Advertisement

ಗುಯಿಲಾಳು ಟೋಲ್‌ ಫಾಜಾದಲ್ಲಿ ಫಾಸ್ಟ್‌ ಟ್ಯಾಗ್‌ ಗುಂಗು

12:46 PM Nov 29, 2019 | Naveen |

„ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಗುಯಿಲಾಳು ಟೋಲ್‌ ಪ್ಲಾಜಾದಲ್ಲಿ ಕಳೆದೊಂದು ತಿಂಗಳಿಂದ ಫಾಸ್ಟ್‌ ಟ್ಯಾಗ್‌ ಮಾತು ಜೋರಾಗಿದೆ. ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಇ-ಟೋಲ್‌ ವ್ಯವಸ್ಥೆಗೆ ಸಾರ್ವಜನಿಕರನ್ನು ಹೊಂದಿಸುವ ಕೆಲಸ ಭರದಿಂದ ನಡೆಯುತ್ತಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಪೂನಾ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4, ಮಹಾರಾಷ್ಟ್ರ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 13 ಹಾಗೂ ಬೀದರ್‌-ಶ್ರೀರಂಗಪಟ್ಟಣ ಸಂಪರ್ಕಿಸುವ ಹೆದ್ದಾರಿ ಮೂರು ಹೆದ್ದಾರಿಗಳು ಹಾದು ಹೋಗಿವೆ. ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಮಾತ್ರ ಹಿರಿಯೂರು ತಾಲೂಕಿನ ಗುಯಿಲಾಳು ಬಳಿ ಟೋಲ್‌ ಪ್ಲಾಜಾ ಕಾರ್ಯ ನಿರ್ವಹಿಸುತ್ತಿದೆ.

Advertisement

ಟೋಲ್‌ಗ‌ಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಬೇಕು, ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಒತ್ತು ನೀಡಬೇಕು ಎಂಬ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆಸುವಾಗಲೇ ಗುಯಿಲಾಳು ಟೋಲ್‌ನಲ್ಲಿ ಪ್ರಾಯೋಗಿಕವಾಗಿ ಫಾಸ್ಟ್‌ ಟ್ಯಾಗ್‌ ಕಾರ್ಯ ನಿರ್ವಹಿಸುತ್ತಿತ್ತು.

ನವೆಂಬರ್‌ನಲ್ಲೇ ಪ್ರಾಯೋಗಿಕ ಜಾರಿ: ದೇಶದ ಎಲ್ಲ ಟೋಲ್‌ ಗಳಲ್ಲಿ ಡಿಸೆಂಬರ್‌ 1 ರಿಂದ ಈ ವ್ಯವಸ್ಥೆ ಜಾರಿಯಾಗುತ್ತಿದೆ. ಆದರೆ ಗುಯಿಲಾಳು ಟೋಲ್‌ನಲ್ಲಿ ನವೆಂಬರ್‌ ತಿಂಗಳಲ್ಲೇ ಫಾಸ್ಟ್‌ ಟ್ಯಾಗ್‌ ಕಾರ್ಯನಿರ್ವಹಣೆ ಆರಂಭವಾಗಿದೆ. ಇಲ್ಲಿರುವ ಆಗಮನ ಹಾಗೂ ನಿರ್ಗಮನದ ಒಟ್ಟು 14 ಪ್ರವೇಶಗಳಲ್ಲಿ ಎರಡೂ ಬದಿಯ ತಲಾ 5 ಮಾರ್ಗಗಳಲ್ಲಿ ಫಾಸ್ಟ್‌ ಟ್ಯಾಗ್‌ ಅಳವಡಿಸಲಾಗಿದೆ. ಉಳಿದ ತಲಾ ಒಂದರಲ್ಲಿ ಕ್ಯಾಶ್‌ ನೀಡಿ ತೆರಳಲು ಅವಕಾಶವಿದೆ.

ಕಳೆದ ಎರಡು ವರ್ಷಗಳಿಂದ ಈ ಟೋಲ್‌ನಲ್ಲಿ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆ ಇತ್ತು. ಒಂದು ಕಡೆ ಪ್ರವೇಶಿಸುವ 6 ಮಾರ್ಗಗಳ ಪೈಕಿ ಐದರಲ್ಲಿ ಹಣ ನೀಡಿ ಹೋಗುತ್ತಿದ್ದರೆ ಒಂದು ಮಾರ್ಗದಲ್ಲಿ ಮಾತ್ರ ಫಾಸ್ಟ್‌ ಟ್ಯಾಗ್‌ ಅಳವಡಿಸಿರುವ ವಾಹನಗಳಿಗೆ ಅವಕಾಶವಿತ್ತು. ಈಗ ಸಂಪೂರ್ಣ ಬದಲಾಗಿದ್ದು, ಹಣ ನೀಡುವವರಿಗೆ ಒಂದು ಕಡೆ ಮಾತ್ರ ದಾರಿ ಇದೆ.

ಶೇ.26 ರಷ್ಟು ಫಾಸ್ಟ್‌ ಟ್ಯಾಗ್‌ ಅಳವಡಿಕೆ: ಗುಯಿಲಾಳು ಟೋಲ್‌ ಮೂಲಕ ಪ್ರತಿ ದಿನ ಸರಾಸರಿ 30 ಸಾವಿರ ವಾಹನಗಳು ಸಂಚರಿಸುತ್ತಿದ್ದು, ಇದರಲ್ಲಿ ಈಗಾಗಲೇ ಶೇ. 26 ರಷ್ಟು ವಾಹನಗಳು ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಂಡಿವೆ. ಇನ್ನುಳಿದ ವಾಹನಗಳಿಗೆ ಡಿಸೆಂಬರ್‌ 1 ರವರೆಗೆ ಅವಕಾಶ ನೀಡಲಾಗಿದ್ದು, ಅಗತ್ಯ ದಾಖಲೆ ಸಲ್ಲಿಸಿ ಬ್ಯಾಂಕು ಮತ್ತಿತರೆಡೆ ಖಾತೆ ತೆರೆದು ಫಾಸ್ಟ್‌ ಟ್ಯಾಗ್‌ ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Advertisement

ಹೊಸದಾಗಿ ಖರೀದಿಸುವ ವಾಹನಗಳಿಗೆ ಶೋರೂಂಗಳಿಂದಲೇ ಫಾಸ್ಟ್‌ ಟ್ಯಾಗ್‌ ಅಳವಡಿಸಿ ಮಾಲಿಕರಿಗೆ ಹಸ್ತಾಂತರಿಸಲಾಗುತ್ತಿದೆ. ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ಒತ್ತು ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಟ್ಯಾಗ್‌ ಹಾಕಿಸಿಕೊಳ್ಳಲು ಕಾಲಾವಕಾಶ ನೀಡಿದೆ. ಆದರೆ ಡಿಸೆಂಬರ್‌ 1 ರಿಂದ ಫಾಸ್ಟ್‌ ಟ್ಯಾಗ್‌ ಇಲ್ಲದ ವಾಹನಗಳು ಸಂಚರಿಸಲು ಒಂದು ಮಾರ್ಗದಲ್ಲಿ ಮಾತ್ರ ಅವಕಾಶ ಕಲ್ಪಿಸಿದ್ದು, ಇದರಲ್ಲಿ ಕ್ಯೂ ನಿಲ್ಲಬೇಕಾಗುವ ಲಕ್ಷಣಗಳು ಕಾಣಿಸುತ್ತಿವೆ. ಫಾಸ್ಟ್‌ ಟ್ಯಾಗ್‌ ಅಳವಡಿಸಿರುವ ವಾಹನಗಳಿಗಿಂತ ಟ್ಯಾಗ್‌ ಇಲ್ಲದ ವಾಹನಗಳಿಗೆ ದುಬಾರಿ ಹಣ ಕಟ್ಟಬೇಕಾದ ಸಂದರ್ಭ ಬರುತ್ತದೆ ಎಂದು ಸರ್ಕಾರ ಎಚ್ಚರಿಸಿದೆ. ಹಣ ಹಾಗೂ ಸಮಯ ಎರಡೂ ಕೂಡ ದುಬಾರಿಯಾಗುವುದರಿಂದ ವಾಹನ ಮಾಲೀಕರು ಈಗ ಫಾಸ್ಟ್‌ ಟ್ಯಾಗ್‌ ಹಾಕಿಕೊಳ್ಳುವ ಅನಿವಾರ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next