Advertisement

ಮಳೆ ನೀರು ಕೊಯ್ಲು ನಡೆಯಲಿ

12:08 PM Jul 13, 2019 | Naveen |

ಚಿತ್ರದುರ್ಗ: ಜಲಕ್ಷಾಮ ಎದುರಿಸುತ್ತಿರುವ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಮಳೆ ನೀರು ಕೊಯ್ಲು ಮಾಡಬೇಕು. ಜೊತೆಗೆ ನೀರಿನ ಸದ್ಬಳಕೆ, ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಜಲಶಕ್ತಿ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ರವಿಶಂಕರ್‌ ಪ್ರಸಾದ್‌ ತಿಳಿಸಿದರು.

Advertisement

ಹಿರಿಯೂರು ತಾಲೂಕಿನ ಐಮಂಗಲ, ಮೇಟಿಕುರ್ಕೆ ಮುಂತಾದ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ನರೇಗಾ ಹಾಗೂ ವಿವಿಧ ಯೋಜನೆಗಳ ಅಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮೇಟಿಕುರ್ಕೆಯ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಯಂತ್ರದ ಜೊತೆಗೆ ಜನ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ‘ಜಲ ಭದ್ರತೆಗಾಗಿ ಜಲಶಕ್ತಿ ಅಭಿಯಾನ’ ಎಂಬ ಕಾರ್ಯಕ್ರಮ ವನ್ನು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜು. 1 ರಿಂದ ಸೆ. 15 ರವರೆಗೆ ಮೊದಲ ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ನೀರಿನ ತೀವ್ರ ಕೊರತೆ ಕಂಡು ಬಂದಿದ್ದರಿಂದ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ದೇಶದ 257 ಜಿಲ್ಲೆಗಳು, ಅದರಲ್ಲಿ ಕರ್ನಾಟಕ ರಾಜ್ಯದ 53 ತಾಲೂಕುಗಳನ್ನು ಅಂತರ್ಜಲದ ಅತಿಯಾದ ಬಳಕೆಯ ಕಾರಣದಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ತಾಲೂಕುಗಳೆಂದು ಭಾರತ ಸರ್ಕಾರ ಗುರುತಿಸಿದೆ. ಈ ಪೈಕಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಚಳ್ಳಕೆರೆ, ಹಾಗೂ ಚಿತ್ರದುರ್ಗ ತಾಲೂಕುಗಳು ಸೇರಿವೆ ಎಂದರು.

ಜಲ ಮೂಲ, ಪುನರ್‌ ಬಳಕೆ, ಸಂರಕ್ಷಣೆ, ಮಳೆ ನೀರಿನ ಕೊಯ್ಲು, ಕೆರೆ ಕಟ್ಟೆಗಳ ಪುನಶ್ಚೇತನ, ಇಂಗುಗುಂಡಿಗಳ ತಯಾರಿಕೆ, ಜಲಾನಯನ ಅಭಿವೃದ್ಧಿ, ತ್ಯಾಜ್ಯ ನೀರಿನ ಪುನರ್‌ ಬಳಕೆ ಹಾಗೂ ಹಸಿರೀಕರಣದ ಬಗ್ಗೆ ತಳ ಮಟ್ಟದಿಂದ ಅಂದರೆ ಗ್ರಾಮೀಣದಿಂದ ನಗರ, ಪಟ್ಟಣ ಪ್ರದೇಶದವರೆಗೂ ಎಲ್ಲ ಹಂತಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ನೀರಿನ ಸಮಸ್ಯೆ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಅಭಾವ ನಿವಾರಿಸುವ ದಿಸೆಯಲ್ಲಿ ಇದೊಂದು ದೀರ್ಘ‌ಕಾಲಿಕ, ಶಾಶ್ವತ ಪರಿಹಾರ ಹಾಗೂ ಮಾರ್ಗೊಪಾಯ ಕಂಡುಕೊಳ್ಳಬಹುದಾದ ಅಭಿಯಾನವಾಗಿದೆ. ಈ ಕಾರ್ಯಕ್ರಮದ ರೂಪುರೇಷೆಗಳನ್ನು ಈಗಷ್ಟೇ ಯೋಜಿಸಲಾಗುತ್ತಿದ್ದು, ಕ್ಷೇತ್ರ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ ಮಾತನಾಡಿ, ಇಡೀ ಜಿಲ್ಲೆ ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗುತ್ತಿದೆ. ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದಡಿ ರಾಜ್ಯ ಸರ್ಕಾರದ ಜಲಾಮೃತ ಯೋಜನೆಯನ್ನೂ ತೊಡಗಿಸಿಕೊಂಡು ಜಲ ಸಂರಕ್ಷಣೆ ಮತ್ತು ಸದ್ಬಳಕೆಗೆ ಜನ ಜಾಗೃತಿ ಮೂಡಿಸಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನ, ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ, ಹಾಗೂ ಅಗತ್ಯವಿರುವ ನೀರಿನ ಪ್ರಮಾಣ ಕುರಿತು ನಿಖರವಾಗಿ ಅಂಕಿ-ಅಂಶ ಸಂಗ್ರಹಿಸಿ ಜಲ ಬಜೆಟ್ ರೂಪಿಸಲಾಗುವುದು. ನೀರನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡುವುದು ಹಾಗೂ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದರು.

Advertisement

ಜಿಪಂ ಸಿಇಒ ಸಿ.ಸತ್ಯಭಾಮ ಮಾತನಾಡಿ, ಈ ಬಾರಿ ಜಲಾಮೃತ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಮೇಟಿಕುರ್ಕೆ ಕೆರೆಯನ್ನು 2.23 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಯೋಜನೆಯಡಿ ಹೂಳೆತ್ತಿಸಲಾಗಿದೆ. ಮಳೆಯಿಂದಾಗಿ ಮೇಟಿಕುರ್ಕೆ ಕೆರೆಯಲ್ಲಿ ಈ ಬಾರಿ ಹೆಚ್ಚಿನ ನೀರು ಸಂಗ್ರಹಣೆಯಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next