Advertisement

ಮತ ಏರುಪೇರು: ಲೆಕ್ಕಾಚಾರ ಶುರು

11:41 AM Apr 20, 2019 | Naveen |

ಚಿತ್ರದುರ್ಗ: ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ, ಚುನಾವಣಾ ಆಯೋಗ, ಸ್ವೀಪ್‌ ಸಮಿತಿಯ ವ್ಯಾಪಕ ಪ್ರಚಾರದ ನಡುವೆಯೂ ಲೋಕಸಭೆ ಚುನಾವಣೆಯಲ್ಲಿ ವಿಧಾನಸಭಾ ಚುನಾವಣೆ ಮತದಾನಕ್ಕಿಂತ ಶೇ. 9.75ರಷ್ಟು ಮತದಾನ ಕಡಿಮೆಯಾಗಿದೆ. ಇದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಶೇ. 66
ರಷ್ಟು ಮತದಾನವಾಗಿತ್ತು. ಪ್ರಸಕ್ತ ಸಾಲಿನಲ್ಲಿ
ಶೇ. 70.79ರಷ್ಟು ಮತದಾನವಾಗಿದ್ದು, ಶೇ. 4.79 ರಷ್ಟು ಏರಿಕೆ
ಆಗಿದ್ದರೂ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ. 9.75ರಷ್ಟು ಕಡಿಮೆ ಮತದಾನವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

2018ರ ಮೇ 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 80.54 ರಷ್ಟು ಫಲಿತಾಂಶ ದೊರೆತಿತ್ತು. ಆದರೆ 11 ತಿಂಗಳ ನಂತರ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಶೇ. 70.79 ರಷ್ಟು ಮತದಾನವಾಗುವ ಮೂಲಕ ಮತ ಚಲಾವಣೆ ಪ್ರಮಾಣ ಕಡಿಮೆಯಾಗಿದೆ.

ಸುಮಾರು ಶೇ.10 ರಷ್ಟು ಮತದಾನ ಕಡಿಮೆಯಾಗಿರುವುದರಿಂದ ಅಭ್ಯರ್ಥಿಗಳ ಸೋಲು ಮತ್ತು ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಶೇ. 80.54 ರಷ್ಟು ಮತದಾನ ಆಗಿತ್ತು. 2013ರ ಚುನಾವಣೆಗಿಂತ
ಶೇ. 3.75 ರಷ್ಟು ಮತದಾನ ಹೆಚ್ಚಳವಾಗಿ ಜಿಲ್ಲೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು.

ಇದಾಗಿ ಕೇವಲ 11 ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಉಲ್ಟಾ ಆದರೂ ಅಚ್ಚರಿ ಇಲ್ಲ.

Advertisement

ಮತದಾರರ ಸಂಖ್ಯೆಯಲ್ಲಿ ಹೆಚ್ಚಳ: 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ 2018ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ 1,23,212 ಮತದಾರರು ಹೆಚ್ಚಳವಾಗಿದ್ದರು.

ಅಲ್ಲದೆ ಲೋಕಸಭಾ ಚುನಾವಣೆ ವೇಳೆ ಮತ್ತೆ 41,713 ಮತದಾರರು
ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಎರಡು ಚುನಾವಣೆಗಳಿಂದ ಸುಮಾರು 1,64,925 ಮತದಾರರು ಹೆಚ್ಚಳವಾಗಿದ್ದಾರೆ. ಯುವ ಮತದಾರರು ದೇಶಪ್ರೇಮ, ಮೋದಿ ಮೇಲಿನ ಅಭಿಮಾನದಿಂದ ಮತದಾನ ಮಾಡಲಿದ್ದಾರೆನ್ನುವ ಬಲವಾದ ನಂಬಿಕೆ ಬಿಜೆಪಿ ಅಭ್ಯರ್ಥಿಗೆ ಇತ್ತು. ಅಂದರೆ ಅನಾಯಸವಾಗಿ ಒಂದು ಲಕ್ಷಕ್ಕೂ ಅಧಿಕ ಮತಗಳು ಬಿಜೆಪಿಗೆ ಬರಲಿವೆ ಎನ್ನುವ ವಿಶ್ವಾಸ ಹೊಂದಿದ್ದರು.

ಮತದಾನದ ಪ್ರಮಾಣ ಗಮನಿಸಿದರೆ ಅವರ ನಂಬಿಕೆ ಕ್ಷೀಣಗೊಂಡಂತೆ ಕಾಣುತ್ತಿದೆ. ಗೆಲುವಿನ ವಿಶ್ವಾಸ ಹೊಂದಿರುವ ಕಾಂಗ್ರೆಸ್‌ ಅಭ್ಯರ್ಥಿ ಈ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತಿಲ್ಲ. ವಿಧಾನಸಭಾವಾರು ಫಲಿತಾಂಶ: ತೀವ್ರ
ಜಿದ್ದಾಜಿದ್ದಿನಿಂದ ಕೂಡಿದ್ದ 2018ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶೇ. 82.72 ರಷ್ಟು ಮತದಾನವಾಗಿತ್ತು. ಇದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಶೇ.72.88 ರಷ್ಟು ಮತದಾನವಾಗಿದೆ. ಅಂದರೆ ಶೇ. 9.84 ರಷ್ಟು ಕಡಿಮೆ. ಚಳ್ಳಕೆರೆ ಕ್ಷೇತ್ರದಲ್ಲಿ ಶೇ. 80.29 ಮತದಾನವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ 72.22 ರಷ್ಟು ಮತದಾನವಾಗುವ ಮೂಲಕ ಶೇ. 8.07ರಷ್ಟು ಕಡಿಮೆ ಮತದಾನವಾಗಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ. 74.55 ಮತದಾನವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ 68.18 ರಷ್ಟು ಮತದಾನವಾಗಿದೆ.

ಅಂದರೆ ಶೇ. 6.39ರಷ್ಟು ಮತದಾನ ಕಡಿಮೆ ಆಗಿದೆ. ಹಿರಿಯೂರು ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶೇ. 79.40 ರಷ್ಟು
ಮತದಾನವಾಗಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಶೇ. 68.32 ರಷ್ಟು ಮತದಾನ ಆಗುವ ಮೂಲಕ ಶೇ. 11.08ರಷ್ಟು ಮತದಾನ
ಕಡಿಮೆ ಆಗಿದೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ. 84.31ರಷ್ಟು ಮತದಾನವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಶೇ. 72.94 ರಷ್ಟು ಮತದಾನ ಆಗುವ ಮೂಲಕ ಶೇ.11.37ರಷ್ಟು
ಇಳಿಕೆಯಾಗಿದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 83.29ರಷ್ಟು ಮತದಾನವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಶೇ. 72.71ರಷ್ಟು ಮತದಾನ ಆಗುವ ಮೂಲಕ ಶೇ. 10.58ರಷ್ಟು ಕಡಿಮೆ ಮತದಾನವಾಗಿದೆ.

ಒಟ್ಟಾರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಮತದಾನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ ಇಡೀ ಜಿಲ್ಲೆಯಲ್ಲಿ ಶೇ. 9.75ರಷ್ಟು ಕಡಿಮೆ ಮತದಾನ ಆಗಿದೆ. ಯುವ ಮತದಾರರ ಸಂಖ್ಯೆ ಹೆಚ್ಚಳವಾದರೂ ಮತದಾನ ಕಡಿಮೆ ಆಗಿರುವುದು ವಿಪರ್ಯಾಸ.

ಕಡಿಮೆ ಮತದಾನಕ್ಕೇನು ಕಾರಣ?
ಮತದಾನ ಕಡಿಮೆಯಾಗಲು ಹಲವಾರು ಕಾರಣಗಳು ತಳಕು ಹಾಕಿಕೊಳ್ಳುತ್ತಿವೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಎಸ್ಸಿ ಮೀಸಲಾಗಿದ್ದು ಯಾರೂ ಗೆದ್ದರೇ ನನಗೇನು ಎನ್ನುವ ನಕಾರಾತ್ಮಕ ಧೋರಣೆ ಮೇಲ್ವರ್ಗಗಳಲ್ಲಿ ಇದ್ದಂತೆ ಕಾಣುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿಕೆ ಮಾಡಿರುವ ವಿಷಯ ಬೆಳಕಿಗೆ ಬರಲಿಲ್ಲ. ಹಾಗಾಗಿ ಮತದಾರರಲ್ಲಿ ಹಣವಿಲ್ಲದೆ ಏಕೆ ಮತ ಹಾಕಬೇಕು ಎನ್ನುವ ಧೋರಣೆಯೂ ಇದ್ದಂತೆ ಕಾಣುತ್ತಿದೆ. ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಯಾರೇ ಗೆದ್ದರೂ ಮಾದಿಗರೇ
ಗೆಲ್ಲಲಿದ್ದಾರೆನ್ನುವ ಉದಾಸೀನ ಮನೋಭಾವ, ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿ ಇಲ್ಲದೇ ಇರುವುದು, ರಾಜಕೀಯ ಪಕ್ಷಗಳು ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾನಕ್ಕೆ ಪ್ರೇರೇಪಿಸದಿರುವುದು, ಮತದಾರರಿಗೆ ಶಿಕ್ಷಣ ಕೊರತೆ, ಬಡತನ, ಅಜ್ಞಾನ, ಬಾಲ್ಯವಿವಾಹ, ಮೂಢನಂಬಿಕೆ, ಗುಳೆ, ನಿರುದ್ಯೋಗ
ಮತ್ತಿತರ ಸಮಸ್ಯೆಗಳು ಸೇರಿದಂತೆ ಸಾಲು ಸಾಲು ರಜೆ ಮತ್ತಿತರ ಕಾರಣಗಳಿಂದಾಗಿ ಮತದಾನದಲ್ಲಿ ಕುಸಿತ ಕಂಡು ಬಂದಿದೆ. ಇದರ ಪರಿಣಾಮ ಏನೆಂಬುದು ಮೇ 23 ರಂದು ಗೊತ್ತಾಗಲಿದೆ.

ಕಳೆದ ಲೋಕಸಭಾ ಚುನಾವಣೆಗಿಂತ ಶೇ. 5 ರಷ್ಟು ಮತದಾನದಲ್ಲಿ
ಹೆಚ್ಚಳವಾಗಿದೆ. ಆದರೆ ವಿಧಾನಸಭಾ ಚುನಾವಣೆಗೆ
ಹೋಲಿಸಿದರೆ ಶೇ. 9.75 ರಷ್ಟು ಕಡಿಮೆಯಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಿಂತ ಲೋಕಸಭಾ ಕ್ಷೇತ್ರ ವ್ಯಾಪ್ತಿ ದೊಡ್ಡದಿರುತ್ತದೆ. ಹಾಗಾಗಿ ಸಹಜವಾಗಿ ಮತದಾನ ಕಡಿಮೆಯಾಗಿರಬಹುದು.
. ಸಿ. ಸತ್ಯಭಾಮ,
ಸ್ವೀಪ್‌ ಸಮಿತಿ ಅಧ್ಯಕ್ಷರು.

ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ
ಚುನಾವಣೆಯೇ ಬೇರೆ. ವಿಧಾನಸಭಾ ಕ್ಷೇತ್ರ ಚಿಕ್ಕದಿದ್ದು
ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಆದರೆ
ಲೋಕಸಭಾ ಕ್ಷೇತ್ರ ದೊಡ್ಡದು. ಕಾರ್ಯಕರ್ತರ ಉತ್ಸಾಹ ಕಡಿಮೆ ಇರುತ್ತದೆ. ಅಲ್ಲದೆ ಜಿಲ್ಲೆಯಲ್ಲಿನ ಬಿರುಬಿಸಿಲು ಮತದಾನ ಕುಗ್ಗಲು
ಕಾರಣವಾಗಿದೆ. ಆದರೂ ನಮ್ಮ ಅಭ್ಯರ್ಥಿ ಗೆಲುವಿಗೆ ಯಾವುದೇ ತೊಂದರೆಯಿಲ್ಲ.
. ಕೆ.ಎಸ್‌. ನವೀನ್‌, ಬಿಜೆಪಿ ಜಿಲ್ಲಾಧ್ಯಕ್ಷರು.

ಜಿಲ್ಲೆಯಲ್ಲಿ ಕಂಡು ಕೇಳರಿಯದಷ್ಟು ಬಿಸಿಲು ಇದ್ದ ಕಾರಣ ಮತದಾನ ಕಡಿಮೆಯಾಗಿರಬಹುದು. ಆದರೆ ಕಳೆದ ಲೋಕಸಭಾ ಚುನಾವಣೆಗಿಂತ ಶೇ. 5ರಷ್ಟು ಮತದಾನ ಹೆಚ್ಚಾಗಿದೆ. ಫಲಿತಾಂಶ ಹೆಚ್ಚು ಕಡಿಮೆ ಎನ್ನುವುದಕ್ಕಿಂತ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಪ್ಪನವರು ಲಕ್ಷಕ್ಕೂ ಅಧಿಕ ಮತಗ  ಅಂತರದಿಂದ ಗೆಲುವು
ಸಾಧಿಸುವುದು ನಿಶ್ಚಿತ.
.ಫಾತ್ಯರಾಜನ್‌,
ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next