Advertisement

ಲೋಕಲ್ ದೊರೆಗಳ ಭವಿಷ್ಯಕ್ಕೆ ಮತ ಮುದ್ರೆ

12:42 PM May 30, 2019 | Naveen |

ಚಿತ್ರದುರ್ಗ: ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌, ಗ್ರಾಮ ಪಂಚಾಯತ್‌ಗಳ ಖಾಲಿ ಇದ್ದ ಸದಸ್ಯ ಸ್ಥಾನಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯಲ್ಲಿ ಒಟ್ಟು ಶೇ. 78.99 ಮತದಾನ ದಾಖಲಾಗಿದೆ.

Advertisement

ಹಿರಿಯೂರು ನಗರಸಭೆ ಶೇ. 70.93, ಮೊಳಕಾಲ್ಮೂರು ಶೇ. 83.19 ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌ದಲ್ಲಿ ಶೇ. 82.85 ಮತದಾನವಾಗಿದೆ. ಜಿಲ್ಲೆಯ ಹಲವೆಡೆ ಸುರಿದ ಮಳೆಯಿಂದಾಗಿ ಮಧ್ಯಾಹ್ನದವರೆಗೆ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇತ್ತು. ಹೀಗಾಗಿ ಇಂದು ಕೂಡ ಮಳೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮತದಾನ ಸಂದರ್ಭದಲ್ಲಿ ಮಳೆರಾಯ ಬಿಡುವು ನೀಡಿದ್ದರಿಂದ ಮತದಾನ ಸುಗಮವಾಗಿನಡೆಯಿತು.

ಹಿರಿಯೂರು ನಗರಸಭೆಗೆ ನಡೆದ ಚುನಾವಣೆಯಲ್ಲಿ ಬೆಳಿಗ್ಗೆ ಮಂದಗತಿಯಿಂದ ಮತದಾನ ಆರಂಭವಾಯಿತು. ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೂ ಮತದಾನ ಬಿರುಸಿನಿಂದ ನಡೆಯಿತು. ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಹಿರಿಯೂರು ನಗರಸಭೆಯ 31 ವಾರ್ಡ್‌ಗಳ ಪೈಕಿ ಒಂದು ವಾರ್ಡ್‌ಗೆ ಅವಿರೋಧ ಆಯ್ಕೆ ನಡೆದಿದೆ. 53 ಮತಗಟ್ಟೆ ಸ್ಥಾಪಿಸಿದ್ದು 30 ವಾರ್ಡ್‌ಗಳಿಗೆ ಒಟ್ಟು 117 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮೊಳಕಾಲ್ಮೂರು ಪಟ್ಟಣ ಪಂಚಾಯತ್‌ದ 16 ವಾರ್ಡ್‌ಗಳ ಚುನಾವಣೆಗೆ 16 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಒಟ್ಟು 43 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಹೊಳಲ್ಕೆರೆ ಪಟ್ಟಣ ಪಂಚಾಯತ್‌ದ 16 ವಾರ್ಡ್‌ಗಳ ಚುನಾವಣೆಗೆ 16 ಮತಗಟ್ಟೆಗಳನ್ನು ತೆರೆದಿದ್ದು, 43 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ಹೊತ್ತೇರಿದಂತೆ ಮತ ಚಲಾವಣೆಯೂ ಹೆಚ್ಚಾಯ್ತು: ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ, ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದರೂ ನಂತರ ವೇಗ ಪಡೆಯಿತು. ಹಿರಿಯೂರು ನಗರ ವ್ಯಾಪ್ತಿಯಲ್ಲಿ ನಿಧಾನಗತಿಯಲ್ಲಿ ಸಾಗಿದರೆ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಯಿತು. ಬೆಳಿಗ್ಗೆ 9 ಗಂಟೆಯ ವೇಳೆಗೆ ಹಿರಿಯೂರು ನಗರಸಭೆ ಶೇ. 8.48, ಮೊಳಕಾಲ್ಮೂರು ಶೇ. 16. 89, ಹೊಳಲ್ಕೆರೆ ಶೇ.11. 89 ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಶೇ. 10.58 ಮತದಾನವಾಗಿತ್ತು. ಬೆಳಿಗ್ಗೆ 9 ಗಂಟೆಯ ಬಳಿಕ ಮತದಾನ ವೇಗ ಪಡೆಯಿತು. 11 ಗಂಟೆ ಹೊತ್ತಿಗೆ ಹಿರಿಯೂರು ನಗರಸಭೆ ಶೇ. 21.28, ಮೊಳಕಾಲ್ಮೂರು ಶೇ. 36.11, ಹೊಳಲ್ಕೆರೆ ಶೇ. 33.37 ಮತ ಚಲಾವಣೆಯಾಗಿ ಒಟ್ಟಾರೆ ಶೇ. 26.12 ರಷ್ಟು ಮತದಾನ ದಾಖಲಾಗಿತ್ತು.

Advertisement

ಮಧ್ಯಾಹ್ನ 1 ಗಂಟೆ ವೇಳೆಗೆ ಹಿರಿಯೂರು ನಗರಸಭೆ ಶೇ. 38.50, ಮೊಳಕಾಲ್ಮೂರು ಶೇ. 56.86, ಹೊಳಲ್ಕೆರೆ ಶೇ. 54.95, ಒಟ್ಟಾರೆ ಜಿಲ್ಲೆಯಲ್ಲಿ ಶೇ. 44.82 ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಗೆ ಹಿರಿಯೂರು ಶೇ. 53.78, ಮೊಳಕಾಲ್ಮೂರು ಶೇ. 71.46, ಹೊಳಲ್ಕೆರೆ ಶೇ. 69.82, ಒಟ್ಟಾರೆ ಜಿಲ್ಲೆಯಲ್ಲಿ ಶೇ. 59.84 ಮತದಾನವಾಯಿತು. ಮತದಾನಕ್ಕೆ ಕೊನೆಯ ಸಮಯವಾದ ಸಂಜೆ 5 ಗಂಟೆಗೆ ಅಂತಿಮವಾಗಿ ಹಿರಿಯೂರು ಶೇ. 70.93, ಮೊಳಕಾಲ್ಮೂರು ಶೇ. 83.19, ಹೊಳಲ್ಕೆರೆ ಶೇ. 82.85 ಹಾಗೂ ಜಿಲ್ಲೆಯಲ್ಲಿ ಶೇ. 78.99 ಮತ ಚಲಾವಣೆಯಾಯಿತು.

ಗ್ರಾಮ ಪಂಚಾಯತ್‌: ವಿವಿಧ ಕಾರಣಗಳಿಂದ ತೆರವಾಗಿದ್ದ ಹಲವು ಗ್ರಾಮ ಪಂಚಾಯತ್‌ಗಳ 12 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಪೈಕಿ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ, ಮ್ಯಾಸರಹಟ್ಟಿ, ಚಳ್ಳಕೆರೆ ತಾಲೂಕು ರಾಮದುರ್ಗ, ಮನಮೈನಹಟ್ಟಿ ಪರಶುರಾಮಪುರ, ಚಿತ್ರದುರ್ಗ ತಾಲೂಕು ಪುಡುಕಲಹಳ್ಳಿ, ಹೊಸದುರ್ಗ ತಾಲೂಕು ಕಬ್ಬಿನಕೆರೆ ಹಾಗೂ ಹೊಳಲ್ಕೆರೆ ತಾಲೂಕಿನ ರಂಗವ್ವನಹಳ್ಳಿ ಸೇರಿದಂತೆ ಒಟ್ಟು ಎಂಟು ಗ್ರಾಮ ಪಂಚಾಯತ್‌ ಸದಸ್ಯರ ಆಯ್ಕೆ ಅವಿರೋಧವಾಗಿ ನಡೆದಿತ್ತು. ಉಳಿದ ನಾಲ್ಕು ಗ್ರಾಪಂಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.

ಚಿತ್ರದುರ್ಗ ತಾಲೂಕು ಮಾಡನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಯ ರಾಯಣ್ಣನಹಳ್ಳಿ, ಹಿರಿಯೂರು ತಾಲೂಕು ಯರಬಳ್ಳಿ ಗ್ರಾಪಂನ ಕಂದಿಕೆರೆ, ಹೊಸಯಳನಾಡು ಗ್ರಾಪಂನ ಆಲೂರು, ಹಾಗೂ ಜವನಗೊಂಡನಹಳ್ಳಿ ಗ್ರಾಪಂನ ಕಾಟನಾಯಕನಹಳ್ಳಿ ಕ್ಷೇತ್ರದ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಚಿತ್ರದುರ್ಗ ತಾಲೂಕು ರಾಯಣ್ಣನಹಳ್ಳಿ ಶೇ. 63.64, ಹಿರಿಯೂರು ತಾಲೂಕು ಕಂದಿಕೆರೆ ಶೇ. 79.69, ಆಲೂರು ಶೇ. 70.50 ಹಾಗೂ ಕಾಟನಾಯಕನಹಳ್ಳಿ ಶೇ. 59.65 ರಷ್ಟು ಮತದಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next