Advertisement
‘ಶತ್ರುವಿನ ಶತ್ರು ಮಿತ್ರ’ ಎನ್ನುವಂತೆ ಬಿಜೆಪಿ ವಿರೋಧಿಗಳೆಲ್ಲರೂ ಈ ಕ್ಷೇತ್ರದಲ್ಲಿ ಒಗ್ಗೂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ರಾಜಕೀಯ ಗುರುವಿಗೇ ತಿರುಮಂತ್ರ ಹಾಕಿಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಜೊತೆಗೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಎಸ್. ತಿಪ್ಪೇಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದರು. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದು ಫಲಿತಾಂಶದ ನಂತರ ಬಹಿರಂಗಗೊಳ್ಳಲಿದೆ.
Related Articles
Advertisement
ಶ್ರೀರಾಮುಲು 84,018 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ| ಯೋಗೇಶ್ ಬಾಬು 41,973, ಪಕ್ಷೇತರ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ 41,152 ಹಾಗೂ ಜೆಡಿಎಸ್ ಅಭ್ಯರ್ಥಿ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ 15,262 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಎಸ್. ತಿಪ್ಪೇಸ್ವಾಮಿ ಪಡೆದ ಮತಗಳನ್ನು ಸೇರಿಸಿದರೆ 98,387 ಮತಗಳಾಗುತ್ತವೆ. ಅಂದರೆ ಶ್ರೀರಾಮುಲು ಪಡೆದ ಮತಗಳಿಗಿಂತ 14,369 ಹೆಚ್ಚು. ಹೊರಗಿನಿಂದ ಬಂದು ಶಾಸಕರಾದ ಶ್ರೀರಾಮುಲು ವಿರುದ್ಧ ಕತ್ತಿ ಮಸೆಯುತ್ತಿದ್ದ ವಿರೋಧಿಗಳೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಹೋರಾಟ ಮಾಡಿದ್ದಾರೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಮತ್ತು ಕೊಂಡ್ಲಹಳ್ಳಿ ಹೋಬಳಿಗಳು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಸಬಾ, ದೇವಸಮುದ್ರ ಮತ್ತು ರಾಂಪುರ ಹೋಬಳಿಗಳು ಬಿಜೆಪಿಗೆ ಹೆಚ್ಚಿನ ಲೀಡ್ ನೀಡಿದ್ದವು. ಹಾಗಾಗಿ ಯಾರಿಗೆ ಒಳೇಟು ಬಿದ್ದಿದೆ, ಇದನ್ನೆಲ್ಲ ಎದುರಿಸಿ ಯಾರು ವಿಜಯಮಾಲೆ ಧರಿಸುತ್ತಾರೆ ಎಂಬ ಕುತೂಹಲ ಮೂಡಿದ್ದು,ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.
ಕೋನಾಪುರ ಮತಗಟ್ಟೆಯಲ್ಲಿ ಹೆಚ್ಚು ಮತದಾನಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ಕೋನಾಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 11 ರಲ್ಲಿ ಆಗಿದೆ. ಇಲ್ಲಿ ಶೇ. 90. 75 ರಷ್ಟು ಮತದಾನವಾಗಿದೆ. ಈ ಮತಗಟ್ಟೆಯಲ್ಲಿ 458 ಪುರುಷ, 461 ಮಹಿಳೆಯರು ಸೇರಿದಂತೆ ಒಟ್ಟು 919 ಮತದಾರರಿದ್ದಾರೆ. ಅವರಲ್ಲಿ 423 ಪುರುಷರು ಹಾಗೂ 411 ಮಹಿಳೆಯರು ಸೇರಿದಂತೆ ಒಟ್ಟು 834 ಮತದಾರರು ಮತ ಚಲಾಯಿಸಿದ್ದಾರೆ. ಅತಿ ಕಡಿಮೆ ಮತದಾನ ರಾಂಪುರ ಎಚ್ಪಿಬಿಎಸ್ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 38 ರಲ್ಲಿ ಅಂದರೆ ಶೇ. 59. 67 ರಷ್ಟಾಗಿದೆ. ಈ ಮತಗಟ್ಟೆಯಲ್ಲಿ 419 ಪುರುಷರು, 468 ಮಹಿಳೆಯರು ಸೇರಿ ಒಟ್ಟು 887 ಮತದಾರರಿದ್ದಾರೆ. ಈ ಪೈಕಿ 250 ಪುರುಷರು, 266 ಮಹಿಳೆಯರು ಸೇರಿದಂತೆ ಒಟ್ಟು 516 ಜನರು ಮತದಾನ ಮಾಡಿದ್ದಾರೆ.