ಚಿತ್ರದುರ್ಗ: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದು ಗಾಂಧಿಧೀಜಿ ಆಶಯವಾಗಿತ್ತು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ನಗರದ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 73ನೇ ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಆ ಮೂಲಕ ಗಾಂಧೀಜಿ ಕನಸು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಅಪ್ರತಿಮ ತ್ಯಾಗ ಮತ್ತು ಬಲಿದಾನದ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಬ್ರಿಟಿಷರ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಲು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಜನ ಸಮುದಾಯವನ್ನು ಜಾಗೃತಗೊಳಿಸಿದರು. ಜನಶಕ್ತಿಯನ್ನು ಸಂಘಟಿಸಿ, ಸ್ವಾತಂತ್ರ್ಯಕ್ಕೆ ಕಾರಣರಾದ ಎಲ್ಲ ಮಹನೀಯರಿಗೂ ನಮನ ಸಲ್ಲಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲೆಯ ಕೊಡುಗೆಯೂ ಪ್ರಮುಖವಾದುದು. ಎಸ್. ನಿಜಲಿಂಗಪ್ಪ, ದುಮ್ಮಿ ಮುರಿಗೆಪ್ಪ, ಗೋವಿಂದ ರೆಡ್ಡಿ, ಕೆ. ಹನುಮಂತಪ್ಪ ಮೊದಲಾದವರ ಪಾತ್ರ ಮರೆಯಲಾಗದು ಎಂದು ಸ್ಮರಿಸಿದರು.
ಚಿತ್ರದುರ್ಗ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದು, ಆರು ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಈಗಾಗಲೆ ಘೋಷಿಸಿದೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಂಸದ ಎ. ನಾರಾಯಣಸ್ವಾಮಿ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ, ಸಿಇಒ ಸತ್ಯಭಾಮ, ಎಸ್ಪಿ ಡಾ| ಕೆ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯ್‌ಕುಮಾರ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ತಹಶೀಲ್ದಾರ್ ಕಾಂತರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಪಂ ಸದಸ್ಯರು ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಬುರುಜಿನರೊಪ್ಪದ ಕೆ.ಎಲ್. ತಿಪ್ಪೇಸ್ವಾಮಿ, ಕೋವೇರಹಟ್ಟಿ ಗೋವಿಂದಪ್ಪ, ಕೂನಬೇವು ಭೀಮಪ್ಪ, ಜಾಫರ್ ಷರೀಫ್, ಮರಡಿಹಳ್ಳಿ ಹನುಮಂತಪ್ಪ ಅವರನ್ನು ಗೌರವಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪುನೀತ್‌ಕುಮಾರ್, ಅನಿಲ್, ದಿವ್ಯಶ್ರೀ, ರಾಕೇಶ್, ಮಾಧುರಿ, ಅಲಿಶಾ ಹಾಗೂ ಚಂದನ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಸರ್ಕಾರಿ ಪಪೂ ಕಾಲೇಜುಗಳಲ್ಲಿ ಅಧ್ಯಯನ ಮಾಡಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. 30 ತಂಡಗಳಿಂದ ಆಕರ್ಷಕ ಕವಾಯತು, ಪಥ ಸಂಚಲನ ನಡೆಯಿತು.