Advertisement
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಶ್ರೀರಾಮುಲು ಪ್ರನಿಧಿಸುವ ಮೊಳಕಾಲ್ಮೂರು, ಕಾಂಗ್ರೆಸ್‌ನ ಟಿ. ರಘುಮೂರ್ತಿ ಶಾಸಕರಾಗಿರುವ ಚಳ್ಳಕೆರೆ ಹಾಗೂ ಕಾಂಗ್ರೆಸ್‌ನ ವೆಂಕಟರಮಣಪ್ಪ ಪ್ರತಿನಿಧಿಸುವ ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಮುನ್ನಡೆ ಸಿಕ್ಕಿದೆ. ಇನ್ನುಳಿದಂತೆ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಲೀಡ್ ಪಡೆದುಕೊಂಡಿದ್ದಾರೆ.
Related Articles
Advertisement
ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ 82,896 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಮೈತ್ರಿ ಅಭ್ಯರ್ಥಿಗಳ ಮತಗಳನ್ನು ಸೇರಿಸಿದರೆ 98,925 ಆಗುತ್ತದೆ. ಲೋಕ ಸಮರದಲ್ಲಿ ಬಿ.ಎನ್. ಚಂದ್ರಪ್ಪ 66,735 ಮತ ಹಾಗೂ ಎ. ನಾರಾಯಣಸ್ವಾಮಿ 98,743 ಮತ ಪಡೆದಿದ್ದಾರೆ. ಬಿಜೆಪಿ 32,007 ಮತಗಳ ಲೀಡ್ ಪಡೆದಿದೆ.
ಹಿರಿಯೂರು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು 1,06,902 ಮತಗಳನ್ನು ಪಡೆದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ 3946 ಮತಗಳ ಲೀಡ್ ಸಿಕ್ಕಿದೆ. ಬಿ.ಎನ್. ಚಂದ್ರಪ್ಪ, 73071 ಹಾಗೂ ಎ. ನಾರಾಯಣಸ್ವಾಮಿ 77,017 ಮತಗಳನ್ನು ಪಡೆದುಕೊಂಡಿದ್ದಾರೆ.
ಹೊಸದುರ್ಗ: ವಿಧಾನಸಭಾ ಚುನಾವಣೆಯಲ್ಲಿ 64,570 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷ, ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ನೆಲ ಕಚ್ಚಿದೆ. ಬಿ.ಎನ್. ಚಂದ್ರಪ್ಪ 50,121, ಎ. ನಾರಾಯಣಸ್ವಾಮಿ 79,658 ಮತ ಗಳಿಸಿದ್ದಾರೆ. ಬಿಜೆಪಿ 29,537 ಲೀಡ್ ಪಡೆದಿದೆ.
ಹೊಳಲ್ಕೆರೆ: ಮಾಜಿ ಸಚಿವ ಎಚ್. ಆಂಜನೇಯ ಅವರ ಸ್ವಕ್ಷೇತ್ರದಲ್ಲಿ ಬಿಜೆಪಿ 38,082 ಮತಗಳ ಲೀಡ್ ಪಡೆದುಕೊಂಡಿದೆ. ಬಿ.ಎನ್. ಚಂದ್ರಪ್ಪ 59,398 ಹಾಗೂ ಎ. ನಾರಾಯಣಸ್ವಾಮಿ 97,480 ಮತ ಗಳಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಂ. ಚಂದ್ರಪ್ಪ 1,07,976 ಮತಗಳನ್ನು ಪಡೆದಿದ್ದರು. ಅವರಿಗಿಂತ ನಾರಾಯಣಸ್ವಾಮಿ 10,496 ಮತಗಳನ್ನು ಕಡಿಮೆ ಪಡೆದಿರುವುದು ಬಿಜೆಪಿ ನಾಯಕರು ಯೋಚನೆ ಮಾಡುವಂತೆ ಮಾಡಿದೆ.
ಚಳ್ಳಕೆರೆ: ವಿಧಾನಸಭಾ ಚುನಾವಣೆಯಲ್ಲಿ ಟಿ. ರಘುಮೂರ್ತಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದರು. ರಘುಮೂರ್ತಿಯವರು ಕ್ಷೇತ್ರದ ಮೇಲೆ ಹಿಡಿತ ಹೊಂದಿರುವುದರಿಂದ ಅಲ್ಲಿ ಮೈತ್ರಿ ಅಭ್ಯರ್ಥಿಗೆ ಅತ್ಯಲ್ಪ ಲೀಡ್ ದೊರೆತಿದೆ. ಬಿ.ಎನ್. ಚಂದ್ರಪ್ಪ 72,987 ಹಾಗೂ ಎ. ನಾರಾಯಣಸ್ವಾಮಿ 70,223 ಮತಗಳನ್ನು ಪಡೆದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 33,471 ಮತ ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ 72,874 ಹಾಗೂ ಜೆಡಿಎಸ್ ಅಭ್ಯರ್ಥಿ 59,335 ಮತಗಳನ್ನು ಪಡೆದಿದ್ದರು. ಮೈತ್ರಿ ಪಕ್ಷಗಳ ಮತಗಳನ್ನು ಒಟ್ಟುಗೂಡಿಸಿದರೆ 1,32,209 ಮತಗಳಾಗುತ್ತದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕೇವಲ 2764 ಮತಗಳ ಮುನ್ನಡೆಯನ್ನು ಮೈತ್ರಿ ಅಭ್ಯರ್ಥಿ ಪಡೆದಿದ್ದಾರೆ. ಹಾಗಾಗಿ ಈ ಬಗ್ಗೆ ದೋಸ್ತಿ ಪಕ್ಷಗಳ ಮುಖಂಡರು ಗಂಭೀರ ಚಿಂತನೆ ನಡೆಸಬೇಕಿದೆ.
ಶಿರಾ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 16 ಸಾವಿರ ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಬಿ. ಸತ್ಯನಾರಾಯಣ 74,338 ಮತಗಳು ಹಾಗೂ ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ 63,973 ಮತಗಳನ್ನು ಪಡೆದಿದ್ದರು. ಇಬ್ಬರ ಮತಗಳನ್ನು ಸೇರಿಸಿರೆ 1,38,311 ಮತಗಳಾಗುತ್ತವೆ. ಆದರೆ ಆಶ್ವರ್ಯ ಎಂದರೆ ಇಲ್ಲಿ ಬಿಜೆಪಿ 11,566 ಮುನ್ನಡೆ ಪಡೆದುಕೊಂಡಿದೆ. ಬಿ.ಎನ್. ಚಂದ್ರಪ್ಪ 67,937 ಮತ ಪಡೆದರೆ, ಎ. ನಾರಾಯಣಸ್ವಾಮಿ 79,503 ಮತ ಪಡೆದು ಅಚ್ಚರಿಗೆ ಕಾರಣರಾಗಿದ್ದಾರೆ.
ಪಾವಗಡ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 12 ಸಾವಿರ ಮತ ಪಡೆದಿದ್ದರು. ಬಿ.ಎನ್. ಚಂದ್ರಪ್ಪ 69,303, ಎ. ನಾರಾಯಣಸ್ವಾಮಿ 49,731 ಮತಗಳನ್ನು ಪಡೆದಿದ್ದಾರೆ. ಮೈತ್ರಿ ಅಭ್ಯರ್ಥಿಗೆ 19,572 ಮತಗಳ ಮುನ್ನಡೆ ಸಿಕ್ಕಿದೆ. ಕಾಂಗ್ರೆಸ್‌ನ ವೆಂಕಟರಮಣಪ್ಪ 72,974 ಜೆಡಿಎಸ್‌ನ ಕೆ.ಎಂ. ತಿಮ್ಮರಾಯಪ್ಪ 72,565 ಮತಗಳನ್ನು ಪಡೆದಿದ್ದರು. ಇಬ್ಬರ ಮತಗಳನ್ನು ಸೇರಿಸಿದರೆ 1,45,539 ಆಗುತ್ತದೆ. ಆದರೆ ಈ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಗೆ ಸಿಕ್ಕ ಲೀಡ್ ಗಮನಿಸಿದರೆ ಈ ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ತಾಳ ಮೇಳ ತಪ್ಪಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ತಗ್ಗಿದ ರಾಮುಲು ವರ್ಚಸ್ಸು?ವಿಧಾನಸಭಾ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದರು. 84,018 ಮತಗಳನ್ನು ಗಳಿಸಿದ್ದ ಅವರು 42,045 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ 85,607 ಮತಗಳನ್ನು ಗಳಿಸಿ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ (71,845 ಮತಗಳು) ಅವರಿಗಿಂತ 13,762 ಮತಗಳ ಲೀಡ್ ಪಡೆದಿದ್ದಾರೆ. ಮೋದಿ ಅಲೆ ಹಾಗೂ ಶ್ರೀರಾಮುಲು ನಾಯಕತ್ವ ಇದ್ದಾಗ್ಯೂ ಮೈತ್ರಿಕೂಟದ ಅಭ್ಯರ್ಥಿ ಲೀಡ್ ಪಡೆದಿರುವುದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಹರಿಯಬ್ಬೆ ಹೆಂಜಾರಪ್ಪ