Advertisement

ಹೈಟೆಕ್‌ ಕಸಾಯಿಖಾನೆ ಶೀಘ್ರ

12:11 PM Aug 28, 2019 | Naveen |

ಚಿತ್ರದುರ್ಗ: ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ ಕಸಾಯಿಖಾನೆ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಸೂಕ್ತ ಜಾಗ ಗುರುತಿಸಬೇಕು ಎಂದು ಮಾಂಸ ಮಾರಾಟಗಾರರಿಗೆ ಜಿಲ್ಲಾಧಿಕಾರಿ ವಿನೋತ್‌ಪ್ರಿಯಾ ಸೂಚಿಸಿದರು.

Advertisement

ನಗರಸಭೆಯಲ್ಲಿ ಮಂಗಳವಾರ ನಡೆದ ಮಟನ್‌, ಚಿಕನ್‌ ಹಾಗೂ ಮೀನು ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಮಾಂಸ ಮಾರಾಟಗಾರರು ಒಂದೆಡೆ ಕುಳಿತು ಚರ್ಚಿಸಿ ಸೂಕ್ತವಾದ ಜಾಗ ತೋರಿಸಿದರೆ ನಾವು ಹೈಟೆಕ್‌ ಕಸಾಯಿಖಾನೆ ನಿರ್ಮಿಸಿಕೊಡುತ್ತೇವೆ. ಒಂದು ತಿಂಗಳಲ್ಲಿ ಜಾಗ ಗುರುತಿಸಿ ಎಂದರು.

ಕತ್ತರಿಸಿದ ಕುರಿ, ಮೇಕೆ ಮತ್ತಿತರ ಮಾಂಸವನ್ನು ಅದೇ ದಿನ ಮಾರಾಟ ಮಾಡಬೇಕು. ಉಳಿದ ಹಳೆ ಮಾಂಸವನ್ನು ಮರುದಿನ ಮಾರಾಟ ಮಾಡಿದರೆ ಅದನ್ನು ತಿನ್ನುವವರ ದೇಹವನ್ನು ಕ್ರಿಮಿಕೀಟಗಳು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತವೆ ಎಂದು ಎಚ್ಚರಿಸಿದರು.

ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಮಾಂಸ ಖರೀದಿಸಲು ಬರುವವರಿಗೆ ಸ್ಟೀಲ್ ಬಾಕ್ಸ್‌ ತರಲು ಅರಿವು ಮೂಡಿಸಿ. ಕಸಾಯಿಖಾನೆ ಹಾಗೂ ಕೋಳಿ, ಮೀನು ಅಂಗಡಿಗಳಲ್ಲಿನ ತ್ಯಾಜ್ಯಗಳನ್ನು ಹೊರಗೆ ಹಾಕಿ ಪರಿಸರಕ್ಕೆ ಧಕ್ಕೆಯುಂಟು ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌ ಮಾತನಾಡಿ, ಚಿಕನ್‌, ಮಟನ್‌ ಹಾಗೂ ಮೀನು ಅಂಗಡಿಗಳಲ್ಲಿ ಕೆಲಸ ಮಾಡುವವರು ಕೈಗೆ ಗ್ಲೌಸ್‌ ಹಾಕಿಕೊಳ್ಳಬೇಕು. ಶುದ್ಧ ಬಟ್ಟೆ ಧರಿಸಿರಬೇಕು. ಗ್ರಾಹಕರಿಗೆ ಶುದ್ಧ ಮತ್ತು ಗುಣಮಟ್ಟದ ಮಾಂಸ ಮಾರಾಟ ಮಾಡಬೇಕು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆಯ ವಾಹನಗಳಿಗೆ ಹಾಕಬೇಕು ಎಂದು ತಿಳಿ ಹೇಳಿದರು.

Advertisement

ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ರಸ್ತೆ ಬದಿಯಲ್ಲಿ ಚಿಕನ್‌ ಕಬಾಬ್‌ ಮತ್ತು ಲೆಗ್‌ಪೀಸ್‌ಗಳನ್ನು ಸುಡುವುದರಿಂದ ಬರುವ ಹೊಗೆ ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ವಹಿವಾಟುಗಳಿಗೆ ಕಡಿವಾಣ ಹಾಕಲಾಗುವುದು ಎಂದರು.

ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಸರಳಾ, ಭಾರತಿ, ಬಾಬುರೆಡ್ಡಿ, ನಾಗರಾಜು, ಬಸವರಾಜ್‌, ಮಂಜುನಾಥ್‌, ಅಶೋಕ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ರೆಡಿಮೇಡ್‌ ಬಟ್ಟೆ ಅಂಗಡಿಗಳಲ್ಲಿ ಹೊರಗೆ ಡ್ರೆಸ್‌ಗಳನ್ನು ತೂಗು ಹಾಕುವಂತೆ ಮಟನ್‌ ಮತ್ತು ಚಿಕನ್‌ಗಳನ್ನು ರಸ್ತೆ ಬದಿಯಲ್ಲಿ ನೇತು ಹಾಕಿದರೆ ಅಂತಹ ಅಂಗಡಿಗಳನ್ನು ಸೀಸ್‌ ಮಾಡಲಾಗುವುದು.
ಜಾಫರ್‌,
 ನಗರಸಭೆ ಪರಿಸರ ಇಂಜಿನಿಯರ್‌.

Advertisement

Udayavani is now on Telegram. Click here to join our channel and stay updated with the latest news.

Next