ಚಿತ್ರದುರ್ಗ : “ಹಸಿರು ವಲಯ’ದಲ್ಲಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಕೋವಿಡ್ ಮಹಾಮಾರಿ ಕಾಲಿಟ್ಟಿದೆ. ಕಳೆದ ತಿಂಗಳು ಗುಜರಾತ್‌ನಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದ ಮೂವರಲ್ಲಿ ಹದಿನೈದು ದಿನಗಳ ಅಂತರದಲ್ಲೇ ಮತ್ತೆ ಸೋಂಕು ದೃಢಪಟ್ಟಿದೆ.
ಗುಜರಾತ್‌ನ ಅಹಮದಾಬಾದ್‌ನಿಂದ ಮೇ 5ರಂದು ನಗರಕ್ಕೆ ಆಗಮಿಸಿದ್ದ 15 ಜನ ತಬ್ಲೀಘಿ ಸದಸ್ಯರಲ್ಲಿ ಮೂವರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಏಪ್ರಿಲ್‌ನಲ್ಲಿ ಈ ಮೂವರು ಸೋಂಕು ದೃಢಪಟ್ಟು ಗುಜರಾತಿನಲ್ಲಿ ಹದಿನಾಲ್ಕು ದಿನ ಚಿಕಿತ್ಸೆ ಪಡೆದಿದ್ದು, ಬಳಿಕ ವರದಿ ನೆಗೆಟಿವ್ ಬಂದಿತ್ತು. ಈಗ ಮತ್ತೂಮ್ಮೆ ಸೋಂಕು ತಗುಲಿದೆ ಎಂದು ಜಿಲ್ಲಾಧಿ ಕಾರಿ ವಿನೋತ್ ಪ್ರಿಯಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮೂವರು ಪಿ-751, ಪಿ-752 ಹಾಗೂ ಪಿ-753 ಚಿತ್ರದುರ್ಗ ನಗರದವರೇ ಆಗಿದ್ದು, ಎಲ್ಲರೂ 64 ವರ್ಷದವರಾಗಿದ್ದಾರೆ. ಸೋಂಕಿತರನ್ನು ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಹಮದಾಬಾದ್‌ನ ಜಿನಾತ್‌ಪುರ ತರ್ಕೇಜ್ ಮಸೀದಿಯಲ್ಲಿ ಮಾ. 8ರಂದು ನಡೆದ ಸಮಾವೇಶದಲ್ಲಿ ಭಾಗವಹಿಸಲು ಚಿತ್ರದುರ್ಗದಿಂದ ತೆರಳಿದ್ದರು. ಈ ವೇಳೆ ಲಾಕ್‌ಡೌನ್ ಘೋಷಣೆಯಾದ್ದರಿಂದ ಅಲ್ಲಿಯೇ ಸಿಲುಕಿದ್ದರು ಎಂದರು.
ಅಹಮದಾಬಾದ್‌ನಿಂದ ಚಿತ್ರದುರ್ಗಕ್ಕೆ 33 ಜನ ಆಗಮಿಸಿದ್ದರು. ಈ ಪೈಕಿ 18 ಮಂದಿ ತುಮಕೂರು ಜಿಲ್ಲೆಯವರಾಗಿದ್ದು, ಅದೇ ದಿನ ಅಲ್ಲಿಗೆ ತೆರಳಿದ್ದರು. ಉಳಿದ 15 ಜನ ಚಿತ್ರದುರ್ಗ ನಗರದವರಾಗಿದ್ದು, ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 6 ರಂದು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಮೂವರಿಗೆ ಪಾಸಿಟಿವ್ ಬಂದಿದ್ದು, ಉಳಿದ 12 ಜನರಿಗೆ ನೆಗೆಟಿವ್ ಬಂದಿದೆ. ಮೇ 4 ರಂದು ಗುಜರಾತಿನಿಂದ ಹೊರಟಿದ್ದ ಸೋಂಕಿತರು ಸೂರತ್, ನಾಸಿಕ್, ವಿಜಯಪುರ, ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಿದ್ದರು. ಈ ವೇಳೆ ತಡೆದು ತಪಾಸಣೆ ಮಾಡಲಾಗಿತ್ತು ಎಂದರು.
20 ಅಧಿಕಾರಿಗಳಿಗೆ ಕ್ವಾರಂಟೈನ್: ತಬ್ಲೀಘಿ ಸದಸ್ಯರು ಗುಜರಾತಿನಿಂದ ಆಗಮಿಸಿದ ದಿನ ಬೊಗಳೇರಹಟ್ಟಿ ಚೆಕ್‌ಪೋಸ್ಟ್‌ಗೆ ತೆರಳಿದ್ದ ಜಿಲ್ಲೆಯ ಅ ಧಿಕಾರಿಗಳ ತಂಡ ಪರಿಶೀಲಿಸಿ ತಪಾಸಣೆಗೊಳಪಡಿಸಿತ್ತು. ಈ ವೇಳೆ ಅಲ್ಲಿ ಹಾಜರಿದ್ದವರನ್ನು ಸೋಂಕಿತರ ಪ್ರಥಮ ಸಂಪರ್ಕಿತರು ಎಂದು ಪರಿಗಣಿಸಿ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರಲ್ಲಿ ಡಿಎಚ್‌ಒ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿದ್ದಾರೆ. ಈ ನಡುವೆ ಜಿಲ್ಲೆಗೆ ಆಗಮಿಸಿದವರಲ್ಲಿ ಈ ಹಿಂದೆಯೇ ನಾಲ್ಕು ಜನರಿಗೆ ಏ. 5ರಂದು ಗುಜರಾತಿನಲ್ಲಿ ಪರೀಕ್ಷೆ ನಡೆಸಿದ್ದಾಗ ಕೊರೊನಾ ಪಾಸಿಟಿವ್ ಬಂದಿತ್ತು. ನಂತರ ಚಿಕಿತ್ಸೆ ನೀಡಿ ಏ. 19ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಈ ಹಿಂದೆ ಪಾಸಿಟಿವ್ ಬಂದಿದ್ದವರ ಪೈಕಿಯೇ ಮೂವರಿಗೆ ಈಗ ಮತ್ತೆ ಪಾಸಿಟಿವ್ ವರದಿ ಬಂದಿದೆ ಎಂದರು.
ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಹುಡುಕಾಟ
ಗುಜರಾತ್‌ನಿಂದ ಜಿಲ್ಲೆಗೆ ಆಗಮಿಸಿದ ನಂತರ ಇಲ್ಲಿ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ. ಕೆಲವರ ಕುಟುಂಬದವರು ಊಟ ತಂದು ಕ್ವಾರಂಟೈನ್ ಕೇಂದ್ರದ ಬಳಿ ಇಟ್ಟು ಹೋಗುತ್ತಿದ್ದರು. ಅವರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗುವುದು ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದರು.
ಚಿಕಿತ್ಸೆಗೆ ಪಾಳಿ ಪ್ರಕಾರ ವೈದ್ಯರ ನೇಮಕ
ಸೋಂಕಿತರ ಚಿಕಿತ್ಸೆಗಾಗಿ ಪಾಳಿ ಪ್ರಕಾರ ವೈದ್ಯರನ್ನು ನೇಮಿಸಿದ್ದು, ಚಿಕಿತ್ಸೆ ನೀಡಿದ ನಂತರ ಅವರಿಗೆ ಉಳಿಯಲು ಹೋಟೆಲ್
ಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ. 14 ದಿನ ಚಿಕಿತ್ಸೆ ನೀಡಲಾಗುವುದು. 12ನೇ ದಿನ ಮತ್ತೂಮ್ಮೆ ಪರೀಕ್ಷೆ ಮಾಡಿ ನೆಗೆಟಿವ್ ವರದಿ ಬಂದರೆ ಮನೆಗೆ ಕಳಿಸುತ್ತೇವೆ ಎಂದು ಡಿಎಚ್‌ಒ ಡಾ| ಪಾಲಾಕ್ಷ ತಿಳಿಸಿದರು.