Advertisement

ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಚಿಂತಿಸಿ: ಶಿಮುಶ

01:32 PM Aug 03, 2019 | Naveen |

ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆಯಾಗದೇ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಜನ ಪ್ರತಿನಿಧಿಗಳು ಮೋಡ ಬಿತ್ತನೆಗೆ ಗಂಭೀರ ಚಿಂತನೆ ಮಾಡಬೇಕು ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಒತ್ತಾಯಿಸಿದರು.

Advertisement

ಶ್ರಾವಣ ಮಾಸದ ಅಂಗವಾಗಿ ಶ್ರೀಮಠದಿಂದ ಹೊಳಲ್ಕೆರೆ ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಕಲ್ಯಾಣ ದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸತತ ನಾಲ್ಕು ವರ್ಷಗಳಿಂದ ಜಿಲ್ಲೆಗೆ ಮಳೆ ಆಗಿಲ್ಲ. ಈ ವರ್ಷ ಇದು ಇನ್ನೂ ತೀವ್ರವಾಗಿದ್ದು, ಹಲವು ಹಳ್ಳಿಗಳಲ್ಲಿ ಜನ ಕುಡಿಯುವ ನೀರಿಗೂ ತತ್ವಾರ ಪಡುತ್ತಿದ್ದಾರೆ. ಜಾನುವಾರುಗಳ ಮೇವು, ನೀರಿಗೂ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಮೋಡ ಬಿತ್ತನೆ ಮಾಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಶ್ರಾವಣ ಮಾಸದ ಅಂಗವಾಗಿ ಮಠದಿಂದ ಈ ತಿಂಗಳು ಪೂರ್ತಿ ಕಲ್ಯಾಣ ದರ್ಶನ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದೊಂದು ಹೊಸ ಪ್ರಯೋಗ. ಶರಣರು ಹಳ್ಳಿಗಳಿಗೆ ಬಂದು ಬಸವಣ್ಣನವರ ವಿಚಾರಗಳನ್ನು ಪ್ರಚಾರ ಮಾಡಿದಂತೆಯೇ ವಿದೇಶಗಳಲ್ಲೂ ಇದೇ ರೀತಿಯ ಕಾರ್ಯಕ್ರಮ ಮಾಡಿದ್ದೇವೆ. ದುಬೈ, ಬಾಲಿಯಂತಹ ದೇಶಗಳಲ್ಲಿ ಬಸವಣ್ಣನ ಪುತ್ಥಳಿ ಮಾಡಲು ಅಲ್ಲಿನ ಆಡಳಿತ ವ್ಯವಸ್ಥೆ ಆಸಕ್ತಿ ತೋರಿದೆ ಎಂದರು.

ಜನರೇ ನಮಗೆ ದೇವರಿದ್ದಂತೆ. ಬೇರೆ ದೇವರ ಬಳಿಗೆ ನಾವು ಹೋಗುವುದಿಲ್ಲ. ಮಠಕ್ಕೆ ಬರುವ ಜನರನ್ನು ಹೆಚ್ಚು ಕಾಯಿಸದೇ, ಅವರಿಗೆ ಪ್ರಸಾದ, ವಸತಿ ವ್ಯವಸ್ಥೆ ಮಾಡುವುದು ನಮ್ಮ ಪರಂಪರೆ. ಕಲ್ಯಾಣ ದರ್ಶನದ ಮೂಲಕ ಜನರ ಕಲ್ಯಾಣ, ಲೋಕ ಕಲ್ಯಾಣ ಆಗಬೇಕು. ಇದು ಒಂದು ದಿನದ ಕಾರ್ಯಕ್ರಮ ಅಲ್ಲ. ಪ್ರತಿ ಕ್ಷಣವೂ ನಮ್ಮನ್ನು ನಾವು ಉದ್ಧಾರ ಮಾಡಿಕೊಳ್ಳುವುದು ಕಲ್ಯಾಣ ಎಂದು ಹೇಳಿದರು.

Advertisement

ರಾವಂದೂರು ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಮಳೆ ಕಡಿಮೆಯಾಗುತ್ತಿದೆ. ಜನತೆ ಪ್ರತಿ ಜಮೀನಿನಲ್ಲೂ ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು ಎಂದರು.

ಶ್ರೀಮಂತರು ಅದ್ಧೂರಿ ಮದುವೆ ಮಾಡುವುದನ್ನು ನೋಡಿ ಬಡವರು ಕೂಡಾ ಹಾಗೆಯೇ ಮದುವೆ ಮಾಡಿ ಕೈ ಸುಟ್ಟುಕೊಳ್ಳಬೇಡಿ. ನಿಮ್ಮ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಮದುವೆ ಮಾಡಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಮಾತನಾಡಿ, ಕಲ್ಯಾಣ ದರ್ಶನ ಒಂದು ಮಾದರಿ ಕಾರ್ಯಕ್ರಮವಾಗಿದೆ. ಮುರುಘಾ ಶರಣರು ಸದಾ ಕ್ರಿಯಾಶೀಲರಾಗಿ ಹೊಸ ಹೊಸ ಪ್ರಯೋಗ ಮಾಡುತ್ತಿರುತ್ತಾರೆ. ಒಂದಿಲ್ಲೊಂದು ಹೊಸ ಯೋಚನೆ ಮಾಡುವ ಮೂಲಕ ಜನರಲ್ಲಿ ಬದಲಾವಣೆ ತರುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮಧುರೆ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮನಾಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿಕ್ಷಕಿ ಶೋಭಾ ಅನ್ನದಾತನ ಹಾಡುಪಾಡು ಕುರಿತಂತೆ ಉಪನ್ಯಾಸ ನೀಡಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ದವೀರಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಬಿ.ರಾಜಶೇಖರಪ್ಪ, ತಾಪಂ ಸದಸ್ಯ ಅಜಯ್‌, ವಕೀಲ ಪರಮೇಶ್ವರಪ್ಪ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next