Advertisement

ಚಿತ್ರದುರ್ಗ ಸರ್ವತೋಮುಖ ಅಭಿವೃದ್ಧಿಗೆ ಒತ್ತು: ಸಂಸದ

05:25 PM Jun 03, 2019 | Naveen |

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ನೂತನ ಸಂಸದ ಎ. ನಾರಾಯಣಸ್ವಾಮಿ ಹೇಳಿದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಅತ್ಯಂತ ಹಿಂದುಳಿದಿದೆ. ಶಾಸಕರೊಂದಿಗೆ ಚರ್ಚಿಸಿ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಬಿಜೆಪಿ ಐವರು ಶಾಸಕರು, ಕಾರ್ಯಕರ್ತರು, ಯುವ ಸಮುದಾಯ, ಪ್ರಜ್ಞಾವಂತರು, ಹಿರಿಯ ನಾಗರಿಕರು ಹಾಗೂ ಮತದಾರರು 80 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನನ್ನನ್ನು ಬೆಂಬಲಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ನೀಡುವ ಮಠಾಧೀಶರಾದ ಸಿರಿಗರೆ ಶ್ರೀಗಳು, ಸಾಣೇಹಳ್ಳಿ ಶ್ರೀಗಳು, ಉಪ್ಪಾರ ಸ್ವಾಮೀಜಿ, ಕುಂಚಿಟಿಗ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಮಾದಾರ ಸ್ವಾಮೀಜಿಯವರ ಆಶೀರ್ವಾದ, ಸಲಹೆ ಪಡೆದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಮಾರ್ಗದರ್ಶನ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ವೈಯಕ್ತಿಕ ಟೀಕೆಗಳಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ಸರಿಯಲ್ಲ. ಮಾಧ್ಯಮಗಳು ವೈಯಕ್ತಿಕ ಟೀಕೆಗಳಿಗೆ ಒತ್ತು ನೀಡಿರುವುದರಿಂದ ಸಮಾಜವನ್ನು ಪರಿವರ್ತನೆ ಮಾಡಲು ಆಗುವುದಿಲ್ಲ. ಆದ್ದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ. ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್‌ ಹಲವು ತಾಂತ್ರಿಕ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರೋಪಾಯ ಕಂಡುಹಿಡಿಯಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಮಾತನಾಡಿ, ಲೋಕಸಭಾ ಕ್ಷೇತ್ರದ ಎಂಟು

Advertisement

ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿ ಪರ ಒಲವು ವ್ಯಕ್ತಪಡಿಸಿದ್ದಾರೆ. ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಜೂ. 10ರ ನಂತರ ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಜೂ. 5 ರಂದು ಬೆಂಗಳೂರಿನಲ್ಲಿ ನೂತನ ಸಂಸದರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಜನತೆ ಸಂಸದ ನಾರಾಯಣಸ್ವಾಮಿಯವರ ಮೇಲೆ ಬಹು ದೊಡ್ಡ ನಿರೀಕ್ಷೆ ಹೊಂದಿದ್ದಾರೆ. ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಜಿಲ್ಲೆಯ ಬಹು ನಿರೀಕ್ಷಿತ ದಾವಣಗೆರೆ- ಚಿತ್ರದುರ್ಗ-ತುಮಕೂರು ನೇರ ರೈಲು ಯೋಜನೆ ಅನುಷ್ಠಾನಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸಂಸದರು ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಶೇ. 50 ರಷ್ಟು ಯೋಜನಾ ವೆಚ್ಚ, ಯೋಜನೆಗೆ ಬೇಕಾಗುವ ಭೂಮಿಯನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ. ಆದರೆ ಇದುವರೆಗೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವೇ ಪರ್ಯಾಯ ಮಾರ್ಗ ಉಪಯೋಗಿಸಿ ರೈಲು ಮಾರ್ಗ ಕಾಮಗಾರಿಯನ್ನು ಅನುಷ್ಠಾನ ಮಾಡಬೇಕು. ಈ ನಿಟ್ಟಿನಲ್ಲಿ ಮೂವರು ಸಂಸದರು ಚರ್ಚಿಸಬೇಕು. ಈ ಹಿಂದೆಯೇ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಸೂಕ್ತ ಕಟ್ಟಡ ಅಥವಾ ನಿವೇಶನ ಪಡೆದು ಕೇಂದ್ರೀಯ ವಿದ್ಯಾಲಯ ಆರಂಭಿಸಬೇಕು ಎಂದರು.

ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ಪಪಂನಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹಿರಿಯೂರು ನಗರಸಭೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಹಿನ್ನಡೆ ಅನುಭವಿಸಬೇಕಾಯಿತು. ಆದರೂ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದರು.

ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಬಿಜೆಪಿ ಮಾಜಿ ಅಧ್ಯಕ್ಷ ಸಿದ್ದೇಶ್‌ ಯಾದವ್‌, ವಿಭಾಗೀಯ ಸಹ ಪ್ರಭಾರಿ ಜಿ.ಎಂ. ಸುರೇಶ್‌, ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮಲ್ಲಿಕಾರ್ಜುನ್‌, ಬಿಜೆಪಿ ಮುಖಂಡ ಎಂ.ಎ. ಸೇತೂರಾಮ್‌, ಹಿರಿಯೂರು ತಾಲೂಕು ಬಿಜೆಪಿ ಅಧ್ಯಕ್ಷ ಕೆ. ದ್ಯಾಮಣ್ಣ, ಜಿಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ನಾಗರಾಜ್‌ ಬೇದ್ರೆ ಸುದ್ದಿಗೋಷ್ಠಿಯಲ್ಲಿದ್ದರು.

ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ರಾಜ್ಯದ ಎಲ್ಲ 7 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರೇ ಆಯ್ಕೆಯಾಗಿದ್ದಾರೆ. ಹಾಗಾಗಿ ಮೀಸಲು ಸ್ಥಾನಗಳಲ್ಲಿ ಗೆಲುವು ಸಾಧಿಸಿದವರಿಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ದೊರೆಯುವ ವಿಶ್ವಾಸವಿದೆ.
ಎ. ನಾರಾಯಣಸ್ವಾಮಿ,
ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next