಸಿ ಮಂದಿರದಲ್ಲಿ ರೈತರೊಂದಿಗೆ ಚರ್ಚಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಸೋಮಗುದ್ದು ಕೆ.ರಂಗಸ್ವಾಮಿ ವಿಧಾನಸೌಧ ಮತ್ತು ಪಾರ್ಲಿಮೆಂಟ್ ಪ್ರಜಾಪ್ರಭುತ್ವದ ದೇಗುಲವಿದ್ದಂತೆ, ಅಂತಹ ಪವಿತ್ರ ಸ್ಥಳದಲ್ಲಿರುವ ರಾಜಕಾರಣಿಗಳು ಅಧಿಕಾರಕ್ಕಾಗಿ ಮಾಡಬಾರದ್ದನ್ನು ಮಾಡುತ್ತ ರೆಸಾರ್ಟ್‌ಗಳಲ್ಲಿ ಠಿಕಾಣಿ ಹೂಡಿ ಮತದಾರರಿಗೆ ವಂಚನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲವಿದ್ದು, ಕುಡಿಯುವ ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಅನ್ನದಾತ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದ್ಯಾವುದರ ಅರಿವು ಇಲ್ಲದ ಚುನಾಯಿತ ಪ್ರತಿನಿಧಿಗಳು ಜವಾಬ್ದಾರಿ ತಿಳಿದು ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಎಚ್ಚರಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ, ಗೌರವಾಧ್ಯಕ್ಷ ಕುರುಬರಹಳ್ಳಿ ಶಿವಣ್ಣ, ಉಪಾಧ್ಯಕ್ಷ ನಾರಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ, ಖಜಾಂಚಿ ಎನ್‌.ಜಿ.ಷಣ್ಮುಖಪ್ಪ, ಕೆ.ಎಸ್‌.ತಿಪ್ಪೇಸ್ವಾಮಿ, ಎ.ಎಸ್‌.ಗುರುಸಿದ್ದಪ್ಪ, ಎಸ್‌.ಕಲ್ಲಪ್ಪ, ಸತೀಶ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next