ಚಿತ್ರದುರ್ಗ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಚಿಂತನೆಗಳಿಂದಾಗಿ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಬೆಂಗಳೂರನ್ನು ವಾಣಿಜ್ಯ ನಗರವನ್ನಾಗಿಸುವ ಕನಸು ಕಂಡಿದ್ದರು. ಅವರ ದೂರದೃಷ್ಟಿಯ ಚಿಂತನೆಗಳು ನಾಡಿನ ಅಭಿವೃದ್ಧಿಗೆ ಮಾದರಿಯಾಗಿವೆ. ನಾಡು ಮೆಚ್ಚುವ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ತಮ್ಮ ಆಡಳಿತಾವಧಿಯಲ್ಲಿ ನಾಡಿನ ರಕ್ಷಣೆಯ ಜೊತೆಗೆ ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದರು ಎಂದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಇಡೀ ವಿಶ್ವವೇ ಮೆಚ್ಚುವ ಬೆಂಗಳೂರಿನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ಇಂತಹ ಬೆಂಗಳೂರನ್ನು ನಿರ್ಮಿಸಲು ಅವರು ಕಂಡಿದ್ದ ಅಭಿವೃದ್ಧಿಯ ಚಿಂತನೆಗಳು, ಯೋಜನೆಗಳು, ಕೃಷಿ ಹಾಗೂ ಜಲ ರಕ್ಷಣೆಗೆ ಕೈಗೊಂಡಿದ್ದ ಕಾಳಜಿಯನ್ನು ನಾವು ಅರಿತುಕೊಳ್ಳಬೇಕು. ಯೋಜನಾ ಬದ್ಧವಾಗಿ ನಗರಗಳ ನಿರ್ಮಾಣಕ್ಕೆ ಬೆಂಗಳೂರು ನಗರ ಮಾದರಿಯಾಗಿದೆ. ಈ ದಿಸೆಯಲ್ಲಿ ಇಂದಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆಂಪೇಗೌಡರನ್ನು ಆದರ್ಶವಾಗಿರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ| ಸಿ. ಶಿವಲಿಂಗಪ್ಪ ವಿಶೇಷ ಉಪನ್ಯಾಸ ನೀಡಿದರು. ಕೆಂಪನಂಜೇಗೌಡ ಹಾಗೂ ಲಿಂಗಮಾಂಬೆ ದಂಪತಿಗಳ ಪುತ್ರನಾಗಿ ಕೆಂಪೇಗೌಡರು ಜನಿಸಿದರು. ವಿಜಯನಗರ ಸಾಮಾಜ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಂದೆಯೊಂದಿಗೆ ಭಾಗವಹಿಸಿ ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ಇದನ್ನೇ ಪ್ರೇರಣೆಯಾಗಿಸಿಕೊಂಡರು. ಬಳಿಕ ಬೆಂಗಳೂರನ್ನು ನಿರ್ಮಾಣ ಮಾಡಿದರಲ್ಲದೇ ವೃತ್ತಿ ಆಧಾರಿತ ಪೇಟೆಗಳನ್ನು ನಿರ್ಮಿಸಿದ್ದರು. ಕೋಟೆ ನಿರ್ಮಿಸಿ ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇಪೇಟೆ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ ಆನೇಕಲ್ ಮಹಾದ್ವಾರಗಳನ್ನು ನಿರ್ಮಾಣ ಮಾಡಿದ್ದರು. ಹಲವಾರು ಕೆರೆಗಳ ನಿರ್ಮಾಣ ಮಾಡಿ ಕುಡಿಯುವ ನೀರಿಗೆ ಮತ್ತು ಕೃಷಿಕರ ಬದುಕಿಗೆ ಅನುಕೂಲ ಮಾಡಿಕೊಟ್ಟಿದ್ದರು. ದೇವಾಲಯಗಳ ನಿರ್ಮಾಣ ಮಾಡಿ ಭಕ್ತಿ ಮೆರೆದಿದ್ದರು ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಕೆರೆಗಳು ಇಂದು ಬಸ್‌ನಿಲ್ದಾಣ (ಮೆಜೆಸ್ಟಿಕ್), ಕ್ರೀಡಾಂಗಣ ಇತ್ಯಾದಿ ಸಾರ್ವಜನಿಕ ಸ್ಥಳಗಳಾಗಿವೆ. ನಗರ ಹಾಗೂ ಕೃಷಿಗೆ ಪ್ರತ್ಯೇಕವಾಗಿ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಮೂಲದಿಂದಲೇ ಪಡೆಯುವಂತೆ ಮಾಡಿದ್ದು ಕೆಂಪೇಗೌಡರ ಬದ್ಧತೆಯನ್ನು ತೋರಿಸುತ್ತದೆ. ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಿದ್ದು, ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿಪಡಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಇಂದಿನ ದಿನಮಾನದಲ್ಲಿ ಬೆಂಗಳೂರು ಬೃಹತ್ ಉದ್ಯಮಗಳ ಮತ್ತು ಉದ್ಯಾನಗಳ ನಗರವಾಗಿದೆ. ಇದಕ್ಕೆ ಕೆಂಪೇಗೌಡರು ಮುಖ್ಯ ಕಾರಣಕರ್ತರಾಗಿದ್ದಾರೆ ಎಂದು ಬಣ್ಣಿಸಿದರು. ಕೆಂಪೇಗೌಡರು ಕೊನೆಯವರೆಗೂ ವಿಜಯನಗರ ಸಾಮ್ರಾಜ್ಯಕ್ಕೆ ನಿಷ್ಠೆ ಹೊಂದಿದ್ದರು. ರಕ್ಷಣೆ ಮತ್ತು ಆಡಳಿತ ಸುವ್ಯವಸ್ಥೆಗೆ ಒತ್ತು ನೀಡಿದ್ದ ಅವರ ಸ್ವಾಭಿಮಾನ, ಬದ್ಧತೆ, ಹಿತಾಸಕ್ತಿ, ದೂರದೃಷ್ಟಿಯ ಚಿಂತನೆಗಳು ಇಂದಿನ ಜನಪ್ರತಿನಿಧಿಗಳಿಗೆ ಮಾದರಿ ಎಂದು ತಿಳಿಸಿದರು.
ಅತಿ ಹೆಚ್ಚು ನೀರಿನ ಮೂಲ ಹೊಂದಿದ್ದ ಬೆಂಗಳೂರಿನಲ್ಲಿ ಪ್ರಸ್ತುತ ಅಭಿವೃದ್ಧಿಯ ನೆಪದಲ್ಲಿ ಬಹುತೇಕ ಕೆರೆಗಳನ್ನು ಮುಚ್ಚಿ ಹಾಕಲಾಗಿದೆ. ನೂರಾರು ಕಿಮೀ ದೂರದಿಂದ ನೀರು ತರುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.
•
ಸಿ. ಶಿವಲಿಂಗಪ್ಪ, ಸಾಹಿತಿ.