Advertisement

ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳಿ: ನ್ಯಾ|ದಿಂಡಲಕೊಪ್ಪ

04:28 PM May 22, 2019 | Team Udayavani |

ಚಿತ್ರದುರ್ಗ: ವಿಜ್ಞಾನದಷ್ಟೇ ಕಾನೂನು ಕೂಡ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾದುದು. ಆದ್ದರಿಂದ ವಿಜ್ಞಾನ ಮತ್ತು ಕಾನೂನುಗಳನ್ನು ತಿಳಿದುಕೊಂಡು ವೈಜ್ಞಾನಿಕ ಚಿಂತನೆಯೊಂದಿಗೆ ಜೀವನ ನಡೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್‌.ಆರ್‌.ದಿಂಡಲಕೊಪ್ಪ ಕರೆ ನೀಡಿದರು.

Advertisement

ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ವಕೀಲರ ಸಂಘ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, ಸರ್ಕಾರಿ ವಿಜ್ಞಾನ ಕಾಲೇಜು, ಸರಸ್ವತಿ ಕಾನೂನು ಕಾಲೇಜು, ಪಿವಿಎಸ್‌ ಶಿಕ್ಷಣ ಸಂಸ್ಥೆ, ಎಸ್‌ಆರ್‌ಎಸ್‌ ಶಿಕ್ಷಣ ಸಂಸ್ಥೆ, ಕಬೀರಾನಂದ ಮಠ, ರೋಟರಿ, ಲಯನ್ಸ್‌ ಹಾಗೂ ಇನ್ನರ್‌ವ್ಹೀಲ್ ಕ್ಲಬ್‌, ವಾಸವಿ ಮಹಿಳಾ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ನಾಯಕತ್ವ ತರಬೇತಿ ಶಿಬಿರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂಢನಂಬಿಕೆಗಳಿಂದ ದೂರ ಉಳಿಯಬೇಕು. ವೈಜ್ಞಾನಿಕವಾಗಿ ಚಿಂತನೆ ನಡೆಸಿ ಪರಿಸರದ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮುಂದಿನ ಪೀಳಿಗೆಗೆ ಪರಿಸರ ಉಳಿಸದಿದ್ದರೆ ಅವರ ಭವಿಷ್ಯ ಉತ್ತಮವಾಗಿರಲಾರದು ಎಂದು ಎಚ್ಚರಿಸಿದರು.

ಪ್ರಕೃತಿದತ್ತವಾಗಿ ಮನುಷ್ಯನಿಗೆ ಲಭ್ಯವಾಗಿರುವ ಭೂಮಿ, ನೀರು, ಗಾಳಿ ಮಲಿನವಾಗದಂತೆ ಎಚ್ಚರ ವಹಿಸಬೇಕು. ಮಾನವನ ದುರಾಸೆಗೆ ಕಾಡು ಸಂಪೂರ್ಣ ನಾಶವಾಗುತ್ತಿದ್ದು, ಅದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ. ಈ ಸತ್ಯವನ್ನು ಪ್ರತಿಯೊಬ್ಬರೂ ಎಚ್ಚೆತ್ತು ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳ ನಾಶ ಮಾಡಿದರೆ ಶುದ್ಧ ಗಾಳಿ ಸಿಗುವುದಿಲ್ಲ. ಮರ ಕಡಿಯುವುದು ಅಗತ್ಯವಿದ್ದಲ್ಲಿ ಕಡಿಯುವ ಮುನ್ನ ಒಂದಕ್ಕೆ ಎರಡು ಮರ ಬೆಳೆಸಲು ಮುಂದಾಗಬೇಕು. ಮಾನವರ ಆರೋಗ್ಯಕ್ಕೆ ಪರಿಸರ ಪೂರಕವಾಗಿದ್ದು ಸುತ್ತಮುತ್ತಲಿನ ಗಿಡ ಮರಗಳನ್ನು ಕಡಿಯದೆ ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ನಮ್ಮಲ್ಲಿರುವ ಅಜ್ಞಾನ, ಮೂಢನಂಬಿಕೆಗಳಿಂದಾಗಿ ಗಿಡ, ಮರ ನಾಶ ಮಾಡುತ್ತಿದ್ದೇವೆ. ಅಜ್ಞಾನ, ಅಂಧಕಾರವನ್ನು ದೂರ ಮಾಡಿ ವೈಜ್ಞಾನಿಕ ಚಿಂತನೆಗಳೊಂದಿಗೆ ನೀರು ಬಳಸಬೇಕು. ಜೊತೆಗೆ ಮಳೆ ನೀರು ಕೊಯ್ಲು ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಯುವ ಸಮೂಹ ವಿಜ್ಞಾನ ವಿಷಯದ ಕಡೆ ಆಸಕ್ತಿ ತೋರುತ್ತಿಲ್ಲ. ಮೂಲ ವಿಜ್ಞಾನವನ್ನು ಕಲಿಯುತ್ತಿಲ್ಲ. ಇದು ಉತ್ತಮ ಬೆಳವಣಿಗೆ ಅಲ್ಲ. ಆದ್ದರಿಂದ ಮೂಲ ವಿಜ್ಞಾನ ಕಲಿಕೆಗೆ ಒತ್ತು ನೀಡಬೇಕು. ಅಜ್ಞಾನವನ್ನು ದೂರ ಮಾಡಿಕೊಂಡು ವೈಜ್ಞಾನಿಕ ಚಿಂತನೆ ನಡೆಸಬೆಬೇಕು ಎಂದರು.

ಪರಿಸರ ನಮಗೆ ಎಲ್ಲ ರೀತಿಯ ಕೊಡುಗೆ ನೀಡಿದೆ. ಆದರೆ ನಾವು ಪರಿಸರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಪರಿಸರ ನಮ್ಮಿಂದ ಏನನ್ನೂ ಬಯಸುವುದಿಲ್ಲ. ಆದರೂ ಪರಿಸರ ಉಳಿಸಿದರೆ ಮನುಷ್ಯ ಉಳಿಯಲಿದ್ದಾನೆ, ಇದೇ ರೀತಿ ಪರಿಸರ ನಾಶ ಮಾಡಿದರೆ ಮನುಷ್ಯನೂ ನಾಶವಾಗಲಿದ್ದಾನೆಂದು ಹೇಳಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ| ಸಿ.ಆರ್‌. ಚಂದ್ರಶೇಖರ್‌, ಕಾರ್ಯದರ್ಶಿ ಬಸವರಾಜು, ರೋಟರಿ ಕ್ಲಬ್‌ ಅಧ್ಯಕ್ಷೆ ಶೈಲಾ ವಿಶ್ವನಾಥ, ಇನ್ನರ್‌ವ್ಹೀಲ್ ಫೋರ್ಟ್‌ ಅಧ್ಯಕ್ಷೆ ಜಯಶ್ರೀ ಷಾ, ಪ್ರಾಧ್ಯಾಪಕ ಪ್ರೊ| ಕೆ.ಕೆ. ಕಾಮಾನಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ಕುಮಾರ್‌ ಇದ್ದರು.

ಬರಗಾಲಕ್ಕೆ ಅರಣ್ಯ ನಾಶವೇ ಕಾರಣ
ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಸತತ ಬರಕ್ಕೆ ತುತ್ತಾಗುತ್ತಿರುವುದರ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ. ಪರಿಸರದ ಮೇಲೆ ನಿತ್ಯ ದಾಳಿ ನಡೆಯುತ್ತಿದ್ದು, ಅರಣ್ಯ ಸಂಪತ್ತನ್ನು ನಾಶ ಮಾಡಿರುವುದರಿಂದ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎನ್ನುವ ಸತ್ಯವನ್ನು ಅರಿಯಬೇಕು. ಜಿಲ್ಲೆಯಲ್ಲಿ ನೀರಿಗಾಗಿ ಹರಸಾಹಸ ನಡೆಯುತ್ತಿದೆ. ಅಮೂಲ್ಯವಾದ ನೀರನ್ನು ಅಗತ್ಯ ಇದ್ದಾಗ ಮಾತ್ರ ಹಿತಮಿತವಾಗಿ ಬಳಸಬೇಕು. ನೀರು ಸಾಕಷ್ಟಿದೆ ಎಂದು ತಿಳಿದು ಪೋಲು ಮಾಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್‌.ಆರ್‌. ದಿಂಡಲಕೊಪ್ಪ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next