Advertisement

ಕತ್ತಲ ಕೂಪದ ಕುಗ್ರಾಮಕ್ಕೆ ಸೌರಶಕ್ತಿ ಬಲ

11:51 AM Jul 26, 2019 | Naveen |

ವಿಶೇಷ ವರದಿ
ಚಿತ್ರದುರ್ಗ:
ರಕ್ಷಿತಾರಣ್ಯದ ಮಧ್ಯೆ ಇರುವ ಹಿರಿಯೂರು ತಾಲೂಕಿನ ಕತ್ತಲ ಕೂಪದ ಕುಗ್ರಾಮವೊಂದಕ್ಕೆ ಈಗ ಸೌರಶಕ್ತಿ ಬೆಳಕೇ ಆಧಾರವಾಗಿದೆ.

Advertisement

ಹೌದು, ಅರಣ್ಯದ ನಡುವಿನ ಕತ್ತೆಹೊಳೆ ಗ್ರಾಮದ ಜನರು ಸೌರ ಬೆಳಕು ಕಂಡು ಹತ್ತು ವರ್ಷ ಸಂದಿದೆ. ಹಿರಿಯೂರು ನಗರದಿಂದ ಹುಲಗಲಕುಂಟೆ, ಉಡುವಳ್ಳಿ ನವೋದಯ ಶಾಲೆ, ಪರಮೇನಹಳ್ಳಿ ಮೂಲಕ 20 ಕಿಮೀ ದೂರ ಕಾಡಿನ ಮಧ್ಯೆ ಸಾಗಿದರೆ ಸಿಗುವ ಸ್ಥಳವೇ ಕತ್ತೆಹೊಳೆ. ಇಂದಿಗೂ ಈ ಗ್ರಾಮ ಸರ್ಕಾರದ ದಾಖಲೆಗಳಲ್ಲಿ ಇಲ್ಲ. ಇದರಿಂದಾಗಿ ಇಲ್ಲಿ ವಿದ್ಯುತ್‌, ರಸ್ತೆ, ಸೇರಿದಂತೆ ಯಾವ ಸೌಲಭ್ಯಗಳೂ ಅಷ್ಟು ಸುಲಭವಾಗಿ ದೊರೆತಿಲ್ಲ.

ಕಳೆದ ಒಂದು ದಶಕದಿಂದ ಈ ಗ್ರಾಮದ ಜನರಿಗೆ ಸೌರಶಕ್ತಿಯೇ ಆಸರೆಯಾಗಿದೆ. ಇಲ್ಲಿಗೆ ಹೋಗಬೇಕೆಂದರೆ ವಾಹನದ ಸೌಕರ್ಯದ ಮಾತಿರಲಿ, ಸರಿಯಾದ ರಸ್ತೆಯೂ ಇಲ್ಲ. ಹಿರಿಯೂರಿನಿಂದ ಪರಮೇನಹಳ್ಳಿಗೆ ಆಟೋದಲ್ಲಿ ಹೋಗಬೇಕು. ಅಲ್ಲಿಂದ ಸುಮಾರು 4-5 ಕಿಮೀ ದೂರ ಕಾಡಿನ ಮಧ್ಯೆ ನಡೆದುಕೊಂಡೇ ಸಾಗಬೇಕು. ಕಳೆದ ಹತ್ತು ವರ್ಷಗಳ ಹಿಂದೆ ಸರ್ಕಾರದಿಂದ ಒಂದು ಕೊಳವೆಬಾವಿ ಕೊರೆಸಲಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. ಸುಮಾರು 40 ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂದ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. 45 ಕುಟುಂಬಗಳು ವಾಸ ಮಾಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮನೆಗಳಲ್ಲಿ ಸೌರ ಬೆಳಕು ಜಗಮಗಿಸುತ್ತದೆ. ಹೀಗಾಗಿ ಹತ್ತು ವರ್ಷಗಳ ಹಿಂದಿದ್ದ ಚಿಮಣಿ ಬುಡ್ಡಿ ಇದೀಗ ಕಾಣುತ್ತಿಲ್ಲ.

ಸಂಜೆಯಾಗುತ್ತಿದ್ದಂತೆ ಹೊಲದ ಕೆಲಸ ಮುಗಿಸಿ ಬಂದ ಮಹಿಳೆಯರು ಅಡುಗೆ ಕೆಲಸದಲ್ಲಿ ತೊಡಗಿದರೆ, ಪುರುಷರು ರೇಡಿಯೋ ಕೇಳುವುದರಲ್ಲಿ, ಟಿವಿ ನೋಡುವುದರಲ್ಲಿ ಮಗ್ನರಾಗುತ್ತಾರೆ. ನಾಗರಿಕ ಪ್ರಪಂಚದ ಅರಿವೇ ಇಲ್ಲದೆ ಬಾಳುತ್ತಿದ್ದ ಅವರೆಲ್ಲ ಸೋಲಾರ್‌ ಮೂಲಕ ಟಿವಿ, ರೇಡಿಯೋ ಮೂಲಕ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಾರೆ. ಮಕ್ಕಳು ಸೌರ ಬೆಳಕಿನಲ್ಲಿ ಓದು-ಬರಹ ಮಾಡುತ್ತಾರೆ.

ಇದೆಲ್ಲ ಸಾಧ್ಯವಾಗಿದ್ದು ಹೇಗೆ?: ಅನೇಕ ವರ್ಷಗಳಿಂದ ಕತ್ತಲೆ ಕೂಪದಲ್ಲೇ ಬದುಕು ಸಾಗಿಸುತ್ತಿದ್ದ ಕತ್ತೆಹೊಳೆ ಗ್ರಾಮದ ಜನರ ಬದುಕಿನಲ್ಲಿ ಬೆಳಕಾಗಿ ಬಂದವರು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ| ಹರೀಶ್‌ ಹಂದೆ. ತಮ್ಮ ಸೆಲ್ಕೋ ಸೋಲಾರ್‌ ಸಂಸ್ಥೆ ಮೂಲಕ ಇಡೀ ಗ್ರಾಮದಲ್ಲಿ ಸೌರಶಕ್ತಿ ಬೆಳಕಿನ ಸೌಲಭ್ಯ ಕಲ್ಪಿಸಿದರು. ಅವರ ಪರಿಶ್ರಮದಿಂದ ಕತ್ತೆಹೊಳೆಯ ಚಿತ್ರಣವೇ ಬದಲಾಗುತ್ತಿದೆ.

Advertisement

ನಮಗೆ ಯಾರಿಗೂ ಸ್ವಂತ ಜಮೀನಿಲ್ಲ. ಇದು ಕಂದಾಯ ಇಲಾಖೆಯ ಅಧಿಕೃತ ಜಾಗವೂ ಅಲ್ಲ. ಕಳೆದ 40 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದರೂ ಕಾಯಂ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಹಲವಾರು ದಶಕಗಳಿಂದ ಉಳುಮೆ ಮಾಡಿ ಬೆಳೆ ಬೆಳೆದು ಬದುಕು ಕಟ್ಟಿಕೊಂಡ ನಮಗೆ ಬೇರೆಡೆ ಹೋಗಲು ಮನಸ್ಸಿಲ್ಲ. ಅಧಿಕಾರಿಗಳ ಹತ್ತಿರ ನಮ್ಮ ಅಳಲು ತೋಡಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಕತ್ತೆಹೊಳೆ ಗ್ರಾಮದ ಗ್ರಾಮಸ್ಥ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಕುಗ್ರಾಮದ ಜನರು ಸೌರಶಕ್ತಿಯ ಬೆಳಕನ್ನಂತೂ ಕಂಡಿದ್ದಾರೆ. ಅವರಿಗೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಸಂಬಂಧಿಸಿದವರು ಇಚ್ಛಾಶಕ್ತಿ ತೋರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next