ಚಿತ್ರದುರ್ಗ: ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌ಗಳ 63 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ. ಆದರೆ ಯಾವುದೇ ಪಕ್ಷಗಳಿಗೆ ಮತದಾರ ಸ್ಪಷ್ಟ ಬಹುಮತ ನೀಡಿಲ್ಲ. ಹೀಗಾಗಿ ಅಧಿಕಾರ ಚುಕ್ಕಾಣಿ ಹಿಡಿಯಲು ಮತ್ತೆ ರಾಜಕೀಯ ಶುರುವಾಗಿದೆ.
Advertisement
ಹಿರಿಯೂರು ನಗರಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಸರಳ ಬಹುಮತ ದೊರೆತಿದ್ದರೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌ಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಹಿರಿಯೂರು ನಗರಸಭೆಯ ಚುನಾವಣೆಗೂ ಮುನ್ನವೇ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರಿಂದಾಗಿ ಕಾಂಗ್ರೆಸ್-ಜೆಡಿಎಸ್‌ಗೆ 16 ಸ್ಥಾನಗಳು ದೊರೆತಿವೆ. ಹಾಗಾಗಿ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. 6 ಜನ ಪಕ್ಷೇತರರು ಈಗಾಗಲೇ ಕಾಂಗ್ರೆಸ್ ಸೇರಿದ್ದು, ಜೆಡಿಎಸ್, ಕಾಂಗ್ರೆಸ್, ಪಕ್ಷೇತರರು ಸೇರಿ ಒಟ್ಟು 22 ಸದಸ್ಯರ ಬಲದೊಂದಿಗೆ ಮೈತ್ರಿ ಪಕ್ಷಗಳು ನಗರಸಭೆ ಆಡಳಿತ ನಡೆಸಲಿವೆ. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರ ಮಧ್ಯೆ ಅಧಿಕಾರ ಹಂಚಿಕೆ ಸೂತ್ರ ಏರ್ಪಡಲಿದೆ.
ಮೊಳಕಾಲ್ಮೂರಲ್ಲಿ ಕೈ-ಕಮಲ ಫೈಟ್: ಮೊಳಕಾಲ್ಮೂರು ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳಲ್ಲಿ ಯಾವುದೇ ಪಕ್ಷಕ್ಕೆ ಮತದಾರರು ಸ್ಪಷ್ಟ ಬಹುಮತ ನೀಡಿಲ್ಲ. ಬಿಜೆಪಿ 8 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರಳ ಬಹುಮತಕ್ಕೆ 9 ಸ್ಥಾನಗಳ ಅಗತ್ಯವಿದ್ದು, ಪಕ್ಷೇತರರ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷ 6 ಸ್ಥಾನಗಳೊಂದಿಗೆ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದರೂ ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಕಾಡಲಿದೆ. ಆಗ ಬಿಜೆಪಿ 8, ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರರು ಸೇರಿ 8 ಸದಸ್ಯರಾಗಲಿದ್ದು, ಸಮಬಲದ ಹೋರಾಟ ನಡೆಯಲಿದೆ. ಅಂತಿಮವಾಗಿ ಲಾಟರಿ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿಜೆಪಿಯ ಬಿ. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿರುವುದರಿಂದ ಪಕ್ಷೇತರರಿಬ್ಬರೂ ಬಿಜೆಪಿಯತ್ತ ಹೆಚ್ಚುಒಲವು ತೋರಿದಂತೆ ಕಾಣುತ್ತಿದೆ. ಆದರೂ ಕಾಂಗ್ರೆಸ್ ಮುಖಂಡರು ಅಧಿಕಾರ ಹಿಡಿಯುವ ಪ್ರಯತ್ನ ಕೈಬಿಟ್ಟಿಲ್ಲ. ಪಕ್ಷೇತರ ಸದಸ್ಯರನ್ನು ಸೆಳೆಯಲು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಬಿಜೆಪಿಯ ಶಾಸಕರು ಹಾಗೂ ಸಂಸದರಿದ್ದಾರೆ. ಕಾಂಗ್ರೆಸ್‌ನಿಂದ ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಎಲ್ಲರ ಮತ ಸೇರಿಸಿದರೆ ಆಗಲೂ ತಲಾ 10 ಮತಗಳಾಗಲಿವೆ. ಹಾಗಾಗಿ ಲಾಟರಿ ಮೂಲಕವೇ ಅಂತಿಮ ಆಯ್ಕೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊಳಕಾಲ್ಮೂರು ಪಪಂ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆ ಕ್ಷಣದಲ್ಲಿ ಮುರಿದು ಬಿದ್ದಿತ್ತು. ಜೆಡಿಎಸ್ ಕೇವಲ ಮೂರು ವಾರ್ಡ್‌ಗಳಲ್ಲಿ ಸ್ಪರ್ಧಿಸಿತ್ತಾದರೂ ಒಂದರಲ್ಲೂ ಗೆಲುವು ಸಾಧಿಸಿಲ್ಲ.
ಹೊಳಲ್ಕೆರೆ ಪಪಂನಲ್ಲಿ ಪಕ್ಷೇತರರ ಪ್ರಾಬಲ್ಯ: ಹೊಳಲ್ಕೆರೆ ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಮತದಾರರು 7 ಮಂದಿ ಪಕ್ಷೇತರರನ್ನು ಆಯ್ಕೆ ಮಾಡಿದ್ದಾರೆ. 6 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಕೇವಲ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಪಕ್ಷೇತರರ ನೆರವಿನೊಂದಿಗೆ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ನಡೆಸಿದೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಇಲ್ಲಿ ಮೈತ್ರಿ ಮಾಡಿಕೊಂಡಿದ್ದವು, ಜೆಡಿಎಸ್ ಪಕ್ಷಕ್ಕೆ ಎರಡು ಸ್ಥಾನ ಬಿಟ್ಟು ಕೊಟ್ಟಿದ್ದರೂ ಒಂದರಲ್ಲೂ ಜೆಡಿಎಸ್ ಗೆಲ್ಲದೆ ಸಂಪೂರ್ಣ ನೆಲ ಕಚ್ಚಿದೆ. ಮೂರು ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಪಕ್ಷೇತರರನ್ನು ಸೆಳೆದು ಪಪಂ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದೆ.
ಒಟ್ಟಿನಲ್ಲಿ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೇರಲು ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿವೆ. ಅಂತಿಮವಾಗಿ ಯಾರು ಎಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂಬುದಕ್ಕೆ ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.
ಪಕ್ಷೇತರರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ಅತಂತ್ರ ಸ್ಥಿತಿಯಲ್ಲಿರುವ ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ಪಟ್ಟಣ ಪಂಚಾಯತ್‌ಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಘೋಷಣೆ ಆಗುವ ತನಕ ಪಕ್ಷೇತರರಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮೂರು ಸ್ಥಳೀಯ ಸಂಸ್ಥೆಗಳಲ್ಲೂ ಪಕ್ಷೇತರ ಸದಸ್ಯರದ್ದೇ ಪ್ರಾಬಲ್ಯವಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಬೇಕೆಂದು ಪಟ್ಟು ಹಿಡಿದರೂ ಅಚ್ಚರಿ ಇಲ್ಲ.