Advertisement

ಜಿಲ್ಲೆಯಲ್ಲೀಗ ಬೆಟ್ಟಿಂಗ್‌ ಹವಾ!

12:40 PM Apr 22, 2019 | Team Udayavani |

ಚಿತ್ರದುರ್ಗ: ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಮುಗಿದಿದೆ. ಆದರೆ ‘ಮಳೆ ನಿಂತರೂ ಹನಿ ನಿಂತಿಲ್ಲ’ ಎಂಬಂತೆ ಸೋಲು-ಗೆಲುವಿನ ಲೆಕ್ಕಾಚಾರ ಮುಂದುವರೆದಿದೆ. ಜೊತೆಗೆ ಬೆಟ್ಟಿಂಗ್‌ ಕೂಡ ಜೋರಾಗಿಯೇ ನಡೆದಿದೆ.

Advertisement

ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು 25 ಲಕ್ಷ ರೂ. ವರೆಗೆ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಒಂದಕ್ಕೆ ಎರಡರಷ್ಟು ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ.

ಮೈತ್ರಿ ಪಕ್ಷಗಳ ಗೊಂದಲದಿಂದ ಬಿಜೆಪಿಗೆ ಹೆಚ್ಚು ಅನುಕೂಲವಾಗಿದೆ. ಜೆಡಿಎಸ್‌ ಪಕ್ಷದವರು ಕಾಂಗ್ರೆಸ್‌ ಪಕ್ಷಕ್ಕೆ ಒಳ ಹೊಡೆತ ನೀಡಿ ಬಿಜೆಪಿ ಪರ ಮತ ಚಲಾಯಿಸಿದ್ದಾರೆ, ಹಾಗಾಗಿ ಬಿಜೆಪಿಯೇ ಗೆಲ್ಲಲಿದೆ, ಎಷ್ಟು ಕಟ್ಟುತ್ತೀರಿ ಕಟ್ಟಿ ಎನ್ನುವ ಪಂಥಾಹ್ವಾನವನ್ನೂ ಕೆಲವರು ನೀಡುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಒಂದು ಹೆಜ್ಜೆ ಮುಂದೆ ಹೋಗಿ, ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಲೋಕಸಭಾ ಚುನಾವಣೆಲ್ಲಿ ಆ ರೀತಿ ಆಗದು. ಏಕೆಂದರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಚಂದ್ರಪ್ಪನವರು ಸರಳ-ಸಜ್ಜನರಾಗಿದ್ದಾರೆ. ಹಾಗಾಗಿ ಪ್ರಜ್ಞಾವಂತ ಮತದಾರರು ಪಕ್ಷ ನೋಡದೆ ಚಂದ್ರಪ್ಪನವರಿಗೆ ಮತ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಕಾರ್ಯಕರ್ತರಿಗಿಂತ ಜೆಡಿಎಸ್‌ ಕಾರ್ಯಕರ್ತರೇ ಹೆಚ್ಚು ಉತ್ಸಾಹದಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಒಂದಕ್ಕೆ ಎರಡು ನೀಡುತ್ತೇವೆ, ಕಾಂಗ್ರೆಸ್‌ ಅಭ್ಯರ್ಥಿಯೇ ಗೆಲ್ಲುತ್ತಾರೆ. ಬಾಜಿ ಕಟ್ಟಿ ಎಂದು ಆಹ್ವಾನ ನೀಡುತ್ತಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಬೆಟ್ಟಿಂಗ್‌ ಜೋರಾಗಿ ನಡೆಯುತ್ತಿದೆ. ಯಾರು ಎಷ್ಟು ಲಾಭ-ನಷ್ಟ ಮಾಡಿಕೊಂಡರು ಎನ್ನುವುದು ಮೇ 23 ರಂದು ಹೊರ ಬೀಳುವ ಚುನಾವಣಾ ಫಲಿತಾಂಶವನ್ನು ಆಧರಿಸಿದೆ.

Advertisement

ಎಲ್ಲಿ ನೋಡಿದರಲ್ಲಿ ಸೋಲು-ಗೆಲುವಿನದ್ದೇ ಚರ್ಚೆ
ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಅಂದರೆ ಕಳೆದ ಒಂದು ತಿಂಗಳಿನಿಂದ ಚಿತ್ರದುರ್ಗ ಮೀಸಲು ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ಚಿತ್ರದುರ್ಗಕ್ಕೆ ಆಗಮಿಸಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.

ಈಗ ಚುನಾವಣೆ ಮುಗಿದು ನಾಲ್ಕು ದಿನಗಳಾದರೂ ಜನ ರಾಜಕೀಯ ಚರ್ಚೆ ಬಿಟ್ಟಿಲ್ಲ. ಹೋಟೆಲ್, ಲಾಡ್ಜ್, ಬಸ್‌ನಿಲ್ದಾಣ, ಹರಟೆ ಕಟ್ಟೆ ಸೇರಿದಂತೆ ಎಲ್ಲೆಡೆ ಚುನಾವಣೆ ವಿಶ್ಲೇಷಣೆಯೇ ಕಂಡು ಬರುತ್ತಿದೆ.

ವಿಧಾನಸಭಾ ಚುನಾವಣೆಯ ಫಲಿತಾಂಶ, ಮತಗಳ ಅಂತರ (ಲೀಡ್‌), ಮೋದಿ ಅಲೆ, ಭೋವಿ ಗುರುಪೀಠದ ಸ್ವಾಮೀಜಿಯವರ ನಡೆ, ಲಂಬಾಣಿ, ಭೋವಿ ಸಮುದಾಯ ಸೇರಿದಂತೆ ಇತರೆ ಪರಿಶಿಷ್ಟ ಜಾತಿಯ ಮತದಾರರು ಯಾವ ಅಭ್ಯರ್ಥಿ ಕಡೆ ವಾಲಿದರು, ಕಾಂಗ್ರೆಸ್‌ನ ಮೈತ್ರಿ ಪಕ್ಷ ಜೆಡಿಎಸ್‌ ಚಿತ್ತ ಯಾರ ಕಡೆ ಇತ್ತು, ಯುವ ಸಮುದಾಯ ಮೋದಿ ಮೋಡಿಗೆ ಬಿತ್ತೋ ಇಲ್ಲವೋ ಎಂಬ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.

ರಾಜಕೀಯ ಪಕ್ಷಗಳ ಕಾರ್ಯಕರ್ತರು ಪೆನ್ನು, ಪೇಪರ್‌ ಹಿಡಿದು ಬೂತ್‌ ಮಟ್ಟದಲ್ಲಿ ನಮಗೆಷ್ಟು ಮತ ಬಂದಿದೆ, ವಿರೋಧಿಗಳಿಗೆಷ್ಟು ಮತ ಬಿದ್ದಿದೆ ಎಂದು ಲೆಕ್ಕಾಚಾರ ಹಾಕ ತೊಡಗಿದ್ದಾರೆ. ಮತದಾನ ಪ್ರಮಾಣ ಹಾಗೂ ಬೂತ್‌ ಮಟ್ಟದಲ್ಲಿನ ಮಾಹಿತಿಯನ್ನು ನಾಯಕರು ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next