Advertisement

ಸಮಾನತೆಯೇ ಬಸವ ಧರ್ಮದ ಧ್ಯೇಯ

12:05 PM Aug 05, 2019 | Naveen |

ಚಿತ್ರದುರ್ಗ: ಜಗತ್ತಿನ ಎಲ್ಲರನ್ನೂ ಒಂದೇ ಎಂದು ನೋಡಿದ ಧರ್ಮ ಬಸವ ಧರ್ಮ ಹಾಗೂ ಲಿಂಗಾಯತ ಧರ್ಮ ಎಂದು ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಶ್ರಾವಣ ಮಾಸದ ಅಂಗವಾಗಿ ಮುರುಘಾ ಮಠದ ಬಸವ ಕೇಂದ್ರದ ವತಿಯಿಂದ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಜಾತಿ-ಜಾತಿಗಳನ್ನು ಬೆಸೆದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ನಾವೆಲ್ಲಾ ಒಂದೇ ಜಾತಿಗೆ ಸೇರಿದವರು. ಸಮಾಜ ಎನ್ನುವ ಭೂಮಿಯಲ್ಲಿ ಆಗಾಗ ಕಂದಕಗಳು ಉಂಟಾಗುತ್ತಿರುತ್ತವೆ. ಮಾನವ ಸಮಾಜದಲ್ಲಿ ಬರುವ ಈ ಅಸಮಾನತೆ ಎನ್ನುವ ಕಂದಕವನ್ನು ಮುಚ್ಚಲು ಬುದ್ಧ, ಬಸವ, ಪೈಗಂಬರ್‌, ಏಸು ಮೊದಲಾದ ದಾರ್ಶನಿಕರು ಬಂದು ಹೋಗಿದ್ದಾರೆ ಎಂದರು.

ಸಮಾನತೆಗೆ ಸುದೀರ್ಘ‌ವಾದ ಇತಿಹಾಸವಿದೆ. ಬಸವಾದಿ ಶರಣರು ಸಮ ಸಮಾಜವನ್ನು ಕಟ್ಟಿ ಕೊಟ್ಟು ಹೋದರು. ಜಗತ್ತಿನ ಎಲ್ಲರನ್ನೂ ನಮ್ಮವರೇ ಎಂದು ಕರೆದರು. ಸತ್ಯದ ಹಾದಿಯಲ್ಲಿ ನಡೆದರು ಎಂದು ಸ್ಮರಿಸಿದರು.

ನೂರಾರು ವರ್ಷಗಳ ಹಿಂದೆ ಲೋಕದೊಳಲು ಗ್ರಾಮದಲ್ಲಿ ಚಾರ್ವಾಕರಿದ್ದರು. ಚಾರ್ವಾಕರು ಎಂದರೆ ನಾಸ್ತಿಕರು. ಇದೇ ಕಾರಣಕ್ಕೆ ಈ ಊರಿಗೆ ಲೋಕದೊಳಲು ಎಂಬ ಹೆಸರು ಬಂದಿದೆ. ಲೋಕದೊಳಲು ಎಂದರೆ ಲೋಕಾಯತ ಪೊಳಲು ಎಂದರ್ಥ ಎಂದರು.

Advertisement

‘ಸಮ ಸಮಾಜದ ಸ್ಥಾಪನೆ’ ಕುರಿತು ವಿಷಯಾವಲೋಕನ ಮಾಡಿದ ಹೊಳಲ್ಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ಎಸ್‌. ನಾಗರಾಜ ರಾವ್‌, ಸಮಾಜ ನಮ್ಮ ಸುತ್ತಲೂ ಇದೆ. ಈ ಹಿಂದೆ ವರ್ಣಾಶ್ರಮಗಳಿದ್ದವು. ಬಳಿಕ ಅದು ಬದಲಾವಣೆ ಪಡೆದುಕೊಂಡಿದೆ ಎಂದು ತಿಳಿಸಿದರು.

ಜಾತಿಗಳ ಸೃಷ್ಟಿ ಅವರವರು ನಿಭಾಯಿಸುವ ಕೆಲಸಗಳ ಮೇಲೆ ಆಗಿದೆ. ಆದರೆ ವ್ಯವಸ್ಥೆಯೊಳಗೆ ಪ್ರಬಲರು ಪ್ರಬಲರಾಗುತ್ತಲೇ ಹೋದರು. ಬಡವರು ಬಡವರಾಗುತ್ತಲೇ ಹೋಗುತ್ತಿದ್ದಾರೆ. ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಸಮಾನತೆ ಸಾರಿದ್ದರು. ಆದರೆ ರಾಜಕಾರಣಿಗಳು ಓಟಿಗಾಗಿ ಜಾತಿ-ಜಾತಿಗಳನ್ನು ಎತ್ತಿ ಕಟ್ಟಿದರು ಎಂದು ವಿಷಾದಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಎಲ್.ಬಿ. ರಾಜಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಲೋಕದೊಳಲು ಗ್ರಾಮಕ್ಕೂ ಮುರುಘಾ ಮಠಕ್ಕೂ ಅವಿನಾಭಾವ ಸಂಬಂಧ ಇದೆ ಎಂದರು.

ಮುಖಂಡರಾದ ಮುರುಗೇಶ್‌, ಕೆ.ಸಿ. ರಮೇಶ್‌, ರಾಮಣ್ಣ ಉಪಸ್ಥಿತರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಎಲ್.ಕೆ. ಶಿವಕುಮಾರ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next