Advertisement

ಜಿಲ್ಲಾಡಳಿತ ವಿರುದ್ಧ ರೈತರ ಆಕ್ರೋಶ

12:01 PM Jul 20, 2019 | Naveen |

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸಿರುವುದಕ್ಕೆ, ಭದ್ರಾ ಮೇಲ್ದಂಡೆ ಯೋಜನೆ ಅಡಿ ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದಕ್ಕೆ, ಬೆಳೆ ಪರಿಹಾರ, ಇನ್‌ ಪುಟ್ ಸಬ್ಸಿಡಿ, ಬೆಳೆ ವಿಮೆ ನೀಡದೆ ವಿಳಂಬ ಮಾಡುತ್ತಿರುವ ವಿಚಾರಗಳ ವಿರುದ್ಧ ಜಿಲ್ಲಾಡಳಿತದ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

Advertisement

ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಶುಕ್ರವಾರ ಇಲ್ಲಿನ ರೈತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ವಾಸ್ತವವಾಗಿ ಮಳೆಗಾಲ ಆರಂಭವಾಗಿರುವುದರಿಂದ ಅಜ್ಜಂಪುರ ಸಮೀಪದ ಹೆಬ್ಬೂರು ರೈಲ್ವೆ ಕೆಳ ಸೇತುವೆ ಕಾಮಗಾರಿ ವಿಳಂಬವಾಗುತ್ತಿದೆ. ಈ ಮಳೆಗಾಲದಲ್ಲೇ ವಿವಿ ಸಾಗರಕ್ಕೆ ನೀರು ನೀಡುವ ಉದ್ದೇಶದಿಂದ ಪರ್ಯಾಯವಾಗಿ ಪೈಪ್‌ ತರಿಸಲಾಗಿದ್ದು, ಪೈಪ್‌ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಇದಲ್ಲದೆ ಅಜ್ಜನಹೊಳಲು ಗ್ರಾಮದಲ್ಲಿ ರೈತರು ಪರಿಹಾರ ನೀಡಿದ್ದರೂ ಪಡೆಯದೆ ಅಡ್ಡಿ ಮಾಡಿ ಜಮೀನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಗುತ್ತಿಗೆ ಆಧಾರದಲ್ಲಿ ಒಂದಿಷ್ಟು ಜಮೀನು ಪಡೆದಿದ್ದು, ಆ ಜಮೀನಿನ ಮೂಲಕ ಪರ್ಯಾಯ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹಿರಿಯೂರು ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಎಚ್.ಆರ್‌.ತಿಮ್ಮಯ್ಯ ಸಭೆಯ ಗಮನಕ್ಕೆ ತಂದರು. ರೈಲ್ವೆ ಸೇತುವೆ ಬಳಿ ಪೈಪ್‌ಲೈನ್‌ ಅಳವಡಿಸುವ ಕಾರ್ಯ ವೀಕ್ಷಣೆ ಮಾಡಲು ಮತ್ತು ಗುತ್ತಿಗೆ ಜಮೀನಿನಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಲು ರೈತರ ನಿಯೋಗ ಜು.20 ರಂದು ಹೆಬ್ಬೂರು ಮತ್ತು ಅಜ್ಜನಹೊಳಲು ಗ್ರಾಮಕ್ಕೆ ತೆರಳುತ್ತಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್‌ ಮಾತನಾಡಿ, ಜಿಲ್ಲೆಯಲ್ಲಿನ ಮಳೆ, ಬೆಳೆ, ಬರ ಕುರಿತು ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಕೃಷಿಕ ಸಮಾಜದ ನಿರ್ದೇಶಕ ಆಕ್ಷೇಪ ವ್ಯಕ್ತಪಡಿಸಿ, 1966ರಲ್ಲಿ 11 ಸಾವಿರ ಮಿ.ಮೀ ಮಳೆಯಾಗಿದೆ. ಇಂದು 400ಕ್ಕಿಂತ ಕಡಿಮೆ ಮಳೆ ಬೀಳುತ್ತಿದ್ದು ಅದೂ ಕೂಡ ಅಸಮರ್ಪಕ ಮತ್ತು ಅಗತ್ಯವಿಲ್ಲದ ದಿನದಲ್ಲಿ ಒಂದೇ ದಿನ ಧುತ್‌ ಎಂದು ಸುರಿದು ಹೋಗುತ್ತದೆ. ಇದರಿಂದ ರೈತರು ಸಂಪೂರ್ಣ ಬೀದಿಗೆ ಬಿದ್ದು ಸರ್ಕಾರಕ್ಕೆ ಜಿಲ್ಲೆಯ ಮಳೆ, ಬೆಳೆ, ಬರ ಕುರಿತು ಸೂಕ್ತ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಅಡಿಕೆ ಬೆಳೆಯನ್ನು ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಲ್ಲ ಎನ್ನುವ ಮೂಲಕ ಅನ್ಯಾಯ ಮಾಡಲಾಗುತ್ತಿದ್ದು, ಕೂಡಲೇ ಜಿಲ್ಲೆಯ ಸಾಂಪ್ರದಾಯಿಕ ಬೆಳೆ ಎಂದು ಘೋಷಣೆ ಪತ್ರ ನೀಡಬೇಕು ಎಂದು ರೈತ ಮುಖಂಡರು ತಾಕೀತು ಮಾಡಿದರು.

ಎಸ್ಸಿಪಿ, ಟಿಎಸ್ಪಿ ಯೋಜನೆ ಅಡಿ ವಿವಿಧ ಇಲಾಖೆಗಳಿಂದ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದ್ದು ಸಂಪೂರ್ಣ ಕಳಪೆಯಿಂದ ಕೂಡಿದ್ದು, ಸಮಗ್ರ ತನಿಖೆ ಆಗಬೇಕೆಂದು ರೈತ ಮುಖಂಡರು ಒತ್ತಾಯಿಸಿದರು.

Advertisement

ಈ ಹಿಂದೆ ವಿಮೆ ಮಾಡಿಸಿದ ಹಸು, ಎತ್ತುಗಳಿಗೆ ಮಾತ್ರ ಪಶು ಇಲಾಖೆ ಪರಿಹಾರ ನೀಡುತ್ತಿದ್ದು, ಈಗ ವಿಮೆ ಮಾಡಿರದ ಹಸು, ಎತ್ತುಗಳು ಆಕಸ್ಮಿಕವಾಗಿ ಮೃತಪಟ್ಟರೆ ಹತ್ತು ಸಾವಿರ ರೂ.ಪರಿಹಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಪಶು ಇಲಾಖೆ ವೈದ್ಯರು ಮಾಹಿತಿ ನೀಡಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಂ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕಾರ್ಯದರ್ಶಿ ಹಾಗೂ ಕೃಷಿ ಜಂಟಿ ನಿರ್ದೇಶಕ ಸದಾಶಿವಯ್ಯ, ನಿರ್ದೇಶಕರಾದ ಎಚ್.ಆರ್‌.ತಿಮ್ಮಯ್ಯ, ಎನ್‌.ಆರ್‌.ಮಹೇಶ್ವಪ್ಪ, ಹನುಮಂತರೆಡ್ಡಿ, ರೇವಣ್ಣ, ಮೀರಾಸಾಬಿಹಳ್ಳಿ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next