ಚಿತ್ರದುರ್ಗ: ಕಳೆದ ಆರ್ಥಿಕ ವರ್ಷದಲ್ಲಿ ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಗಳ ಅನುದಾನ ಬಳಕೆಯಾಗದೆ ವಾಪಾಸಾಗಿರುವುದನ್ನು ಪರಿಶೀಲಿಸಿ ಇದಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಎಚ್ಚರಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಸುಮಾರು 25.81 ಕೋಟಿ ರೂ. ಸರ್ಕಾರಕ್ಕೆ ಹೋಗಿದೆ. ಜೊತೆಗೆ ಶಿಕ್ಷಣ, ಆರೋಗ್ಯ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅನುದಾನವೂ ವಾಪಾಸ್ಸು ಹೋಗಿದೆ. ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸುವಂತೆ ಕಳೆದ ಸಭೆಯಲ್ಲೂ ಗಂಭೀರವಾಗಿ ಚರ್ಚಿಸಲಾಗಿತ್ತು. ಆದಾಗ್ಯೂ ದೊಡ್ಡ ಮಟ್ಟದಲ್ಲಿ ಅನುದಾನ ಲ್ಯಾಪ್ಸ್ ಆಗಿದೆ. ಕಳೆದ ಜೂನ್ ತಿಂಗಳಲ್ಲಿ ಕಾಮಗಾರಿಗೆ ಅನುಮೋದನೆ ನೀಡಿದ್ದರೂ ಅನುದಾನ ವಾಪಾಸಾಗಿದೆ. ಇದು ಜಿಲ್ಲೆಗೆ ಆಗಿರುವ ನಷ್ಟ ಎಂದು ಸದಸ್ಯರಾದ ಸೌಭಾಗ್ಯ ಬಸವರಾಜನ್ ಹಾಗೂ ಗುರುಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ವಿವಿಧ ಇಲಾಖೆಗಳಲ್ಲಿ ಹಣ ಅಪವ್ಯಯವಾಗಿರುವ ಅನುದಾನವನ್ನು ವಾಪಸ್ ತರಲು ಮರುಪರಿಶೀಲನೆ ಮಾಡುವಂತೆ ಸದಸ್ಯರಾದ ಕೃಷ್ಣಮೂರ್ತಿ, ಗುರುಮೂರ್ತಿ, ಪ್ರಕಾಶಮೂರ್ತಿ, ಅನಂತ್, ಸೌಭಾಗ್ಯ ಸೇರಿದಂತೆ ಹಲವು ಸದಸ್ಯರು ಅಧ್ಯಕ್ಷರಲ್ಲಿ ಮನವಿ ಮಾಡಿದರು. ಉಪಕಾರ್ಯದರ್ಶಿ ಓಂಕಾರಪ್ಪ ಪ್ರತಿಕ್ರಿಯಿಸಿ, ಸರ್ಕಾರದಿಂದ ಮೇ ತಿಂಗಳಲ್ಲಿ ಪತ್ರ ಬಂದಿದೆ. ಇಡೀ ಜಿಪಂ ಅ ಧೀನದಲ್ಲಿ ಬರುವ ಎಲ್ಲಾ ಇಲಾಖೆಗಳ ಅನುದಾನದ ವಿವರವನ್ನು, ಅನುದಾನ ಸ್ವೀಕಾರ, ಖರ್ಚು, ಎಷ್ಟು ಅಪವ್ಯಯವಾಗಿದೆ ಹಾಗೂ ಇದಕ್ಕೆ ಕಾರಣ ಹಾಗೂ ಕಾರಣಕರ್ತರು ಯಾರು ಇಷ್ಟು ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. 25.81 ಕೋಟಿ ರೂ. ಅನುದಾನ ವಾಪಸ್‌ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮತ್ತೂಮ್ಮೆ ಸರ್ಕಾರಕ್ಕೆ ಪತ್ರ ಬರೆಯಲಾವುದು ಎಂದು ಹೇಳಿದರು.
ಸದಸ್ಯ ನಾಗೇಂದ್ರ ನಾಯ್ಕ ಮಾತನಾಡಿ, ವಿವಿ ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇಲ್ಲಿ ಆ್ಯಂಬುಲೆನ್ಸ್ ಸೌಲಭ್ಯವಿಲ್ಲ. ಆ್ಯಂಬುಲೆನ್ಸ್ ರಿಪೇರಿ ಮಾಡಲು ಒಂದೂವರೆ ವರ್ಷ ಬೇಕಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ| ಪಾಲಾಕ್ಷ, ಒಂದು ವಾರದಲ್ಲಿ ಆ್ಯಂಬುಲೆನ್ಸ್ ರಿಪೇರಿಯಾಗಲಿದೆ ಎಂದು ಮಾಹಿತಿ ನೀಡಿದರು.ಅಧಿಕಾರಿಗಳಿಗೆ ಸರ್ಕಾರದಿಂದ ಸಿಮ್ ಹಾಗೂ ಮೊಬೈಲ್ ನೀಡಲಾಗಿದೆ. ಆದರೆ ಯಾವ ಅಧಿಕಾರಿಗಳೂ ಮೊಬೈಲ್ ಆನ್‌ನಲ್ಲಿ ಇಟ್ಟಿರುವುದಿಲ್ಲ. ಯಾವಾಗಲೂ ಸ್ವೀಪ್ ಮಾಡಿಕೊಂಡಿರುತ್ತಾರೆ. ಹಾಗಾಗಿ ಸರ್ಕಾರಿ ಅಧಿಕಾರಿಗಳು, ಸರ್ಕಾರ ನೀಡಿರುವ ಮೊಬೈಲ್ ನಂಬರ್ ಬಳಸುವಂತೆ ನಿರ್ಣಯ ಮಂಡಿಸುವಂತೆ ಸದಸ್ಯ ಯೋಗೇಶ್ ಬಾಬು ಒತ್ತಾಯಿಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಸುಶೀಲಮ್ಮ, ಜಿಪಂ ಸಿಇಒ ಟಿ. ಯೋಗೇಶ್ ಸೇರಿದಂತೆ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಗೊಂದಲದ ಗೂಡಾದ ಸಭೆ
ಇದು ಸಾಮಾನ್ಯ ಸಭೆಯೇ ಅಥವಾ ವಿಶೇಷ ಸಭೆಯೇ ಮೊದಲು ತಿಳಿಸಿ ಎಂದು ಸದಸ್ಯೆ ಸೌಭಾಗ್ಯ ಬಸವರಾಜನ್ ಎತ್ತಿದ ಪ್ರಶ್ನೆಗೆ ಜಿಪಂ ಸಭಾಂಗಣ ಗೊಂದಲದ ಗೂಡಾಯಿತು. ಅಧ್ಯಕ್ಷೆ ಶಶಿಕಲಾ ನೀಡಿದ ಸಮಜಾಯಿಷಿಗೆ ತೃಪ್ತರಾಗದ ಸೌಭಾಗ್ಯ, ಅಧಿಕಾರಿಗಳ ಸ್ಪಷ್ಟನೆಗೆ ಒತ್ತಾಯಿಸಿದರು. ಇದು ಆಡಳಿತಾರೂಢ ಪಕ್ಷದ ಸದಸ್ಯರನ್ನು ಕೆರಳಿಸಿತು. ಈ ವಿಚಾರದಲ್ಲಿ ಅಧಿಕಾರಿಗಳು ಮಾಡಿರುವ ಎಡವಟ್ಟಿನ ಬಗ್ಗೆ ಸದಸ್ಯರೂ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಸದಸ್ಯ ಕೃಷ್ಣಮೂರ್ತಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೂ ಪ್ರಯೋಜನ ಆಗಲಿಲ್ಲ.