Advertisement

ಶೌಚಾಲಯ ಗೋಲ್‌ಮಾಲ್‌; ವರದಿಗೆ ಸೂಚನೆ

12:57 PM Oct 19, 2019 | |
ಚಿತ್ರದುರ್ಗ: ಜಿಲ್ಲೆಯ 6 ತಾಲೂಕುಗಳಲ್ಲಿ ಶೌಚಾಲಯ ನಿರ್ಮಾಣದಲ್ಲಿ ಆಗಿರುವ ಗೋಲ್‌ಮಾಲ್‌ ಹಾಗೂ ಹಣ ದುರ್ಬಳಕೆ ಬಗ್ಗೆ ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ಸಲ್ಲಿಸಲು ಅಪರ ಜಿಲ್ಲಾ ಧಿಕಾರಿ ಅವರನ್ನು ನೇಮಕ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಕಳೆದ ತ್ತೈಮಾಸಿಕದಲ್ಲಿ ಈ ಬಗ್ಗೆ ಹಿರಿಯೂರು ಶಾಸಕಿ ಪೂರ್ಣಿಮಾ ಹಾಗೂ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಪ್ರಸ್ತಾಪಿಸಿ ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳ ಸಮಿತಿ ರಚನೆ ಮಾಡಲು ಸೂಚಿಸಿದ್ದರು. ಈ ಸಂಬಂಧ ಇಂದು ಸಭೆಗೆ ಮಾಹಿತಿ ನೀಡಿದ ಸಿಇಒ ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ, ಲೋಕೋಪಯೋಗಿ ಇಲಾಖೆ ಎಇ ಹಾಗೂ ಆರ್‌ ಡಿಪಿಆರ್‌ ಇಲಾಖೆಯ ಮೂವರು ಅಧಿ ಕಾರಿಗಳನ್ನು ನೇಮಕ ಮಾಡುವುದಾಗಿ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಕುರಿ ಕಾಯಲು ತೋಳ ನೇಮಿಸಿದಂತಾಗುತ್ತದೆ ಎಂದರು. ಸಚಿವ ಶ್ರೀರಾಮುಲು ಹಾಗೂ ಎಲ್ಲ ಶಾಸಕರು ಸೇರಿ ಅಪರ ಜಿಲ್ಲಾ ಧಿಕಾರಿ ಈ ಬಗ್ಗೆ ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ಸಲ್ಲಿಸಲಿ ಎಂದು ನಿರ್ಣಯ ಕೈಗೊಂಡರು.
ಚಿತ್ರದುರ್ಗ ತಾಲೂಕು ಐನಹಳ್ಳಿಯಲ್ಲಿ ಶೌಚಾಲಯ ನಿರ್ಮಾಣ ಮಾಡದೆ ನಕಲಿ ದಾಖಲೆ ಸೃಷ್ಟಿಸಿ ಬಿಲ್‌ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಚಿತ್ರದುರ್ಗ ತಾಪಂ ಇಒ ತನಿಖೆ ನಡೆಸಿ ತಪ್ಪಿತಸ್ಥರ ಅಮಾನತು ಮಾಡಲು ಸಭೆ ಸೂಚಿಸಿತು.
ಮುದ್ರಾ ಅರ್ಥ ಹೇಳಲು ಒದ್ದಾಡಿದ ಎಲ್‌ಡಿಎಂ: ಬ್ಯಾಂಕುಗಳಲ್ಲಿ ಮುದ್ರಾ ಯೋಜನೆಯಡಿ ಸಾಲ ನೀಡುತ್ತಿಲ್ಲ ಎಂಬ ದೂರುಗಳು ಹೆಚ್ಚಾಗುತ್ತಿವೆ ಎಂದು ಸಂಸದ ನಾರಾಯಣಸ್ವಾಮಿ ಹಾಗೂ ಶಾಸಕರು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿಂಗೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡುತ್ತಾ, ಮುದ್ರಾ ಲಾಂಗ್‌ಫಾರ್ಮ್ ಹೇಳಿ ಎಂದು ಪ್ರಶ್ನಿಸಿದರು. ಈ ಪ್ರಶ್ನೆಯಿಂದ ಮುಜುಗರಕ್ಕೊಳಗಾದ ಎಲ್‌ಡಿಎಂ ಉತ್ತರ ಹೇಳಲು ತಡಕಾಡಿದರು. ಇದೇ ವೇಳೆ ಬಹುತೇಕರು ಮೊಬೈಲ್‌ ತೆಗೆದು ಗೂಗಲ್‌ನಲ್ಲಿ ಹುಡುಕಾಡುವ ದೃಶ್ಯಗಳು ಕಂಡು ಬಂದವು.
ಸಣ್ಣಕಿಟ್ಟದಹಳ್ಳಿ ಸಮಸ್ಯೆ ಪರಿಹರಿಸಿ: ಹೊಸದುರ್ಗ ತಾಲೂಕಿನ ಸಣ್ಣಕಿಟ್ಟದಹಳ್ಳಿ ಗೊಲ್ಲರಹಟ್ಟಿಯಲ್ಲಿ ಸುಮಾರು 80 ಮನೆಗಳು ಖಾಸಗಿ ಜಮೀನಿನಲ್ಲಿದ್ದು, ಆ ಜಮೀನು ಒಬ್ಬ ರೈತನಿಗೆ ಸೇರಿದೆ. ಹಣ ಕೊಟ್ಟರೆ ಖಾತೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡು ರೈತನಿಗೆ ಪರಿಹಾರ ನೀಡಿ, ಮನೆಗಳನ್ನು ಫಲಾನುಭವಿಗಳ ಹೆಸರಿಗೆ ಮಾಡಿಕೊಡಬೇಕು ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಹೇಳಿದರು.
ಎಸ್‌ಪಿ ಎಂಎಲ್‌ಎ ವಾಗ್ವಾದ: ಜಿಲ್ಲೆಯಲ್ಲಿ ಗಾಂಜಾ, ಅμàಮಿನ ದಂಧೆ ಹೆಚ್ಚಾಗಿದೆ. ಶಾಲಾ, ಕಾಲೇಜುಗಳ ಸುತ್ತಮುತ್ತಾ ರಾಜಾರೋಷವಾಗಿ ವ್ಯವಹಾರ ನಡೆಯುತ್ತಿದೆ. ಇದರಲ್ಲಿ ಪೊಲೀಸ್‌ ಪೇದೆಗಳ ಕೈವಾಡ ಇದೆ. ಹತ್ತು, ಹದಿನೈದು ವರ್ಷಗಳಿಂದ ಒಂದೇ ಕಡೆ ಇರುವ ಸಿಬ್ಬಂದಿ, ಹಿರಿಯ ಅ ಧಿಕಾರಿಗಳಿಗೆ ಆದಾಯ ತಂದುಕೊಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ಪಿ ಗಮನಹರಿಸಿ ಮಟ್ಟಾ ಹಾಕಬೇಕು ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಡಾ.ಕೆ. ಅರುಣ್‌, ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇದ್ದವರನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಗಾಂಜಾಗೆ ಸಂಬಂಧಿಸಿ ಸಾಕಷ್ಟು ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ಕೊಡುತ್ತೇನೆ. ಆದರೆ, ಕೆಡಿಪಿ ಸಭೆಯಲ್ಲಿ ಈ ಚರ್ಚೆ ಬೇಡ ಎಂದರು.
ಇದರಿಂದ ಕೆರಳಿದ ಶಾಸಕರು ನಾನು ಜನಪ್ರತಿನಿಧಿ, ನೀವು ಸರ್ಕಾರದ ಸೇವಕ. ಮಾಹಿತಿ ಕೊಡಬೇಕು. ಯಾಕೆ ಚರ್ಚಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಸಚಿವ ಶ್ರೀರಾಮುಲು ಮಧ್ಯೆ ಪ್ರವೇಶಿಸಿ, ವಿಷಯ ಗಂಭಿರವಾಗಿದೆ. ಈ ಬಗ್ಗೆ ಜಿಲ್ಲಾಧಿ ಕಾರಿಗಳು ಸಭೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಅಬಕಾರಿ ಡಿಸಿಗೆ ಶೋಕಾಸ್‌ ನೋಟಿಸ್‌: ನಿರಂತರ ಮೂರು ಸಭೆಗಳಿಗೆ ಗೈರು ಹಾಜರಾಗಿರುವ ಅಬಕಾರಿ ಡಿಸಿಗೆ ಶೋಕಾಸ್‌ ನೋಟಿಸ್‌ ನೀಡಬೇಕು ಎಂದು ಸಚಿವರು ಸೂಚಿಸಿದರು. ಶಾಸಕ ಗೂಳಿಹಟ್ಟಿ ಶೇಖರ್‌ ಮಾತನಾಡಿ, ಹೊಸದುರ್ಗ ತಾಲೂಕು ಮಳಲಿ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲೇ ಬಾರ್‌ ಇದೆ. 7ನೇ ತರಗತಿ ಮಕ್ಕಳು ಕುಡಿತದ ಚಟಕ್ಕೆ ಬಿದ್ದಿದ್ದಾರೆ. ಶಾಲೆಗಳ ಪಕ್ಕದಲ್ಲಿ ಬಾರ್‌ಗೆ ಅನುಮತಿ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದರು.
ಈ ವೇಳೆ ಸಚಿವ ಶ್ರೀರಾಮುಲು ಜಿಲ್ಲೆಯಾದ್ಯಂತ ಶಾಲೆ, ದೇವಸ್ಥಾನಗಳ ಬಳಿ ಇರುವ ಬಾರ್‌, ವೈನ್‌ ಶಾಪ್‌ ಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಿದರು. ದೇವರ ಎತ್ತುಗಳ ನಿರ್ವಹಣೆಗೆ ಟ್ರಸ್ಟ್‌: ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಚಿತ್ರದುರ್ಗ ತಾಲೂಕಿನಲ್ಲಿರುವ ದೇವರ ಎತ್ತುಗಳಿಗೆ ಮೇವು, ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಟ್ರಸ್ಟ್‌ ರಚನೆ ಮಾಡಿದರೆ ಸರ್ಕಾರದಿಂದ ನೆರವು ನೀಡಬಹುದು. ಆದರೆ, ದೇವರ ಎತ್ತುಗಳನ್ನು ನೋಡಿಕೊಳ್ಳುವವರಿಗೆ ಟ್ರಸ್ಟ್‌ ಮಾಡುವುದು ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಟ್ರಸ್ಟ್‌ ರಚಿಸಿಕೊಡಬೇಕು ಎಂದು ಶಾಸಕ ರಘುಮೂರ್ತಿ, ಸಚಿವ ಶ್ರೀರಾಮುಲು ಸೂಚಿಸಿದರು.
ಎಲ್ಲವೂ ನಿರ್ಮಿತಿ ಕೇಂದ್ರಕ್ಕೆ ಯಾಕೆ: ಎಲ್ಲ ಗುತ್ತಿಗೆಗಳನ್ನು ನಿರ್ಮಿತಿ ಕೇಂದ್ರಕ್ಕೆ ಯಾಕೆ ನೀಡುತ್ತಿದ್ದಿರಾ, ನಿರ್ಮಿತಿ ಕೇಂದ್ರದ ಬಳಿ ಈಗ ಸಾವಿರ ಕೋಟಿ ರೂ. ಕಾಮಗಾರಿಗಳಿವೆ. ಇದರಿಂದ ಯಾವ ಕಾಮಗಾರಿಯೂ ಸಕಾಲಕ್ಕೆ ಮುಗಿಯುವುದಿಲ್ಲ. ಬೇರೆ ಬೇರೆ ಇಲಾಖೆಗಳ ಮೂಲಕ ಕಾಮಗಾರಿಗಳನ್ನು ಮಾಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಶ್ರೀರಾಮುಲು ಸೂಚಿಸಿದರು.
ಒಂದೂವರೆ ಗಂಟೆ ವಿಳಂಬ: ತ್ತೈಮಾಸಿಕ ಕೆಡಿಪಿ ಸಭೆ ಬೆಳಗ್ಗೆ 11 ಗಂಟೆಗೆ ನಿಗ ದಿಯಾಗಿತ್ತು. ಅಧಿಕಾರಿಗಳು ಅರ್ಧ ಗಂಟೆ ಮೊದಲು ಬಂದು ಕುಳಿತಿದ್ದರು. 11.30ಕ್ಕೆ ಶಾಸಕರು ಹಾಜರಾದರು. ಆದರೆ, ಸಚಿವ ಶ್ರೀರಾಮುಲು ಸಭೆಗೆ ಆಗಮಿಸಿದ್ದು, ಮಾತ್ರ ಮಧ್ಯಾಹ್ನ 12.30ಕ್ಕೆ. ಅಲ್ಲಿಯವರೆಗೆ ಜನಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಕಾದು ಕುಳಿತಿದ್ದರು. ಮಧ್ಯಾಹ್ನದ ಊಟದ ಜತೆ ಜತೆಗೆ ಸಭೆ ನಡೆಯಿತು. ಸಂಜೆ ಆರು ಗಂಟೆಯಾದರೂ ಮುಗಿಯಲಿಲ್ಲ. ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ, ಎಂಎಲ್ಸಿ ಜಯಮ್ಮ, ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ.ಕೆ. ಶಿವಮೂರ್ತಿ, ಕೆ.ಅನಂತ್‌, ಮುಂಡರಗಿ ನಾಗರಾಜ್‌ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next