Advertisement

ಹೆಣ್ಣು ಮಗುವೆಂದರೆ ಹೀಗಳೆಯುವಿರೇಕೆ?

05:15 PM Dec 06, 2019 | Team Udayavani |

ಚಿತ್ರದುರ್ಗ: ಹೆಣ್ಣುಮಗು ಬೇಡ ಎನ್ನುವ ಭಾವನೆ ಇಂದು ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುವಂತೆ ಮಾಡಿದೆ. ಇದರಿಂದ ಇಂದು ವಧುವಿಗಾಗಿ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಬಸವ ಕೇಂದ್ರದ ಮುರುಘಾ ಮಠದಲ್ಲಿ ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಪ್ಪತ್ತೂಂಭತ್ತನೇ ವರ್ಷದ ಹನ್ನೆರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶರಣರು ಆಶೀರ್ವಚನ ನೀಡಿದರು.

ಇಂದು ಯುವತಿಯರ ಸಂಖ್ಯೆ ಕಡಿಮೆಯಾಗಲು, ಹೆಣ್ಣು ಶಿಶುವಿನ ಜನನ ಸಂಖ್ಯೆಯಲ್ಲಿ ಆಗಿರುವ ವ್ಯತ್ಯಾಸವೇ ಕಾರಣ. ಹೀಗಾಗಿ ಮಹಿಳೆಯಿಂದಲೇ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ. ತಂತ್ರಜ್ಞಾನದ ಸಹಾಯ ಹಾಗೂ ಕೆಲವೆಡೆ ಹುಟ್ಟಿದ ಹೆಣ್ಣು ಶಿಶುವಿನ ಹತ್ಯೆ ಮಾಡುವ ಕೃತ್ಯಗಳು ಇಂದಿಗೂ ನಡೆಯುತ್ತಿರುವುದು ಇಡೀ ಸಮಾಜ ತಲೆ ತಗ್ಗಿಸುವ ವಿಚಾರ ಎಂದರು.

20 ವರ್ಷಗಳ ಹಿಂದೆ ವರನನ್ನು ಹುಡುಕಿಕೊಂಡು ವಧುವಿನ ಕಡೆಯವರು ಬರುತ್ತಿದ್ದರು. ಆದರೆ ಇಂದು ವಧುವನ್ನು ಹುಡುಕಿಕೊಂಡು ವರ ಬರುವಂತಾಗಿದೆ. ಹೆಣ್ಣುಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿ. ಪುರುಷರು ಮಾಡುವ ಕೆಲಸಗಳನ್ನು ಮಾಡಲು ಅವರೂ ಸಮರ್ಥರಿದ್ದಾರೆ. ಹಾಗಾಗಿ ಲಿಂಗ ತಾರತಮ್ಯ ಮಾಡಬೇಡಿ. ಎಲ್ಲರೂ ಒಂದೇ ಎಂದು ತಿಳಿಯಿರಿ.

ಇಲ್ಲದಿದ್ದರೆ ಮುಂದೊಂದು ದಿನ ಗಂಡುಮಕ್ಕಳು ವಧುಗಾಗಿ ಪರಿತಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ವಡ್ಡನಹಾಳ್‌ನ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ಜಾತಿ-ಸಮುದಾಯಗಳನ್ನು ಮೀರಿ ಎಲ್ಲರನ್ನೂ ಒಂದುಗೂಡಿಸುತ್ತ ಬಂದಿರುವ ಮುರುಘಾ ಶರಣರು ಸಾಕಷ್ಟು ಬದಲಾವಣೆ ತರುತ್ತಿದ್ದಾರೆ. ಅವರ ಕಾರ್ಯಕ್ರಮಗಳು ಮಾದರಿ ಎಂದು ಬಣ್ಣಿಸಿದರು.

Advertisement

ಬಸವಣ್ಣನವರ ವಿಚಾರಗಳನ್ನು ಎಲ್ಲೆಡೆ ಸಾರುತ್ತ, ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮನಸ್ಸಿನ ಮೈಲಿಗೆಯನ್ನು ತೊಳೆದುಕೊಳ್ಳಬೇಕಾದರೆ ಕೂಡಲಸಂಗನ ಶರಣರು ಅಂದರೆ ಮುರುಘಾ ಶರಣರಂತಹ ಗುರುಗಳಿಂದ ಮಾತ್ರ ಸಾಧ್ಯ. ಅವರು ಇತಿಹಾಸವನ್ನೇ ನಿರ್ಮಾಣ ಮಾಡಿದ್ದಾರೆ ಎಂದರು ಪತಿ-ಪತ್ನಿ ಇಬ್ಬರೂ ಕಷ್ಟ ಸುಖಗಳಲ್ಲಿ ಸಮಾನರಾಗಿ ಪಾಲ್ಗೊಂಡು ಪರಸ್ಪರ ಅರಿತು ಗೌರವಿಸುತ್ತ ಜೀವನ ನಡೆಸಬೇಕು. ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಈ ದಿನದಿಂದ ಈ ಮಠದಿಂದ ನಿಮ್ಮಲ್ಲಿ ಆರಂಭವಾಗಬೇಕು ಎಂದು ನವ ದಂಪತಿಗಳಿಗೆ ಕಿವಿಮಾತು ಹೇಳಿದರು.

ಮುರುಘಾ ಶರಣರು ನೂತನ ವಧು ವರರಿಗೆ ತಾಳಿ, ವಸ್ತ್ರ ವಿತರಣೆ ಮಾಡಿದರು. 3 ಅಂತರ್ಜಾತಿ ಜೋಡಿ ಸೇರಿದಂತೆ ಒಟ್ಟು 31 ಜೋಡಿಗಳ ವಿವಾಹ ನಡೆಯಿತು. ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಶ್ರೀ ಬಸವನಾಗಿದೇವ ಸ್ವಾಮೀಜಿ, ಕುಂಬಾರ ಗುರುಪೀಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಎಂ.ಎಚ್‌. ಪ್ರಹ್ಲಾದಪ್ಪ, ದಾಸೋಹಿಗಳಾದ ಎಸ್‌. ರುದ್ರಮುನಿಯಪ್ಪ, ಜಿ. ದೇವರಾಜು ಇದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಪ್ರೊ| ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ಶರಣು ಸಮರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next