ಚಿತ್ರದುರ್ಗ: ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಹನಗಳ ದರ್ಬಾರ್ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಹಣ ಪೋಲಾಗದಂತೆ ನೋಡಿಕೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
2017ರಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಅಡಿಯಲ್ಲಿ ರಾಜ್ಯದ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಬಾಡಿಗೆ ಆಧಾರದಲ್ಲಿ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಸುತ್ತೋಲೆಯ ಅನ್ವಯ ರಾಜ್ಯದ 58 ನಗರಸಭೆಗಳಿಗೆ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು ಹಾಗೂ ಹೆಚ್ಚುವರಿಯಾಗಿ ಒಂದು ಸೇರಿ 5 ವಾಹನಗಳನ್ನು ತಲಾ 30 ಸಾವಿರದಂತೆ ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ರಾಜ್ಯದ 116 ಪುರಸಭೆಗಳಿಗೆ ತಲಾ 2, 92 ಪಟ್ಟಣ ಪಂಚಾಯಿತಿಗಳಿಗೆ ತಲಾ 1 ಹಾಗೂ 30 ಜಿಲ್ಲಾ ನಗರಾಭಿವೃದ್ಧಿ ಕೋಶಗಳಿಗೆ ತಲಾ 3 ವಾಹನಗಳನ್ನು ಬಾಡಿಗೆಗೆ ಪಡೆಯಲು ಅವಕಾಶವಿದೆ.
ಬಹುತೇಕ ಅಧಿ ಕಾರಿಗಳು ಈ ಸುತ್ತೋಲೆಯನ್ನೇ ಅಸ್ತ್ರ ಮಾಡಿಕೊಂಡು ಆರ್ಥಿಕ ಮಿತಿಗಳಿಲ್ಲದೆ ವಾಹನಗಳನ್ನು ಪಡೆದುಕೊಂಡು ಓಡಾಡುತ್ತಿದ್ದಾರೆ. ಕೆಲವರು ಕಚೇರಿ ಕೆಲಸ ಮುಗಿದ ನಂತರ, ಖಾಸಗಿಯಾಗಿ ಕೇಂದ್ರಸ್ಥಾನದಿಂದ ಹೊರಗೂ ಬಳಸುತ್ತಿದ್ದಾರೆ. ಇನ್ನೂ ಕೆಲ ನಗರಸಭೆ ಕಚೇರಿಗಳ ಬಳಿ ವಾಹನಗಳು ಸುಮ್ಮನೆ ನಿಂತಿರುವುದನ್ನು ಗಮನಿಸಬಹುದು ಎಂದು ನಾರಾಯಣಾಚಾರ್ ತಿಳಿಸಿದ್ದಾರೆ.
ಒಂದು ವಾಹನಕ್ಕೆ ತಿಂಗಳಿಗೆ 30 ಸಾವಿರ ಬಾಡಿಗೆಯಂತೆ ಅಂದಾಜು ಮಾಡಿದರೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಬಳಸುವ ವಾಹನಗಳ ಬಾಡಿಗೆಯ ಮೊತ್ತವೇ ಸರಿ ಸುಮಾರು 2 ಕೋಟಿ ರೂ. ಮೀರಲಿದೆ. ಇದರ ಜತೆಗೆ ಬಿಬಿಎಂಪಿ, ಮಹಾನಗರ ಪಾಲಿಕೆಗಳು ಸೇರಿದರೆ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಸಲು ಹಣ ಇಲ್ಲ ಎನ್ನುವ ಕಾರಣಕ್ಕೆ ವರ್ಷಗಟ್ಟಲೆ ಅಲೆದಾಡಿಸುವುದು ಇದೆ. ಸರ್ಕಾರದಿಂದ ಸಾಕಷ್ಟು ಸುತ್ತೋಲೆ ಆದೇಶಗಳು ಬಂದರೂ ಕ್ಯಾರೇ ಅನ್ನದ ಅಧಿಕಾರಿಗಳು ವಾಹನಗಳ ಬಾಡಿಗೆ ವಿಚಾರದಲ್ಲಿ ಮಾತ್ರ ಸರ್ಕಾರದ ಆದೇಶದನ್ವಯ ಬಾಡಿಗೆ ವಾಹನ ಪಡೆದಿದ್ದೇವೆ ಎಂಬ ಉತ್ತರ ನೀಡುತ್ತಾ ಓಡಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆರ್ಥಿಕ ಹಿತದೃಷ್ಟಿಯಿಂದ ವಾಹನಗಳ ಸಂಖ್ಯೆಯನ್ನು ಇಳಿಸಬೇಕು. ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಮತ್ತೂಮ್ಮೆ ಪರಿಶೀಲಿಸಿ ಸಾಧ್ಯವಾದಷ್ಟು ಕಡಿಮೆ ಮಾಡಲು ಮನವಿ ಮಾಡಿದ್ದಾರೆ.