Advertisement

ನೇತ್ರದಾನ ಮಾಡಲು ವಯಸ್ಸಿನ ಮಿತಿ ಇಲ್ಲ: ಡಾ|ಕೃಷ್ಣಮೂರ್ತಿ

03:37 PM Aug 26, 2019 | Naveen |

ಚಿತ್ರದುರ್ಗ: ನೇತ್ರದಾನ ಮಾಡಲು ವಯಸ್ಸಿನ ಮಿತಿಯಿಲ್ಲ. ಮೃತಪಟ್ಟ 6 ಗಂಟೆಯ ಒಳಗಾಗಿ ನೇತ್ರದಾನ ಮಾಡುವ ಮೂಲಕ ಮತ್ತೂಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ| ಆರ್‌. ಕೃಷ್ಣಮೂರ್ತಿ ಹೇಳಿದರು.

Advertisement

ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ, ಎಸ್‌ಎಲ್ವಿ ಪದವಿಪೂರ್ವ ಕಾಲೇಜು, ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‌, ಬಸವೇಶ್ವರ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಗರದ ಇಂಡಿಯನ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ 34ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಣ್ಣಿನಲ್ಲಿ ಧೂಳು ಬಿದ್ದಾಗ ನಾಟಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವ ಬದಲು ನೇರವಾಗಿ ನೇತ್ರತಜ್ಞರನ್ನು ಸಂಪರ್ಕಿಸಿ ಕಣ್ಣಿನ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

‘ಎ’ ಅನ್ನಾಂಗದ ಕೊರತೆಯಿಂದ ಮಕ್ಕಳು ಅಂಧರಾಗಬಹುದು. ಕುರುಡುತನ ಬಾರದಂತೆ ವಿಟಮಿನ್‌ ‘ಎ’ ದ್ರಾವಣ ನೀಡಲಾಗುವುದು. ಕ್ಯಾರೆಟ್, ಪಪ್ಪಾಯಿ, ಕಿತ್ತಳೆ, ಮೀನು ಮೊಟ್ಟೆ ಇವುಗಳಿಂದ ವಿಟಮಿನ್‌ ದೊರಕುತ್ತದೆ ಎಂದು ಮಾಹಿತಿ ನೀಡಿದರು.

ಡಿವೈಎಸ್ಪಿ ವಿಜಯಕುಮಾರ್‌ ಸಂತೋಷ್‌ ಮಾತನಾಡಿ, ಅನ್ನದಾನದಂತೆ ನೇತ್ರದಾನ ಕೂಡಾ ಪವಿತ್ರವಾದ ಕಾರ್ಯ. ಕನ್ನಡಿಗರ ಆರಾಧ್ಯದೈವ ಡಾ| ರಾಜ್‌ಕುಮಾರ್‌ ನಿಧನರಾದಾಗ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಹಾಗಾಗಿ ಮರಣದ ನಂತರ ಎಲ್ಲರೂ ನೇತ್ರ ದಾನ ಮಾಡುವುದಾಗಿ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಪ್ರಾಧ್ಯಾಪಕ ನಾಗಭೂಷಣ ಮಾತನಾಡಿದರು. ಎಸ್‌ಎಲ್ವಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಬಿ.ಎ. ಕೊಟ್ರೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ಬಸವೇಶ್ವರ ಪುನರ್‌ ಜ್ಯೋತಿ ಐ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಂ.ಪಿ. ಗುರುರಾಜ್‌, ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಎಸ್‌. ಕುಸುಮ ಪ್ರಾರ್ಥಿಸಿದರು. ಉಪನ್ಯಾಸಕ ಹರ್ಷ ಸ್ವಾಗತಿಸಿದರು. ಬಿ.ಎಂ. ಪ್ರಜ್ವಲ್ ನಿರೂಪಿಸಿದರು. ಉಪನ್ಯಾಸಕಿ ರಾಜಲಕ್ಷ್ಮೀ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next