Advertisement

ಯೋಗಕ್ಕೆ ಹೊಸ ಭಾಷ್ಯ ಬರೆದ ಮಲ್ಲಾಡಿಹಳ್ಳಿ ಶ್ರೀ

10:43 AM Jun 21, 2019 | Naveen |

ಚಿತ್ರದುರ್ಗ: ದೇಶ ಮತ್ತು ವಿಶ್ವದಲ್ಲಿ ಯೋಗ ಇಷ್ಟೊಂದು ಪ್ರಖ್ಯಾತಿ ಪಡೆಯಲು ಹಲವಾರು ಮಹನೀಯರು ಶ್ರಮಿಸಿದ್ದಾರೆ. ಅಂಥವರ ಸಾಲಿನಲ್ಲಿ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು (1891-1996) ಅಗ್ರಗಣ್ಯರಾಗಿದ್ದಾರೆ.

Advertisement

ಯೋಗದಲ್ಲಿ ಬಹು ದೊಡ್ಡ ಸಾಧನೆ ಮಾಡಿದ ರಾಘವೇಂದ್ರ ಸ್ವಾಮಿಗಳು ಮಹಾಸಾಧಕ ಮತ್ತು ಯೋಗ ತಪಸ್ವಿಯಾದರು. ಪರಮ ಯೋಗಾಚಾರ್ಯರಾಗಿದ್ದ ಶ್ರೀಗಳು 103 ವರ್ಷಗಳ ಕಾಲ ಬದುಕಿ ಶತಾಯುಷಿಗಳಾದರು. ಇದಕ್ಕೆ ಅವರ ಯೋಗ ಸಾಧನೆಯೇ ಕಾರಣ ಎಂದರೆ ತಪ್ಪಾಗಲಾರದು. ನಿಷ್ಕಾಮ ಕರ್ಮಯೋಗಿಯಾಗಿದ್ದ ಸ್ವಾಮಿಗಳು ಆಯುರ್ವೇದದಲ್ಲೂ ಪರಿಣಿತರಾಗಿದ್ದರು. ಹಾಗಾಗಿ ರಾಘವೇಂದ್ರ ಸ್ವಾಮಿಗಳನ್ನು ಹತ್ತಿರದಿಂದ ಬಲ್ಲವರು ಅವರನ್ನು ‘ಅಭಿನವ ಧನ್ವಂತರಿ’ ಎಂದೇ ಗೌರವ ಸಲ್ಲಿಸುತ್ತಿದ್ದರು.

ಕನ್ನಡ ಚಿತ್ರರಂಗದ ಮೇರು ನಟ ಡಾ| ರಾಜ್‌ಕುಮಾರ್‌ ಅವರು ಯೋಗ ಕಲಿಯಲು ರಾಘವೇಂದ್ರಸ್ವಾಮಿಗಳೇ ಪ್ರೇರಣೆಯಾಗಿದ್ದರು. ರಾಜ್‌ ಅವರಿಗೆ ಯೋಗ ಕಲಿಸಿದರು. ರಾಘವೇಂದ್ರ ಸ್ವಾಮಿಗಳಿಂದ ಕಲಿತ ಯೋಗವನ್ನು ‘ಕಾಮನಬಿಲ್ಲು’ ಚಿತ್ರದಲ್ಲಿ ಡಾ| ರಾಜ್‌ ಮಾಡಿ ತೋರಿಸಿದ್ದರಿಂದ ಯೋಗಕ್ಕೆ ಬಹು ದೊಡ್ಡ ಮಹತ್ವ ಬಂತು.

ಕಾರಿಗನೂರಿಗೆ ತಪ್ಪಿದ ಯೋಗ ಮಲ್ಲಾಡಿಹಳ್ಳಿಗೆ ಸಿಕ್ಕಿತು: ರಾಘವೇಂದ್ರ ಸ್ವಾಮಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಆಶ್ರಮ ತೆರೆಯುವುದಕ್ಕಿಂತ ಮುನ್ನ ವಿಚಿತ್ರ ವಿದ್ಯಮಾನವೊಂದು ನಡೆದಿತ್ತು.

ಮಾಜಿ ಮುಖ್ಯಮಂತ್ರಿ ದಿ| ಜೆ.ಎಚ್. ಪಟೇಲರ ಹುಟ್ಟೂರಾದ ಕಾರಿಗನೂರಿನಲ್ಲಿ ಯೋಗ ಕಲಿಸಲು ಆಶ್ರಮ ಸ್ಥಾಪನೆಗೆ ಜಾಗ ನೀಡುವಂತೆ ಪಟೇಲರ ತಂದೆಯವರ ಬಳಿ ಜಾಗ ಕೇಳಲು ರಾಘವೇಂದ್ರ ಸ್ವಾಮಿಗಳು ಹೋಗಿದ್ದರು. ಆ ಸಂದರ್ಭದಲ್ಲಿ ಜೆ.ಎಚ್. ಪಟೇಲ್ ಅವರ ತಂದೆಯವರು, ಯಾವುದೋ ಯೋಗ ಕಲಿಸುತ್ತಾರಂತೆ, ನಾವು ಅವರಿಗೆ ಜಾಗ ನೀಡಬೇಕಂತೆ, ಇದು ಸಾಧ್ಯವಿಲ್ಲ ಎಂದು ಹೇಳಿ ಜಾಗ ನೀಡಲು ನಿರಾಕರಿಸಿದರು.

Advertisement

ಕಾರಿಗನೂರಿನಲ್ಲಿ ಜಾಗ ಸಿಗದೇ ಇದ್ದುದರಿಂದ ರಾಘವೇಂದ್ರ ಸ್ವಾಮಿಗಳು ಅನಿವಾರ್ಯವಾಗಿ 1943 ರಲ್ಲಿ ಮಲ್ಲಾಡಿಹಳ್ಳಿಗೆ ಬಂದು ಆಶ್ರಮ ಸ್ಥಾಪಿಸಿದರು. ಮುಂದೆ ರಾಘವೇಂದ್ರ ಸ್ವಾಮಿಗಳಿಂದ ಮಲ್ಲಾಡಿಹಳ್ಳಿ ವಿಶ್ವ ವಿಖ್ಯಾತವಾಗಿದ್ದೆಲ್ಲ ಈಗ ಇತಿಹಾಸ.

ಈ ವಿಷಯವನ್ನು ಜೆ.ಎಚ್. ಪಟೇಲ್ ಪುತ್ರ ಮಹಿಮಾ ಪಟೇಲ್ ಅವರು ಒಂದು ಸಮಾರಂಭದಲ್ಲಿ ನೆನಪಿಸಿಕೊಂಡಿದ್ದರು ಎಂದು ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಪತ್ರಿಕೆಗೆ ತಿಳಿಸಿದರು. ರಾಘವೇಂದ್ರ ಸ್ವಾಮೀಜಿಯವರ ಗುರುಗಳಾದ ಶಿವಾನಂದರ ಪ್ರೇರಣೆಯಂತೆ ಕರ್ನಾಟಕದ ಮೂಲೆ ಮೂಲೆಗೆ ಹೋಗಿ ಯೋಗ ಶಿಬಿರಗಳು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನೂ ಮಾಡಿದರು. ಪ್ರತಿ ವರ್ಷ ಅಕ್ಟೋಬರ್‌ 4ರಿಂದ 24 ರವರೆಗೆ ಆಯುರ್ವೇದ, ಯೋಗ ಶಿಬಿರಗಳನ್ನು ನಡೆಸಿ ಸಾವಿರಾರು ಜನರಿಗೆ ಯೋಗ ಕಲಿಸಿದರು.

ಜಿಲ್ಲೆ, ರಾಜ್ಯ, ದೇಶ, ವಿದೇಶಗಳಿಂದಲೂ ಯೋಗ ಕಲಿಯಲು ಮಲ್ಲಾಡಿಹಳ್ಳಿಗೆ ಆಗಮಿಸುತ್ತಿದ್ದ ಯೋಗಾಸಕ್ತರು ರಾಘವೇಂದ್ರ ಸ್ವಾಮಿಗಳಿಂದ ಯೋಗ ಕಲಿಯುತ್ತಿದ್ದರು ಎಂದು ಸ್ವಾಮೀಜಿಯವರ ನಿಕಟವರ್ತಿಗಳು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next