Advertisement

ಮಹಾವೀರರ ತತ್ತ್ವಾದರ್ಶ ಸದಾ ಪ್ರಸ್ತುತ

12:05 PM Apr 18, 2019 | Naveen |

ಚಿತ್ರದುರ್ಗ: ಆಧುನಿಕ ಯುಗದಲ್ಲಿ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಹಿಂಸೆ, ಸ್ವಾರ್ಥ, ವಂಚನೆಗಳೇ ಎಲ್ಲೆಲ್ಲೂ ಕಾಣಿಸುತ್ತಿವೆ. ಇಂಥವುಗಳಿಂದ ದೂರ ಇದ್ದು ಕಾಯಾ, ವಾಚಾ, ಮನಸ್ಸು ಶುದ್ಧತೆಯಿಂದ ಜಗತ್ತು ಗೆಲ್ಲಬಹುದು ಎಂದು ಸಾರಿದವರು ಮಹಾಪುರುಷ ಭಗವಾನ್‌ ಮಹಾವೀರರು ಎಂದು ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಗವಾನ್‌ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಹಣ, ಅಧಿಕಾರವೇ ಪ್ರಧಾನವಾಗಿರುವ ಈ ಹೊತ್ತಿನಲ್ಲಿ 2500 ವರ್ಷಗಳ ಹಿಂದೆ ಮನುಷ್ಯ ಜೀವನದ ಮಹತ್ವವನ್ನು, ಜಗದ ಉದ್ಧಾರ ಕುರಿತು ಬೋಧಿ ಸಿದ ಮಹಾವೀರನ ತತ್ವಗಳು ಪ್ರಸ್ತುತವಾಗುತ್ತವೆ. ಪ್ರತಿಯೊಬ್ಬರೂ ಅಹಿಂಸಾ ತತ್ವ ಪಾಲಿಸಬೇಕೆಂದು ಉಪದೇಶಿಸಿದ್ದಾರೆ.

ಕಳ್ಳತನ, ಸುಳ್ಳು, ಹೇಳುವುದು, ಮೋಸ ಮಾಡುವುದನ್ನು ವಿರೋಧಿಸುತ್ತಾ ಮಾನವ ಪ್ರೀತಿ ಮತ್ತು ದಾನ ಧರ್ಮದ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ವಿಶೇಷವಾಗಿ ಜೈನ ಧರ್ಮವನ್ನು ಪೂರ್ವ ಭಾರತದಿಂದ ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ನೆಲೆಯೂರಲು ಕಾರಣರಾಗಿದ್ದಾರೆ. ವಿಶೇಷವಾಗಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಜೈನ ಧರ್ಮೀಯರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್‌ ಮಹಾವೀರರು, ಹಿಂದಿನ 23 ತೀರ್ಥಂಕರರು ಹೇಳಲಾಗದ ತತ್ವ, ಸಿದ್ಧಾಂತಗಳನ್ನು ಅವರ ವಿಶೇಷ ಜ್ಞಾನ ಕೌಶಲ್ಯದಿಂದ ಜಗತ್ತಿಗೆ ಸಾರಿದರು. 30 ವರ್ಷಗಳ ಲೌಖೀಕ ಜೀವನ ನಡೆ, ನಂತರ ಸಮಾಜದಲ್ಲಿನ ಅನಿಷ್ಠ ಪದ್ಧತಿ, ಅಜ್ಞಾನ, ತಾರತಮ್ಯ ಹೋಗಲಾಡಿಸಲು ಅಲೌಖಿಕ ಬದುಕಿಗೆ ತಮ್ಮನ್ನು ತೊಡಗಿಸಿಕೊಂಡು ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದರು. ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಸ್ಮರಿಸಿದರು.

Advertisement

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಕೆ.ಪಿ.ಎಂ ಗಣೇಶಯ್ಯ, ಶ್ರೀನಿವಾಸ್‌ ಮಳಲಿ ಮತ್ತಿತರರು ಇದ್ದರು. ಗಂಗಾಧರ ಮತ್ತು ಹೇಮಂತ್‌ರಾಜ್‌ ನಾಡಗೀತೆ ಗಾಯನ ಪ್ರಸ್ತುತಪಡಿಸಿದರು.

ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಕವಿಗಳಿಂದ. ಹಾಗಾಗಿ ಕರ್ನಾಟಕಕ್ಕೂ ಜೈನ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ಭಗವಾನ್‌ ಮಹಾವೀರರು ತಮ್ಮ 72 ವರ್ಷಗಳ ಜೀವಿತಾವಧಿಯಲ್ಲಿ ಸುಮಾರು 30 ವರ್ಷಗಳ ಕಾಲ ಮಾನವ ಧರ್ಮದ ಮಹತ್ವವನ್ನು ಉಪದೇಶಿಸಿದ್ದಾರೆ.
ಡಾ| ಜೆ. ಕರಿಯಪ್ಪ
ಮಾಳಿಗೆ, ಪ್ರಾಧ್ಯಾಪಕರು.

Advertisement

Udayavani is now on Telegram. Click here to join our channel and stay updated with the latest news.

Next