Advertisement

ಕನಕ ಭವನ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ: ಶ್ರೀ

06:16 PM Oct 19, 2019 | Naveen |

ಚಿತ್ರದುರ್ಗ: ಮಧ್ಯ ಕರ್ನಾಟಕ ಚಿತ್ರದುರ್ಗದಲ್ಲಿ ಅತ್ಯಂತ ಸುಂದರವಾದ ಕನಕ ಭವನ ನಿರ್ಮಾಣ ಮಾಡಲು ಮುಂದಾಗಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಕನಕ ಗುರುಪೀಠದ ಕೆಲ್ಲೋಡು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿದರು.

Advertisement

ನಗರದ ರಂಗಯ್ಯನ ಬಾಗಿಲು ಬಳಿ ಇರುವ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಎಸ್‌ಜೆಎಂ ಕಾಲೇಜು ಹಿಂಭಾಗದ ದವಳಗಿರಿ ಬಡಾವಣೆಯಲ್ಲಿ ಅಂದಾಜು 6 ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣವಾಗಲಿದ್ದು, ಈಗಾಗಲೇ ನಿವೇಶನ ಖರೀದಿ ಸಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆ, ತಾಲೂಕುಗಳಲ್ಲಿ ಈಗಾಗಲೇ ಭವನಗಳು ನಿರ್ಮಾಣವಾಗಿವೆ.

ಮಧ್ಯ ಕರ್ನಾಟಕ ಚಿತ್ರದುರ್ಗದಲ್ಲಿ ಈಗ ಕಾಲ ಕೂಡಿ ಬಂದಿದೆ ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಹಲವೆಡೆ ಭವನ ನಿರ್ಮಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಕೆಲ ತಾಲೂಕುಗಳಲ್ಲೂ ನಿರ್ಮಿಸಿದೆ. ಆದರೆ, ಜಿಲ್ಲಾ ಕೇಂದ್ರದಲ್ಲಿ ಇರಲಿಲ್ಲ. ಈಗ ಸಮುದಾಯ ಭವನದ ವಿಚಾರದಲ್ಲಿ ಪ್ರತಿಷ್ಠೆ, ರಾಜಕೀಯ ಮಾಡದೇ ಸಮಾಜ ಹಾಗೂ ಮಠವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಹಿಂದೆ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಇಂತಿಷ್ಟೇ ದಿನದಲಿ ಮಠ ಕಟ್ಟಬೇಕು ಎಂದು ಗುರಿ ಇಟ್ಟುಕೊಂಡು ಮಠ ಕಟ್ಟಿದ್ದರು. ಈಗ ಚಿತ್ರದುರ್ಗದ ಕನಕ ಭವನವದ ಉಸ್ತುವಾರಿಯನ್ನೂ ಅವರೇ ನೋಡಿಕೊಳ್ಳುತ್ತಾರೆ. ನಾವೆಲ್ಲಾ ಅವರಿಗೆ ಸಹಾಯಕರಾಗಿ ಕೆಲಸ ಮಾಡೋಣ ಎಂದರು.

ಚಿತ್ರದುರ್ಗದ ಕುರುಬರ ಸಂಘದಲ್ಲಿ ಈ ಹಿಂದೆ ಇದ್ದ ಭಿನ್ನಾಭಿಪ್ರಾಯ ಈಗ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಆದಷ್ಟು ಬೇಗ ಭವ್ಯ ಭವನ ತಲೆ ಎತ್ತಲಿ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರು.

Advertisement

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಕುರುಬ ಸಮಾಜಕ್ಕೆ ಅನುದಾನ ನೀಡುವುದಾಗಿ ಈ ಹಿಂದೆಯೇ ಶ್ರೀಗಳಿಗೆ ತಿಳಿಸಿದ್ದೆ. ಆದರೆ, ಆಗ ಬಳಕೆ ಮಾಡಿಕೊಂಡಿರಲಿಲ್ಲ. ಈಗ ಕನಕ ಭವನ ನಿರ್ಮಾಣ ಕಾರ್ಯಕ್ಕೆ ನನ್ನ ಅನುದಾನದಿಂದ 10 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ಜತೆ ಮಾತನಾಡಿ ಸಾಧ್ಯವಾದಷ್ಟು ಹೆಚ್ಚು ಅನುದಾನ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕ ಗುರುಪೀಠದ ಮುಖ್ಯ ಆಡಳಿತಾ ಧಿಕಾರಿ, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್‌.ಶ್ರೀರಾಮ್‌, ಪ್ರಧಾನ ಕಾರ್ಯದರ್ಶಿ ಬಿ.ಎಚ್‌.ಗೌಡ್ರು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಗನ್ನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next