Advertisement

ಪುಸ್ತಕ-ಸೈಕಲ್ ವಿತರಣೆ ವಿಳಂಬ ಸಲ್ಲ

04:25 PM Sep 14, 2019 | Team Udayavani |

ಚಿತ್ರದುರ್ಗ: ಶೈಕ್ಷಣಿಕ ವರ್ಷ ಅರ್ಧ ಮುಗಿದ್ದಿದ್ದರೂ ಮಕ್ಕಳಿಗೆ ಪುಸ್ತಕ, ಸೈಕಲ್, ಶೂ ಕೊಡದಿದ್ದರೆ ಅವರು ಓದುವುದು ಹೇಗೆ ಎಂದು ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈ ವರ್ಷ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ವಿಳಂಬವಾಗಿದೆ. 8ನೇ ತರಗತಿ ಮಕ್ಕಳಿಗೆ ಉಚಿತವಾಗಿ ನೀಡಲಾಗುವ ಸೈಕಲ್ ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿದ್ದರೂ ಇನ್ನೂ ವಿತರಿಸಿಲ್ಲ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್‌ ನೀಡುವ ಯೋಜನೆ ಜಾರಿಗೆ ಬಂದಿದ್ದರೂ, ಇದುವರೆಗೂ ವಿತರಣೆ ಆಗಿಲ್ಲ. ಈ ರೀತಿಯಾದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಸರ್ಕಾರದ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಳ್ಳದಿದ್ದಲ್ಲಿ ಏನು ಪ್ರಯೋಜನ ಎಂದರು.

ಪ್ರತಿಕ್ರಿಯಿಸಿದ ಡಿಡಿಪಿಐ ರೇವಣಸಿದ್ದಪ್ಪ. ಪಠ್ಯಪುಸ್ತಕ ಮತ್ತು ಸಮವಸ್ತ್ರಗಳು ರಾಜ್ಯಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಬಳಿಕ ತಾಲೂಕು ಮಟ್ಟಕ್ಕೆ ಪೂರೈಕೆಯಾಗುತ್ತವೆ. ಹೀಗಾಗಿ ಇದರ ನಿಯಂತ್ರಣ ಜಿಲ್ಲಾ ಮಟ್ಟದಲ್ಲಿ ಇಲ್ಲ. ಜಿಲ್ಲೆಯಲ್ಲಿ 17,482 ಮಕ್ಕಳಿಗೆ ಉಚಿತವಾಗಿ ಸೈಕಲ್ ವಿತರಿಸಬೇಕಿದ್ದು, ಈಗಾಗಲೇ 10,819 ವಿದ್ಯಾರ್ಥಿಗಳಿಗೆ ವಿತರಣೆಯಾಗಿದೆ. ಕೆಲವೆಡೆ ಸೈಕಲ್ಗಳ ಬಿಡಿಭಾಗಗಳ ಜೋಡಣಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಶೂ ಮತ್ತು ಸಾಕ್ಸ್‌ ಖರೀದಿಗೆ ಸಂಬಂಧಿಸಿದ ಅನುದಾನವನ್ನು ಆಯಾ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರ ಜಂಟಿ ಬ್ಯಾಂಕ್‌ ಖಾತೆಗೆ ಹಾಕಲಾಗುತ್ತದೆ. ಬ್ರಾಂಡೆಡ್‌ ಕಂಪನಿಯ ಶೂ, ಸಾಕ್ಸ್‌ ಖರೀದಿಸುವಂತೆ ಮಾರ್ಗಸೂಚಿ ಇದ್ದು, ಶಾಲೆಯವರೇ ಖರೀದಿ ಮಾಡಲಿದ್ದಾರೆ ಎಂದು ತಿಳಿಸಿದರು.

ಕೋಳಿ ಫಾಲೋ ಮಾಡಿ: ಪಶುಸಂಗೋಪನೆ ಇಲಾಖೆ ನೀಡುವ ಗಿರಿರಾಜ ಕೋಳಿಗಳು ಫಲಾನುಭವಿಗಳಿಗೆ ಕೊಟ್ಟ ಎರಡು, ಮೂರು ದಿನದಲ್ಲಿ ಸಾಯುತ್ತವೆ. ಕೊಡುವುದಾದರೆ ಆರೋಗ್ಯವಂತ ಕೋಳಿ ಕೊಡಿ ಎಂದು ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ಮಾತನಾಡಿದ ಸಿಇಒ ಸತ್ಯಭಾಮಾ, ಕೋಳಿಗಳ ಆರೋಗ್ಯದ ಬಗ್ಗೆ ಪಶು ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

Advertisement

ತಾಲೂಕಿಗೊಂದು ಶ್ರದ್ಧಾಂಜಲಿ ವಾಹನ: ಬಡವರ ಶವಗಳನ್ನು ಸಾಗಿಸಲು ಸದ್ಯ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಆರೋಗ್ಯ ಇಲಾಖೆಯ ಒಂದು ವಾಹನ ಲಭ್ಯವಿದೆ. ಹೀಗಾಗಿ ಕನಿಷ್ಟ ಪ್ರತಿ ತಾಲೂಕಿಗೆ ಒಂದು ಶ್ರದ್ಧಾಂಜಲಿ ವಾಹನ ಬೇಕು. ನಮ್ಮ ಜಿಲ್ಲೆಯ ಶಾಸಕರೇ ಆರೋಗ್ಯ ಸಚಿವರಾಗಿರುವುದರಿಂದ ಅವರ ಮನವೊಲಿಸಿ ಶ್ರದ್ಧಾಂಜಲಿ ವಾಹನ ಯೋಜನೆಗೆ ಅನುಮೋದನೆ ಪಡೆಯಲಾಗುವುದು. ಕೂಡಲೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿ.ಪಂ ಅಧ್ಯಕ್ಷರು ಡಿಎಚ್ಒ ಡಾ. ಪಾಲಾಕ್ಷ ಅವರಿಗೆ ಸೂಚನೆ ನೀಡಿದರು.

ವಾಟ್ ನಾನ್‌ಸೆನ್ಸ್‌, ಎಫ್‌ಐಆರ್‌ ಮಾಡ್ಬೇಕಾ: ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಇಲಾಖೆ ಬದು ನಿರ್ಮಾಣ, ಮಣ್ಣು ಸಂರಕ್ಷಣೆಯಂತಹ ಚಟುವಟಿಕೆ ಮಾಡಬೇಕು. ಆದರೆ, ಎಲ್ಲರೂ ಹೋಗಿ ಚೆಕ್‌ಡ್ಯಾಂ ಮಾಡುತ್ತಿದ್ದಾರೆ. ಹೇಳ್ಳೋರಿಲ್ಲ, ಕೇಳೊರಿಲ್ಲ ನಾನ್‌ಸೆನ್ಸ್‌ ಎಂದು ಜಿಪಂ ಸಿಇಒ ಸತ್ಯಭಾಮಾ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈತರ ಅಭಿವೃದ್ಧಿಗೆ ಚಟುವಟಿಕೆ ಮಾಡಬೇಕೆ ಹೊರತು ಉದ್ಯಮಿಗಳಾಗಬಾರದು. ಇನ್ನೊಂದು ಸಲ ಚೆಕ್‌ಡ್ಯಾಂ ಮಾಡಿದರೆ ಎಫ್‌ಐಆರ್‌ ಹಾಕಿಬಿಡ್ತಿನಿ ಎಂದು ಎಚ್ಚರಿಕೆ ನೀಡಿದರು. ಸಾಮಾಜಿಕ ಅರಣ್ಯ ಇಲಾಖೆಯವರು ಜಿಲ್ಲೆಯಲ್ಲಿ 4.23 ಲಕ್ಷ ಸಸಿಗಳನ್ನು ನೆಟ್ಟಿದ್ದಾರೆ. ಬರೀ ಸಸಿ ನೆಟ್ಟು ಸುಮ್ಮನಾದರೆ ಉಪಯೋಗವಿಲ್ಲ. ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಇದೇ ವೇಳೆ ಪಿಎಂಜಿಎಸ್‌ವೈ ಯೋಜನೆ ಅಧಿಕಾರಿ ಮಾಹಿತಿ ನೀಡಲು ನಿಂತಾಗ, ನಿಮ್ಮನ್ನು ನಾನು ನೋಡೇ ಇಲ್ಲ. ಫಾರ್‌ ಯುವರ್‌ ಕೈಂಡ್‌ ಇನಾರ್ಮೇಶನ್‌ ಎಂದು ಸಿಇಒ ಗರಂ ಆದರು. ವಾಟ್ ನಾನ್‌ಸೆನ್ಸ್‌, ನಿಮ್ಮ ಯೋಜನೆಗಳೇನು, ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಶೋಕಾಸ್‌ ನೋಟಿಸ್‌: ಮಾಹಿತಿ ನೀಡದೇ ಸಭೆಗೆ ಗೈರಾದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ ಹಾಗೂ ಜಿಪಂ ಮುಖ್ಯ ಲೆಕ್ಕಾಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಲು ಸಿಇಒ ಸೂಚಿಸಿದರು.

ಜಿಪಂ ಉಪಾಧ್ಯಕ್ಷೆ ಎನ್‌.ಪಿ. ಸುಶೀಲಮ್ಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next